ಟ್ರೆಕ್ಕಿಂಗ್ ವೇಳೆ ನಾಪತ್ತೆಯದಾತನ ಉಳಿಸಿದ ಕುಕ್ಕೆ ದೇವರ ತೀರ್ಥ!

ಸುಬ್ರಹ್ಮಣ್ಯ: ಬೆಂಗಳೂರಿನಿಂದ ಚಾರಣಕ್ಕಾಗಿ ಮಡಿಕೇರಿ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ  12 ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಯುವಕ ಒಂದೂವರೆ ದಿನಗಳ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಹೀಗೆ ಯುವಕ ಸುರಕ್ಷಿತವಾಗಿ ಕುಕ್ಕೆಗೆ ಸೇರುವಂತೆ ಮಾಡಿದ್ದು ದೇವರ ತೀರ್ಥದ ಪೈಪ್ .

ಬೆಂಗಳೂರಿನ ಗಾಯತ್ರಿ ನಗರ ನಿವಾಸಿಯಾದ ಸಂತೋಷ್ ಇಂದು ಕುಕ್ಕೆ ತಲುಪಿದ್ದಾನೆ. ದೇವಾಲಯದ ಸಮೀಪದ ಆದಿ ಸುಬ್ರಹ್ಮಣ್ಯದ ಬಳಿ ಕಲ್ಲಗುಡ್ಡೆಯಲ್ಲಿ ಸಂತೋಷ್ ಪತ್ತೆಯಾಗಿದ್ದಾನೆ. 

ಶನಿವಾರ ಬೆಂಗಳೂರಿನಿಂದ ಹನ್ನೆರಡು ಮಂದಿ ಯುವಕರು ಕುಮಾರ ಪರ್ವತಕ್ಕಾಗಿ ಚಾರಣ ಹೊರಟಿದ್ದರು.ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಕ್ಕೆ ಸುಬ್ರಮಣ್ಯ ಆಗಮಿಸಿದ ಗುಂಪು ಸುಬ್ರಮಣ್ಯದ ಗಿರಿಗದ್ದೆಯಿಂದ ಕುಮಾರಪರ್ವತದ ಮೂಲಕ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಶೇಷ ಪರ್ವತ ತಲುಪಿ ಅಲ್ಲಿಂದ ಮತ್ತೆ ಗಿರಿಗದ್ದೆಗೆ ಹಿಂದಿರುಗಿದ್ದಾರೆ. ಮತ್ತೆ ಅಲ್ಲಿ ಊಟ ಮುಗಿಸಿ ಆರು ಜನರ ಎರಡು ತಂಡವಾಗಿ ಪ್ರಯಾಣಿಸಿದಾಗ ಸಂತೋಷ್ ತಮ್ಮ ತಂಡದಿಂದ ಕಾಣೆಯಾಗಿದ್ದನು.

ಪರ್ವತ ಇಳಿಯುತ್ತಿರಬೇಕಾದರೆ ಭಾನುವಾರ ಸಂತೋಷ್ ತಮ್ಮ ಸ್ನೇಹಿತರಿಂದ ಬೇರ್ಪಟ್ಟಿದ್ದು ನಾಪತ್ತೆಯಾಗಿದ್ದರು. ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಸುಬ್ರಹ್ಮಣ್ಯ ಪೋಲೀಸರಲ್ಲಿ ದೂರು ಸಲ್ಲಿಸಿದ್ದು ಸೋಮವಾರದಿಂದ ಸಂತೋಷ್ ಗಾಗಿ ಶೋಧ ಕಾರ್ಯಾಚರಣೆ ನಡೆದಿತ್ತು.

ಇತ್ತ ಸಂತೋಷ್ ಭಾನುವಾರ ತಾನು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿ ಕಂಗಾಲಾಗಿದ್ದರು. ಅಂದಿನ ರಾತ್ರಿಯನ್ನು ಪರ್ವತ ಪ್ರದೇಶದಲ್ಲೇ ಕಳೆದ ಸಂತೋಷ್ ಸೋಮವಾರವೂ ಸಹ ಕಾಡು, ಗುಡ್ಡ ಅಲೆದಾಡುತ್ತಾ ಬರುತ್ತಿದ್ದರು. ಆಗ ಅವರಿಗೊಂದು ನೀರಿನ ಪೈಪ್ ಕಾಣಿಸಿದೆ. ಇದರಿಂದ ಉಲ್ಲಸಿತರಾದ ಸಂತೋಷ್ ಈ ಪೈಪ್ ಲೈನ್ ಗ್ರಾಮ ಅಥವಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಿರಬಹುದು ಎಂದು ಭಾವಿಸಿ ಅದೇ ಪೈಪ್ ನ ಹಾದಿಗುಂಟ ಬಂದಿದ್ದಾರೆ.ಆ ಪೈಪ್ ಲೈನ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಹೊಂದಿದ್ದು ಮಂಗಳವಾರ ಮಧ್ಯಾಹ್ನದ ವೇಳೆ ಸಂತೋಷ್ ಕುಕ್ಕೆ ತಲುಪಿದ್ದಾರೆ.

ವಿಶೇಷವೆಂದರೆ ಬೆಟ್ಟದ ಮೇಲಿನ ಶುದ್ದ ನೀರನ್ನು ದೇವರ ಪೂಜೆಗೆ ತರಲು ಈ ಪೈಪ್ ಲೈನ್ ಅಳವಡಿಸಲಾಗಿದೆ.ಬೇಸಿಗೆಯಲ್ಲಿ ಬೇರೆ ನೀರಿನ ಮೂಲಗಳು ಬತ್ತಿದ ವೇಳೆ ಇದೇ ನೀರನ್ನು ದೇವರ ತೀರ್ಥ ಹಾಗೂ ಇತರೆ ಪೂಜಾವಿಧಿಗಳಿಗೆ ಬಳಸಲಾಗುತ್ತದೆ. ಇದೇ ಪೈಪ್ ಲೈನ್ ಇಂದು ಸಂತೋಷ್ ನನ್ನು ಕಾಪಾಡಿದೆ. 

Leave a Reply

Your email address will not be published. Required fields are marked *

error: Content is protected !!