ಆರೋಗ್ಯದ ಕೀಲಿಕೈ ಎಲ್ಲಿದೆ …?

ಲೇಖಕರು – ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ,

ಲಾಭಾನಾಮ್ ಶ್ರೇಯಃ ಆರೋಗ್ಯಮ್…ಎಲ್ಲ ಲಾಭಗಳಿಗಿಂತ ಆರೋಗ್ಯ ಸಂಪಾದನೆಯೇ ಉತ್ತಮ ಲಾಭ ಬದುಕಿನಲ್ಲಿ ಎನ್ನುವ ವಾಸ್ತವ ಈಗೀಗ ಅರಿವಾಗತೊಡಗಿದೆ.

ಪ್ರಸ್ತುತ ಸಂದರ್ಭವಂತೂ ಆರೋಗ್ಯದ ಕುರಿತಾದ,ರೋಗಪ್ರತಿಬಂಧಕ ಉಪಾಯಗಳ ಬಗ್ಗೆ, ಜೀವನ ಕ್ರಮದ ಬಗೆಗಾಗಿನ ಪುನರಾವಲೋಕನಕ್ಕೆ ಹೆಚ್ಚು ಸೂಕ್ತವಾಗಿದೆ. ಭಾರತೀಯ   ಜೀವನ ಪದ್ಧತಿ ಹೇಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯೇ ಇಲ್ಲದ ನಾವಿಂದು ಬದುಕಿನ ರೀತಿ-ನೀತಿ-ಪದ್ಧತಿಗಳ ಕುರಿತು ತೀವ್ರವಾಗಿ ಚಿಂತಿಸಬೇಕಾಗಿದೆ. ನಮ್ಮ ಶಿಕ್ಷಣ ನೀತಿಯಲ್ಲಿ, ಪಠ್ಯಪುಸ್ತಕದಲ್ಲಿ ,ಸಮೂಹ ಮಾಧ್ಯಮದಲ್ಲಿ ..ಎಲ್ಲೂ ಇದರ ಬಗ್ಗೆ  ಪ್ರಸ್ತಾಪವಿಲ್ಲ. ಹಾಗಾಗಿ ಈ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಜಗತ್ತು ಕೊರೊನಾ ರೋಗದ ಕಪಿಮುಷ್ಟಿಯಲ್ಲಿದೆ. ರೋಗದ ಚಿತ್ರಣ-ಲಕ್ಷಣ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಖಚಿತವಾದ ಯುಕ್ತ ಔಷಧೋಪಚಾರ ಲಭ್ಯವಿಲ್ಲ. ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ಇದಕ್ಕಿರುವ ಪರಿಹಾರವಾಗಿದೆ. ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಇರುವುದು,ಸಾಮಾಜಿಕ ಅಂತರ ಕಾಪಾಡುವುದು, ಸೋಂಕಿತರಿಂದ ದೂರವಿರುವುದು ಕ್ಷೇಮ. ಹಾಗಾಗಿ ಸರಕಾರ ಲಾಕ್ ಡೌನ್ ಆದೇಶಿಸಿದೆ. ನಾವೆಲ್ಲ ಮನೆಯಲ್ಲಿದ್ದೇವೆ.ನಿಜಾರ್ಥದಲ್ಲಿ ಗ್ರಹಸ್ಥರಾಗಿದ್ದೇವೆ.

ಹೀಗೆ ಮನೆಯಲ್ಲಿರುವಾಗ ನಮಗೆ ಮಾಮೂಲಿನಂತೆ ಶೀತ, ಎಲರ್ಜಿ, ಕೆಮ್ಮು, ದಮ್ಮು, ಜ್ವರ, ತಲೆನೋವು, ವಾಂತಿ, ಭೇದಿ….ಕಾಣಿಸಿಕೊಳ್ಳುವುದಿಲ್ಲವೇ? ಆಗ ನಾವೇನು ಮಾಡಬೇಕು? ವೈದ್ಯರನ್ನು ತುರ್ತು ಕಾಣಬೇಕೇ? ಮೆಡಿಕಲ್ಸ್ ನಲ್ಲಿ ಔಷಧಿ ತರಬೇಕೆ ?ಮನೆಯಲ್ಲಿ ಏನಾದರೂ ಪರಿಹಾರ ಮಾಡಿಕೊಳ್ಳಬಹುದಾ? ನಮ್ಮ ಮನೆಮದ್ದು ಸಹಾಯಕ್ಕೆ ಬರಬಹುದಾ? ನಮ್ಮ ನಿಮ್ಮಲ್ಲಿ ಹತ್ತೆಂಟು ಪ್ರಶ್ನೆಗಳು.

