ಕೋಟಗೆ ಉಡುಪಿ ಉಸ್ತುವಾರಿ ತಪ್ಪಿಸಿದ ಐವರು ಶಾಸಕರು:ಬಿಲ್ಲವ ಪರಿಷತ್ತು
ಉಡುಪಿ: ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಿಗದಂತೆ ಇಲ್ಲಿನ ಎಲ್ಲಾ ಐದು ಶಾಸಕರು ಪಕ್ಷದ ನಾಯಕರಿಗೆ ಪತ್ರ ಬರೆದು ಒತ್ತಡ ತಂದಿದ್ದರು ಎಂಬುದರ ಬಗ್ಗೆ ಗುಮಾನಿ ಕೇಳಿ ಬರುತ್ತಿದೆ ಎಂದು ಮಾಜಿ ನಗರಸಭಾ ಅಧ್ಯಕ್ಷ, ಬಿಲ್ಲವ ಮುಖಂಡ ಕಿರಣ್ ಕುಮಾರ್ ಹೇಳಿದರು. ನಾವು ಯಾರ ಮೇಲು ಆರೋಪ ಮಾಡುತ್ತಿಲ್ಲ, ಇದು ನಿಜವೇ ಆಗಿದ್ದಲ್ಲಿ ಈ ಬಗ್ಗೆ ಸ್ಪಷ್ಟನೆ ಬೇಕು, ಇದು ನಿಜವಾಗದಿದ್ದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಕೋಟ ಅವರಿಗೆ ಉಸ್ತುವಾರಿ ಸ್ಥಾನ ನೀಡಲು ಪಕ್ಷದ ಹಿರಿಯ ನಾಯಕರಲ್ಲಿ ಒತ್ತಾಯಿಸಬೇಕು ಎಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಬಿಲ್ಲವ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಉಡುಪಿ ಜಿಲ್ಲೆಯ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ತವರು ಜಿಲ್ಲೆಯ ಆದ್ಯತೆ ಮೇರೆಗೆ ಕೋಟ ಶ್ರೀನಿವಾಸ್ ಉಡುಪಿ ಜಿಲ್ಲೆ ಉಸ್ತುವಾರಿಯಾಗಲು ಅರ್ಹರಿದ್ದಾರೆ. ಉಡುಪಿ ಜಿಲ್ಲೆಗೆ ಅವರನ್ನೆ ಉಸ್ತುವಾರಿ ಸಚಿವರನ್ನಾಗಿಸಬೇಕು ಎಂದು ಬಿಲ್ಲವ ಪರಿಷತ್ ಒತ್ತಾಯಿಸಿದೆ. ಮಂಗಳವಾರ ಬಿಲ್ಲವ ಪರಿಷತ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಯುವ ವೇದಿಕೆ ಗೌರವಧ್ಯಕ್ಷ ಅಚ್ಯುತ್ ಅಮಿನ್ ಕಲ್ಮಾಡಿ ಮಾತನಾಡಿದರು.
ಕೋಟ ಶ್ರೀನಿವಾಸ್ ಪೂಜಾರಿ ಅವರು ಯಾವುದೇ ಲಾಭಿ ಮಾಡದೆ ಸಚಿವಸ್ಥಾನ ಪಡೆದಿದ್ದಾರೆ. ಉಸ್ತುವಾರಿ ಜವಾಬ್ದಾರಿ ನೀಡುವಾಗ ಆಯ ಜಿಲ್ಲೆಯವರನ್ನೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕೋಟ ಅವರಿಗೆ ದ.ಕ ಜಿಲ್ಲೆ ಉಸ್ತುವಾರಿ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿಲ್ಲವರ ಓಟ್ ಬ್ಯಾಂಕ್ ಮಾಡಿಕೊಂಡ ಜನಪ್ರತಿನಿಧಿಗಳು ಈ ವಿಷಯದಲ್ಲಿ ಯಾಕೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊರ ಜಿಲ್ಲೆಯವರನ್ನು ಉಸ್ತುವಾರಿಯಾಗಿಸುವ ಬದಲು ಉಡುಪಿ, ದ.ಕ ಎರಡು ಜಿಲ್ಲೆಗಳಿಗೆ ಕೋಟ ಅವರನ್ನೆ ಉಸ್ತುವಾರಿ ಮಾಡಬಹುದಿತ್ತು. ಇಲ್ಲಿ ಸ್ಪಷ್ಟವಾಗಿ ಬಿಲ್ಲವ ಸಮುದಾಯವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಸಮುದಾಯದಲ್ಲಿ ಯಾರು ಮಾತನಾಡುವರಿಲ್ಲ, ಕೇಳುವರಿಲ್ಲ ಎಂದು ಕೊಂಡಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೂ ಮಂತ್ರಿಗಿರಿ ಕಿತ್ತುಕೊಳ್ಳುವ ಮೂಲಕ ಇದೇ ರೀತಿಯ ಅನ್ಯಾಯಾ ಮಾಡಲಾಗಿತ್ತು ಎಂದು ಅಪಾದಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಸಕರಿಗೆ ಯಾರಿಗಾದರು ಸಚಿವ ಸ್ಥಾನ ಸಿಕ್ಕಲ್ಲಿ ಅವರಿಗೆ ಉಸ್ತುವಾರಿ ನೀಡಲಿ, ಅಲ್ಲಿವರೆಗೂ ಕೋಟ ಅವರಿಗೆ ಜಿಲ್ಲೆಯ ಉಸ್ತುವಾರಿ ಇರಲಿ ಎಂದು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮವಾಗದಿದ್ದಲ್ಲಿ ಸೆ.೧೯ ರಂದು ಸಮುದಾಯದ ಮುಖಂಡರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಬಿಲ್ಲವ ಪರಿಷತ್ತು ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ,ಬಿ.ಎನ್. ಶಂಕರ ಪೂಜಾರಿ,ಪ್ರವೀಣ್ ಪೂಜಾರಿ, ಸುಧಾಕರ್ ಪೂಜಾರಿ ಉಪಸ್ಥಿತರಿದ್ದರು.