ಚಿಕ್ಕಮಗಳೂರು: ಸೇತುವೆಗೆ ಉರುಳಿದ ಕಾರು, ಸ್ಥಳದಲ್ಲೇ ಮೂವರ ಸಾವು

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆ ಮತ್ತೆ  ಅವಾಂತರ ಸೃಷ್ಟಿಸುತ್ತಿದ್ದು ಮಲೆನಾಡಿಗರಲ್ಲಿ ಆತಂಕ ಮನೆಮಾಡಿದೆ. ನಿನ್ನೆ ರಾತ್ರಿಯಿಂದ ಎಡೆಬಿಡದೇ  ಸುರಿಯುತ್ತಿರುವ ಗಾಳಿ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ ಜನ ಹೈರಾಣಾಗಿದ್ದಾರೆ. ಮತ್ತೊಂದೆಡೆ ಮಳೆಯಿಂದಾಗಿ‌  ಚಾಲಕನ‌ ನಿಯಂತ್ರಣ ತಪ್ಪಿದ ಪರಿಣಾಮ‌ ಕಾರೊಂದು ಹಳ್ಳಕ್ಕೆ ಬಿದ್ದು ಮೂವರು ಸಾವಿಗೀಡಾಗಿದ್ದಾರೆ.

ಚಂಡಮಾರುತದ ಎಫೆಕ್ಟ್ ಮಲೆನಾಡಿನಲ್ಲಿ ಮೂವರ ಬಲಿ ತೆಗೆದುಕೊಂಡಿದೆ. ನಿನ್ನೆಯಿಂದಲೂ ಅಬ್ಬರಿಸುತ್ತಿರುವ ಬಿರುಗಾಳಿ ಸಹಿತ ಮಳೆ ಮಲೆನಾಡ ಜನರನ್ನ ಮನೆಯಿಂದ ಹೊರಗಡೆ ಹೋಗದ ಹಾಗೆ ಮಾಡಿದೆ. ಇಂದು ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಸಮೀಪ ಬಿರುಗಾಳಿ ಸಹಿತ ಮಳೆ ಹಿನ್ನೆಲೆ  ಇನೋವ  ಕ್ರಿಸ್ಟಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಹೆಬ್ಬಾಳದ ನಿವಾಸಿಗಳಾದ 82 ವರ್ಷದ ಯಶೋಧ, 62 ವರ್ಷದ ಪ್ರಕಾಶ್ ಹಾಗೂ 24 ವರ್ಷದ ಅನಿರುದ್ಧ್ ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನೂ ಕಾರಿನಲ್ಲಿದ್ದ ಅನುರೂಪ ಹಾಗೂ ನರಸಿಂಹರಾವ್ ಸಣ್ಣಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪ್ರಾಣ ಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿಗೆ ಒಳಗಾಗಿದ್ದ ಚಾರ್ಮಾಡಿ ಭಾಗದಲ್ಲಿಯೂ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇವಲ ಲಘುವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಆದ್ರೂ ನಿನ್ನೆ ರಾತ್ರಿಯಿಂದ ಸಾಕಷ್ಟು ಮಳೆತಾಗುತ್ತಿದ್ದು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂದು ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಬಿರುಗಾಳಿ ಇದ್ದಿದ್ದರಿಂದ ಆಲ್ಟೋ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಬಚಾವಾಗಿದ್ರು. ಆದ್ರೆ ಕೊಟ್ಟಿಗೆಹಾರದಿಂದ 10 ಕೀ ಮೀ ದೂರವಿರೋ ಬಡವನದಿಣ್ಣೆಯಲ್ಲಿ ನಡೆದ ಅಪಘಾತದಲ್ಲಿ ಮೂವರು ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಬಲಿಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!