ಬಂಧುಗಳೇ ನಾವು ನೀವು ನಿಸರ್ಗದ ಕೂಸು. ನಿಸರ್ಗ ನಮ್ಮನ್ನು ಪೋಷಿಸುತ್ತದೆ. ರಕ್ಷಿಸುವುದಿಲ್ಲವೇ..ಖಂಡಿತ ಅದರ ಬತ್ತಳಿಕೆಯಲ್ಲಿ ಪರಿಹಾರವಿದೆ. ಪ್ರಕೃತಿಯ ಭಾಗವಾಗಿರುವ ಈ ಪಂಚಬೌತಿಕ ಶರೀರದ ಆರೋಗ್ಯಕ್ಕೆ ವನಸ್ಪತಿಗಳಲ್ಲಿ ಉತ್ತರವಿದೆ

ಕಲುಷಿತ ನೀರು/ಗಾಳಿ, ಬದಲಾದ ಕಾಲ,ವಾತಾವರಣದ ವೈಪ್ಯರೀತ್ಯ, ಆಹಾರದ ವ್ಯತ್ಯಯ…ಹೀಗೆ ಸಾಮಾನ್ಯ ಕಾರಣಗಳು, ಸಹಜವಾಗಿ ಹತ್ತಾರು ರೋಗಲಕ್ಷಣಗಳಿಗೆ ಮೂಲವಾಗಬಹುದು. ಕಾಣಿಸುವ ಪ್ರತಿಯೊಂದು ಲಕ್ಷಣಗಳು ಬೇರೆಬೇರೆ ಖಾಯಿಲೆಯ ಚಿಹ್ನೆಗಳಾಗಿ ಗೋಚರಿಸಿ ಕಂಗೆಡಿಸಬಹುದು. ಹಗ್ಗವನ್ನು ಕಂಡರೂ ಹಾವೆಂದು ಹೆದರುವ ಸಮಯದಲ್ಲಿ ನಾವಿದ್ದೇವೆ. ಭಯ ಬೇಡ ಸ್ನೇಹಿತರೆ, ನಮ್ಮ ಮನೆಯಲ್ಲಿಯೇ ಆರೋಗ್ಯದ ಕೀಲಿಕೈ ಹುಡುಕೋಣ ಬನ್ನಿ.

ಶೀತ-ಕೆಮ್ಮು

  • ಕಾಳುಮೆಣಸು ಕಷಾಯ ಮಾಡಿ ಅದಕ್ಕೆ ಒಂದು ಚಿಟಿಕೆ ಜೇಷ್ಠಮಧು ಸೇರಿಸಿ 30 ಮಿಲಿಯಂತೆ ದಿನಕ್ಕೆ 3 ಬಾರಿ ಕುಡಿಯಬೇಕು.
  • ಶುಂಠಿ ಮತ್ತು ಕಾಳುಮೆಣಸು ಸಣ್ಣಗೆ ಪುಡಿ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ನೆಕ್ಕಬೇಕು.
  • ತುಳಸಿ ಎಲೆಯ ರಸ/ಕಷಾಯಕ್ಕೆ ಕಾಳುಮೆಣಸಿನ ಹುಡಿಯ ಮೇಲ್ಪುಡಿ ಸೇರಿಸಿ ಅದಕ್ಕೆ ಅರ್ಧ ಚಮಚ ಜೇನುತುಪ್ಪ ಹಾಕಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಬೇಕು.
  • ತುಳಸಿ,ಶುಂಠಿ,ಕಾಳುಮೆಣಸು ಪುಡಿಮಾಡಿ ಸ್ವಲ್ಪ ಬೆಲ್ಲ ಸೇರಿಸಿ ತಯಾರಿಸಿದ ಬಿಸಿಬಿಸಿ ಪಾನೀಯ ದಿನಕ್ಕೆರಡು ಬಾರಿ ಸೇವಿಸಬೇಕು
  • ಕುದಿಯುವ ನೀರಿಗೆ ತುಳಸಿ ಎಲೆ ಮತ್ತು ಸ್ವಲ್ಪ ಅರಸಿನ ಹುಡಿ ಹಾಕಿ ಆವಿಯನ್ನು ಮೂಗಿನ ಹೊಳ್ಳೆಯ ಮೂಲಕ ಸೇವಿಸಬೇಕು
  • ಬಿಸಿನೀರಿಗೆ ಕಲ್ಲುಪ್ಪು ಹಾಕಿದ ಉಪ್ಪುನೀರಿನಲ್ಲಿ ಗಂಟಲು ತೊಳೆಯುತ್ತಿರಬೇಕು.
  • ಹಿತವಾದ ಬಿಸಿನೀರು ಆಗಾಗ್ಗೆ ಕುಡಿಯುತ್ತಿರಬೇಕು.

