ಕಳಚಿತು ಪ್ರಾಮಾಣಿಕ ರಾಜಕಾರಣದ ಕೊಂಡಿ ಸಂತಾಪ
ಮಂಗಳೂರು ಇಳೀರಿ ಯಾರಲ್ಲಿ….ಅಂತ ಆ ಬೆಂಗಳೂರು ಬಸ್ಸಿನ ಕಂಡಕ್ಟರ್ ಜೋರಾಗಿ ಕೂಗುತ್ತಿದ್ದಂತೆ ಮೊದಲೇ ಸಿದ್ಧವಾಗಿ ಕುಳಿತಿದ್ದ ಎಲ್ಲಾ ಯಾತ್ರಿಗಳು ದಡಬಡನೆ ಇಳಿದರು. ಅ ಮೇಲೆ ಆ ಕಂಡಕ್ಟರ್ ಯಾರಾದ್ರೂ ಮಲಗಿದವರು ಇಳಿಯದೆ ಉಳಿದಿರಬಹುದೇ ಅಂತ ಎಲ್ಲಾ ಸೀಟುಗಳನ್ನು ನೋಡುತ್ತಾ ಬರುತ್ತಿರಬೇಕಾದರೆ ಅಲ್ಲೊಬ್ಬರು ಇನ್ನೂ ಮಲಗಿದ್ದಾರೆ.
ಸರ್ ಏಳಿ ಮಂಗಳೂರು ಬಂತು ಅಂತ ಕಂಡಕ್ಟರ್ ತಡವಿದರೂ ಏಳುವಲಕ್ಷಣ ಕಾಣಿಸಲಿಲ್ಲ. ಏಳುವುದಾರೂ ಹೇಗೆ ಅವರಾಗಲೇ ಚಿರನಿದ್ರೆಗೆ ಜಾರಿಯಾಗಿತ್ತು. ಬಸ್ಸಲ್ಲೇ ಹೃದಯಾಘಾತಕ್ಕೆ ಒಳಗಾಗಿ ಸದ್ದಿಲ್ಲದೆ ಸರಿದು ಹೋದ ಆ ವ್ಯಕ್ತಿ ನಮ್ಮೂರಿನ ಮಾಜಿ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ಗೋಪಾಲ ಭಂಡಾರಿ ಅವರು.
ಸಾಮಾಜಿಕ ನ್ಯಾಯಕ್ಕಾಗಿ ಒಂದಷ್ಟು ಯುವ ಮನಸ್ಸುಗಳು ತುಡಿಯುತ್ತಿದ್ದ ಎಪ್ಪತ್ತರ ದಶಕವದು.ಉಳುವವನೇ ಹೊಲದೊಡೆಯ ಎಂಬ ಘೋಷಣೆ ಕರ್ನಾಟಕದ ಕರಾವಳಿಯಲ್ಲಿ ಮಿಂಚಿನ ಸಂಚಲನ ಮೂಡಿಸಿತು. ಆ ಘೋಷಣೆ ಸಾವಿರಾರು ಭೂಮಾಲಿಕರನ್ನು ರಾತ್ರಿ ಹಗಲಾಗುವುದರೊಳಗಾಗಿ ನಡುಬೀದಿಗೆ ತಂದು ನಡುವೆ ತಂದು ನಿಲ್ಲಿಸಿತು. ದಿಲ್ಲಿಯ ಪಡಸಾಲೆಯಲ್ಲಿ ಇಂದಿರೆ ಉಸುರಿದ ಆ ಆ ಘೋಷಣೆ ಸಣ್ಣ ಸುಳಿಗಾಳಿಯಾಗಿ ಹೊರಟು ದೇಶಾದ್ಯಂತ ಬಿರುಗಾಳಿಯಾಗಿ ಬೀಸಿತು.
ಅ ಬಿರುಗಾಳಿ ಹೊತ್ತು ತಂದ ಲಕ್ಷಾಂತರ ಪಹಣಿಗಳಲ್ಲಿ ಶತಮಾನದ ಶೋಷಣೆಗೆ ಕಣ್ಣೀರಾಗಿದ್ದ ಬಡವರ ಹೆಸರು ನಮೂದಾಗಿದ್ದವು. ಈ ಕ್ರಾಂತಿಕಾರಿ ಸಾಮಾಜಿಕ ಆಂದೋಲನಕ್ಕೆ ಗ್ರಾಮಗ್ರಾಮಗಳಲ್ಲಿ ಯುವಕರು ಬೆನ್ನೆಲುಬಾಗಿ ನಿಂತರು. ನೂರಾರು ಎಕರೆ ಭೂಮಿ ಒಕ್ಕಲಿನವರ ಪಾಲಾಗುತ್ತದೆ ಎಂದಾಗ ಭೂಮಾಲಿಕ ಸುಮ್ಮನಿರುತ್ತಾನೆಯೇ..? ಕೊನೆಯ ಕ್ಷಣದ ಮಾಡು ಇಲ್ಲವೇ ಮಡಿ ಎಂಬ ಹೋರಾಟ ಭೂಮಾಲಿಕರಿಂದಲೂ ನಡೆಯಿತು.
