ಬಿಜೆಪಿ ನಾಯಕರೇನು ಸತ್ಯಹರಿಶ್ಚಂದ್ರರಾ?: ಸಿದ್ದರಾಮಯ್ಯ
ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ಸಿದ್ದರಾಮಯ್ಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಪರಮೇಶ್ವರ್ ಡಿಕೆ ಶಿವಕುಮಾರ್ ಅವರನ್ನು ಅಪ್ಪುಕೊಂಡು ಭಾವುಕತೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಮೂರು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಅದ್ದೂರಿ ಸ್ವಾಗತ ನೀಡುವ ಮೂಲಕ ಅವರನ್ನು ಬರಮಾಡಿಕೊಳ್ಳಲಾಗಿತ್ತು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಪಕ್ಷದ ಹಲವು ಮುಖಂಡರು ಕಾಣಿಸಿಕೊಂಡಿದ್ದರೂ ಸಿದ್ದರಾಮಯ್ಯ ಆಗಮಿಸರಿಲಿಲ್ಲ. ಇಂದು ಬೆಳಗ್ಗೆ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಹಲವು ವಿಚಾರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ
ರಾಜಕೀಯ ದ್ವೇಷಕ್ಕೆ ಬಲಿಯಾಗಿ ಕಿರುಕುಳಕ್ಕೊಳಗಾದರೂ ಡಿಕೆ ಶಿವಕುಮಾರ್ ಅವರು ಆತ್ಮ ವಿಶ್ವಾಸದಿಂದ ಇದ್ದಾರೆ. ಕಾಂಗ್ರೆಸ್ ಪಕ್ಷ ಅವರ ಜೊತೆಯಲಿದೆ. ಡಿಕೆಶಿ ಅವರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿ ದೀಪಾವಳಿ ಶುಭ ಹಾರೈಸಿರುವುದಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪರಮೇಶ್ವರ್ ಅವರ ಮನೆ, ಕಚೇರಿ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿಯಾದ ಮೇಲೆ ಅವರನ್ನು ಭೇಟಿಯಾಗಿರಲಿಲ್ಲ. ಹಾಗಾಗೀ ಈಗ ಭೇಟಿಯಾದೆ. ಐಟಿ ದಾಳಿ ನಡೆಸುವುದಾದರೆ ಪಕ್ಷಾತೀತವಾಗಿ ಮಾಡಲಿ, ಬಿಜೆಪಿ ನಾಯಕರೇನು ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.