ತಲೆನೋವು/ಮೂಗುಕಟ್ಟುವುದು/ಗಂಧ ಅರಿವಾಗದಿರುವುದು

     ನುಗ್ಗೆಮರದ ಕೆತ್ತೆಯ ಕಾಷಾಯ ಮಾಡಿ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ 30 ಮಿಲಿ ಮೂರುಬಾರಿ ಕುಡಿಯುವುದು.

  • ಹಿಪ್ಪಲಿ ಮತ್ತು ಅಳಲೆಕಾಯಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಹುಡಿಮಾಡಿ 2 ಗ್ರಾಮ್ ಚೂರ್ಣವನ್ನು ಜೇನುತುಪ್ಪ/ಹಳೆಬೆಲ್ಲದ ಜೊತೆ ಮಿಶ್ರಮಾಡಿ ಮೂರ್ನಾಲ್ಕು ಸಾರಿ ತೆಗೆದುಕೊಳ್ಳಬೇಕು.
  • ಪೇರಳೆಯ ಚಿಗುರು/ಕುಡಿಯ ಕಷಾಯಕ್ಕೆ ಸ್ವಲ್ಪ ಅಳಲೆಕಾಯಿ ಪುಡಿ ಮತ್ತು ಹಳೆಬೆಲ್ಲ ಸೇರಿಸಿ ಕುಡಿಯಬೇಕು.

ಜ್ವರ :

  • ತುಳಸಿ ಎಲೆ,ಕಹಿಬೇವಿನ ತೊಗಟೆ ಮತ್ತು ಕಪ್ಪು ಜೀರಿಗೆ ಒಟ್ಟಿಗೆ ಸೇರಿಸಿ ಕುದಿಸಿ ಕಷಾಯ ಮಾಡಿ ಅದಕ್ಕೆ  ಕಲ್ಲುಸಕ್ಕರೆ/ಜೇನುತುಪ್ಪ ಸೇರಿಸಿ ಸೇವಿಸಬೇಕು.
  • ಸಾಂಬ್ರಾಣಿ ( ದೊಡ್ಡಪತ್ರೆ) ರಸ ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ನಾಲ್ಕಾರು ಬಾರಿ ನೆಕ್ಕಬೇಕು.
  • ಲಾವಂಚಬೇರು, ಪರ್ಪಟ,ಉದೀಚ, ಮುಸ್ತ,ಚಂದನ ಮತ್ತು ಶುಂಠಿಯ 10 ಗ್ರಾಮ್ ಕಷಾಯ ಚೂರ್ಣಕ್ಕೆ 2 ಲೀಟರ್ ನೀರು ಸೇರಿಸಿ ಕುದಿಸಿ ಸೋಸಿ ಕುಡಿಯಬೇಕು.
  • ಹೆಸರುಕಾಳಿನಿಂದ ತಯಾರಿಸಿದ ಸೂಪ್ ಸೇವಿಸಬೇಕು.
  • ಲಘು ಭೋಜನ,ಊಟದಲ್ಲಿ ಬೇಯಿಸಿದ ತರಕಾರಿ ಬಳಸಬೇಕು.
  • ನೆಲ್ಲಿಕಾಯಿಗೆ ಈರುಳ್ಳಿ,ಶುಂಠಿ, ಅರಸಿನ ಮತ್ತು ಕರಿಬೇವಿನೆಲೆ ಸೇರಿಸಿ ಚಟ್ನಿ ಮಾಡಿ ತಿನ್ನಬೇಕು.

ವಾಂತಿ

  • ನಾಲ್ಕಾರು ನವಿಲುಗರಿಗಳನ್ನು ಸುಟ್ಟು ಭಸ್ಮಮಾಡಿ ಚೆನ್ನಾಗಿ ಹುಡಿಮಾಡಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಚೂರ್ಣ ಸೇರಿಸಿ ಜೇನುತುಪ್ಪದೊಂದಿಗೆ ಸೇವಿಸಬೇಕು.
  • ನಾಲ್ಕೈದು ಲಿಂಬೆಯ ಎಲೆಯನ್ನು ಕುದಿಯುವ ನೀರಿಗೆ ಹಾಕಬೇಕು. ಐದಾರು ನಿಮಿಷದ ಬಳಿಕ ಆ ಎಲೆಗಳನ್ನು ಹೊರತೆಗೆದು, ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ದಿನಕ್ಕೆ ಐದಾರು ಬಾರಿ ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಬೇಕು.

ಭೇದಿ:

  • ಲಿಂಬೆಯ ಸಿಪ್ಪೆಯನ್ನು ಒಣಗಿಸಿ ಚೆನ್ನಾಗಿ ಸುಟ್ಟು ಪುಡಿಮಾಡಿಟ್ಟುಕೊಂಡು ಅದಕ್ಕೆ ಮೊಸರು ಸೇರಿಸಿ ಕಾಲು ಚಮಚದಷ್ಟು ಎರಡು ಮೂರು ಬಾರಿ ಸೇವಿಸಬೇಕು.
  • ದಾಳಿಂಬೆ ಸಿಪ್ಪೆಯ ಕಷಾಯ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಮೂರ್ನಾಲ್ಕು ಬಾರಿ ಕುಡಿಯಬೇಕು.

ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ

  • ಐದಾರು ಪುನರ್ಪುಳಿ ಸಿಪ್ಪೆಯನ್ನು ಮೂರುಲೋಟ ನೀರಿನಲ್ಲಿ ನೆನೆಹಾಕಿ,ತದಬಳಿಕ ಚೆನ್ನಾಗಿ ಕೈಯಿಂದ ಹಿಚುಕಬೇಕು.ಅದಕ್ಕೆ ಸ್ವಲ್ಪ ಸಕ್ಕರೆ ಮತ್ತು ಉಪ್ಪು ಸೇರಿಸಿ ಕರಗಿಸಬೇಕು.ಈ ಪಾನಕವನ್ನು ಅರ್ಧಲೋಟದಂತೆ ದಿನಕ್ಕೆ ಐದಾರು ಬಾರಿ ಕುಡಿಯಬೇಕು.
  • ಎಳನೀರು/ಸೀಯಾಳ, ಸ್ವಲ್ಪ ಸಕ್ಕರೆ ಮತ್ತು ಚೂರು ಏಲಕ್ಕಿ ಪುಡಿಯನ್ನು ಸೇರಿಸಿ ಅರ್ಧ ಘಂಟೆ ಹಾಗೆ ಇಡಬೇಕು. ಈ ನೀರನ್ನು ಒಂದು ಲೋಟ ಬೆಳಿಗ್ಗೆ ಮತ್ತು ಒಂದು ಲೋಟ ಸಂಜೆ ಕುಡಿಯಬೇಕು.

ಉರಿಮೂತ್ರ ಸಮಸ್ಯೆ:

  • 10 ಮಿಲಿ ಗರಿಕೆಯ ಹುಲ್ಲಿನ ರಸ ತೆಗೆದು ದಿನಕ್ಕೆ ಮೂರು ಸಲ ತೆಗೆದುಕೊಳ್ಳುವುದು.
  • ದರ್ಬೆ(ಒಂದು ಜಾತಿಯ ಹುಲ್ಲು) ಯನ್ನು ಜಜ್ಜಿ ನಾಲ್ಕರಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಮಾಡಬೇಕು. 30ಮಿಲಿ ಕಷಾಯಕ್ಕೆ ಸಕ್ಕರೆ ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಕುಡಿಯಬೇಕು.

ಮೂಗಿನಿಂದ ರಕ್ತಸ್ರಾವ:

  • ತಲೆಗೆ/ನೆತ್ತಿಗೆ ಈರುಳ್ಳಿಯ ರಸ ತೆಗೆದು ದಿನಕ್ಕೆ ಎರಡು ಮೂರು ಸರ್ತಿ ಹಚ್ಚುವುದು.
  • ದಾಳಿಂಬೆ/ಪೇರಳೆಯ ಎಳೆಯ ಚಿಗುರುಗಳನ್ನು ಜಜ್ಜಿ ರಸ ತೆಗೆದು ಎರಡು ಚಮಚದಂತೆ ದಿನಕ್ಕೆ ಮೂರ್ನಾಲ್ಕು ಸಲ ಕುಡಿಯಬೇಕು. ಚಿಕ್ಕಮಕ್ಕಳಾದರೆ ಅರ್ಧ ಚಮಚ ರಸ ಸಾಕು.

ನಿದ್ರೆ ಬಾರದಿದ್ದರೆ/ಕಡಿಮೆಯಾದರೆ :

  • ಮಲಗುವ ಅರ್ಧ ಘಂಟೆ ಮೊದಲು ಎರಡೂ ಅಂಗಾಲಿಗೆ ಹರಳೆಣ್ಣೆ ಹಚ್ಚಬೇಕು.
  • ಒಂದು ಲೋಟ ಹಾಲಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಹಸುವಿನ ತುಪ್ಪ ಸೇರಿಸಿ ಮಿಶ್ರಮಾಡಬೇಕು. ಅದಕ್ಕೆ ಸಣ್ಣಸಣ್ಣ ತೇಳುಹೋಳುಗಳನ್ನಾಗಿ ಮಾಡಿದ ಚೆನ್ನಾಗಿ ಕಳಿತ ಒಂದು ಬಾಳೆಹಣ್ಣಿನ ಚೂರುಗಳನ್ನು ಸೇರಿಸಿ ಕಲಸಿಟ್ಟು ಮಲಗುವ ವೇಳೆ ತೆಗೆದುಕೊಳ್ಳಬೇಕು.
  • ಇದು ಮಧುಮೇಹಿ ವ್ಯಕ್ತಿಗಳಿಗೆ ಬೇಡ.

ಬೆವರುಸಾಲೆ:

  • ದಿನಾಲು ಮೈಗೆ ರಕ್ತಚಂದನ ತೇದಿ ಹಚ್ಚುವುದು.
  • ದಾಸವಾಳದ ಎಲೆಯನ್ನು ನೀರಿನಲ್ಲಿ ನೆನಸಿ ಚೆನ್ನಾಗಿ ಹಿಸುಕಿ ಗೊಂಪು/ನೊರೆ ಮಾಡಿಕೊಳ್ಳಬೇಕು. ಇದನ್ನು ದಿನಕ್ಕೆರಡು ಬಾರಿ ಉರಿಸಹಿತ ಬೊಕ್ಕೆ,ಕಜ್ಜಿಗಳಿಗೆ ತೆಳುವಾಗಿ ಲೇಪಿಸಬೇಕು.
  • ಒಟ್ಟಂದದಲ್ಲಿ ಸುಂದರವಾದ ದಿನಗಳನ್ನು ಮನೆಯಲ್ಲಿ ಕಳೆಯ ಬೇಕಾದರೆ…
  • ಕಡ್ಡಾಯ ದಿನಚರ್ಯೆ ಪಾಲನೆ ( ಸೂರ್ಯಹುಟ್ಟುವ ಮೊದಲಿನಿಂದ ತೊಡಗಿ ಸೂರ್ಯ ಮುಳುಗುವವರೆಗೆ ಒಬ್ಬ ವ್ಯಕ್ತಿ ಮಾಡಬೇಕಾದ ದೈನಂದಿನ ಆಚಾರಗಳು/ಚಟುವಟಿಕೆಗಳು)
  • ಆಹಾರವಿಧಿವಿಶೇಷಾಯತನಗಳ
  • ಪಾಲನೆ ( ಹೇಗೆ?ಎಲ್ಲಿ?ಎಷ್ಟು?ಏನು?ಎಷ್ಟೊತ್ತಿಗೆ? ಆಹಾರವನ್ನು ಸೇವಿಸಬೇಕು ಎನ್ನುವ ವಿಧಿ-ನಿಷೇಧದ ಅಚರಣೆ)
  • ಯೋಗಾಸನ,ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದು.
  • ಪೂಜೆ,ಜಪ,ಅನುಷ್ಠಾನ,ಅಗ್ನಿಹೋತ್ರ, ನಾಮಾರ್ಚನೆ…ದೈವಿಕ ವ್ರತ ಅನುಷ್ಠಾನಗಳು.
  • ಅಹಿಂಸಾ,ಸತ್ಯವಾಕ್,ಕಳ್ಳತನಮಾಡದಿರುವುದು, ಬಾಹ್ಯ-ಅಭ್ಯಂತರ ಶೌಚ, ತಾಯ್ತಂದೆ, ಗುರುಹಿರಿಯರನ್ನು ಗೌರವಿಸುವುದು…ಸದ್ವೃತ್ತ ಪಾಲಿಸುವುದು.
  • ದೇಹಕ್ಕೆ ಹಿತವೆನಿಸುವ, ಸ್ರೋತಸ್ಸುಗಳಿಗೆ ಅವಿರೋಧವಾದ ಪಥ್ಯಾ ಆಹಾರವನ್ನು ಸೇವಿಸಬೇಕು.ಅಪಥ್ಯವಾದುದನ್ನು ಸೇವಿಸಲೇಬಾರದು
  • ಅಡುಗೆಯಲ್ಲಿ ಅರಸಿನ,ಜೀರಿಗೆ,ಕೊತ್ತಂಬರಿ, ಬೆಳ್ಳುಳ್ಳಿ,ಶುಂಠಿ…ಸಾಂಬಾರ ಪದಾರ್ಥಗಳನ್ನು ಉಪಯೋಗಿಸಬೇಕು.
  • ತುಳಸಿ,ದಾಲ್ಚಿನ್ನಿ,ಕರಿಮೆಣಸು,ಒಣಶುಂಠಿ ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಬೆಲ್ಲ/ಲಿಂಬೆರಸ ದ ಜೊತೆ ಸೇವಿಸಿದರೆ ಉತ್ತಮ.
  • 150 ಮಿಲಿ ಹಸುವಿನ ಹಾಲಿಗೆ ಅರ್ಧ ಚಮಚ ಅರಸಿನ ಹುಡಿ ಸೇರಿಸಿ ಸರಿಯಾಗಿ ಕುದಿಸಿ ಅದನ್ನು ದಿನಕ್ಕೆರಡು ಬಾರಿ ಕುಡಿಯಬೇಕು.
  • ತೆಂಗಿನ ಎಣ್ಣೆ/ಎಳ್ಳೆಣ್ಣೆ/ತುಪ್ಪ ನಾಲ್ಕು ಬಿಂದು ಮೂಗಿಗೆ ಹಾಕಿಕೊಂಡು ನಸ್ಯ ಮಾಡಬೇಕು.
  • ಎಳ್ಳೆಣ್ಣೆ/ತೆಂಗಿನೆಣ್ಣೆ ಒಂದು ಚಮಚ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಬೇಕು.
  • ದಿನಕ್ಕೆರಡು ಬಾರಿ ಉಪ್ಪು ನೀರಿನಿಂದ ಗಂಟಲು ತೊಳೆಯಬೇಕು.
  • ಲವಂಗ ಪುಡಿಯನ್ನು ಕಲ್ಲುಸಕ್ಕರೆ/ಜೇನುತುಪ್ಪದ ಜೊತೆ ದಿನದಲ್ಲಿ ಎರಡು ಮೂರು ಬಾರಿ ಸೇವಿಸಬೇಕು.

ಸರಳ ಮದ್ದು, ಹಿತ್ತಲ ಮದ್ದು, ಮನೆಮದ್ದು,ಕಿಚನ್ ರೆಮಿಡೀಸ್,ಗಿಡಮೂಲಿಕೆ ಮದ್ದು, ಬೇರುನಾರು ಔಷಧ…ಹೀಗೆ ಹತ್ತು ಹೆಸರು ಹೊತ್ತು ಎಲ್ಲರ ತಾತ್ಸಾರ-ತಿರಸ್ಕಾರಕ್ಕೆ ತುತ್ತಾದ ಆಯುರ್ವೇದವನ್ನು ಇಂದು ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ.ಎಲ್ಲಾ ಸೋಂಕುಗಳಿಗೆ,ಶಂಕೆಗಳಿಗೆ  ಪರಿಹಾರವಿರುವ ಆಯುರ್ವೇದವನ್ನು ಪ್ರಪಂಚವಿಂದು ಆಶ್ರಯಿಸಿದೆ.

ನಾವೂ ಈಗ ಮನೆಯಲ್ಲಿದ್ದೇವೆ.ಪುರಸೊತ್ತು ಇದೆ. ಜೀವನ ಪದ್ದತಿಯ ಸಾರಸರ್ವಸ್ವವನ್ನು ಕಲಿಸುವ ಆಯುರ್ವೇದದ ಬಗ್ಗೆ ಸ್ವಲ್ಪವಾದರೂ ತಿಳಿಯೋಣ. ತಿಳಿಯಾದ ಬದುಕನ್ನು ಕಾಣೋಣ.

ಲೇಖಕರು – ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ,
ನಿರ್ದೇಶಕರು, ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ, ಬ್ರಹ್ಮಾವರ,ಉಡುಪಿ

1 thought on “ಆರೋಗ್ಯದ ಕೀಲಿಕೈ ಎಲ್ಲಿದೆ …?

Leave a Reply

Your email address will not be published. Required fields are marked *

error: Content is protected !!