ಭೂನ್ಯಾಯ ಮಂಡಳಿ ಕಛೇರಿ ಹೊರಗೆ ಕಂಡವನು ಸಂಜೆ ಎಲ್ಲೋ ಪೊದೆ ಬದಿಯಲ್ಲಿ ಹೆಣವಾಗಿ ಸಿಗುತ್ತಿದ್ದ. ಒಕ್ಕಲಿನವರ ಬಾವಿಗೆ ವಿಷವಿಕ್ಕಿ ಕುಟುಂಬವನ್ನೇ ಮುಗಿಸಿದ ಉದಾಹರಣೆಗಳು ಇಲ್ಲದ್ದಿಲ್ಲ. ರಾತೋರಾತ್ರಿ ಗಾಡಿ ಕಟ್ಟಿ ಒಕ್ಕಲು ತೆರವು ಮಾಡಿದ ಸಾವಿರಾರು ಘಟನೆಗಳಿಗೆ ನಮ್ಮೂರು ಸಾಕ್ಷಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಸಜ್ಜನ ಭೂಮಾಲಿಕರು ತಾವೇ ಮುಂದೆ ನಿಂತು ಗೇಣಿದಾರನಿಗೆ ಭೂಮಿ ಕೊಟ್ಟ ಉದಾಹರಣೆಗಳಿವೆ.
ಆದರೆ ಕಾನೂನಿನ ತಲೆ ಬುಡ ಅರಿಯದ ಹಳ್ಳಿ ಜನರಿಗೆ ಮಾನಸಿಕ ಧೈರ್ಯ ತುಂಬಿ ಅರ್ಜಿ ಹಾಕಲು ಹೇಳಿ ಆ ಅರ್ಜಿಯ ಬೆನ್ನು ಬಿದ್ದು ,ದಣಿಗಳ ಬೆದರಿಕೆಗೆ ಜಗ್ಗದೆ ಒಂದಷ್ಟು ಯುವಕರು ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಡಿದರು. ಭೂ ಮಸೂದೆಯ ಮೂಸೆಯಿಂದ ಹೊರಬಂದ ಇಂತ ಬೆರಳೆಣಿಕೆಯಷ್ಟು ನಾಯಕರಲ್ಲಿ ಗೋಪಾಲ ಬಂಡಾರಿ ಅವರೂ ಒಬ್ಬರು.
ಹೆಬ್ರಿ ಚಾರ ಮುದ್ರಾಡಿಯ ನೂರಾರು ಜನರ ಬದುಕಿಗೆ ಸ್ವಾವಲಂಬನೆಯ ಬೆಳಕು ತೋರಿದವರು ಈ ಗೋಪಾಲ ಬಂಡಾರಿಯವರು. ಇವರ ಅವಿರತ ಹೋರಾಟವನ್ನು ಅರಿತು ಕಾಂಗ್ರೆಸ್ ಪಕ್ಷದ ಹಿರಿಯರು ಇವರಿಗೆ ಮೂಡಬಿದ್ರೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದ್ದರು. ಆದರೆ ಜಾತಿ ಲೆಕ್ಕಾಚಾರದಲ್ಲಿ ಆ ಕ್ಷೇತ್ರ ಸೋಮಪ್ಪ ಸುವರ್ಣರ ಪಾಲಾದಾಗ ವೀರಪ್ಪ ಮೊಯಿಲಿ ತನ್ನ ಕ್ಷೇತ್ರವನ್ನು ಬಂಡಾರಿ ಅವರಿಗೆ ಬಿಟ್ಟುಕೊಟ್ಟು ತಾನು ದಿಲ್ಲಿಯ ಬಂಡಿ ಏರಿದರು.
ಭಂಡಾರಿ ಅವರು ಐದು ಸಲ ಸ್ಪರ್ಧಿಸಿ ಮೂರು ಬಾರಿ ಸೋತಿದ್ದಾರೆ. ಆದರೆ ಸೋಲು ಅವರನ್ನು ಕುಗ್ಗಿಸಲಿಲ್ಲ. ಸೋತ ಮರುದಿನವೇ ಭಂಡಾರಿ ಅವರು ಬುತ್ತಿ ಹಿಡಿದುಕೊಂಡು ಕಛೇರಿಗೆ ಆಗಮಿಸಿ…ಏ ಶೇಖರ…ಆ ವಾರಿಜನ ಹಕ್ಕುಪತ್ರದ ದಾದಾಂಡ್ ತೂಲ ಅನ್ನುತ್ತಾ…ನಿರ್ಭಾವುಕತೆಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಸುನೀಲ್ ಕುಮಾರ್ ಅವರು ಮೊದಲು ಕಾರ್ಕಳಕ್ಕೆ ಬಜರಂಗ ದಳ ಸಂಘಟಿಸಲು ಬಂದ ಸಮಯದಲ್ಲಿ ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು ಗೋಪಾಲ ಬಂಡಾರಿ ಅವರನ್ನು ಭೇಟಿ ಮಾಡಿ ನಾವು ಬಜರಂಗದಳ ಸೇರಬಹುದೇ ಅಂತ ಕೇಳಿದರಂತೆ.
ಓ ಧಾರಾಳವಾಗಿ ಸೇರಿ ಅದು ದೇಶ ಮತ್ತು ಧರ್ಮದ ಬಗ್ಗೆ ಹೋರಾಟ ಮಾಡುತ್ತಿದೆ ರಾಜಕೀಯಕ್ಕೂ ಅದಕ್ಕೂ ಯಾವ ಸಂಬಂಧವೂ ಇಲ್ಲ ಅಂತ ಆ ತಂಡವನ್ನು ಕಳುಹಿಸಿದ್ದರಂತೆ. ಸುನೀಲ್ ಕುಮಾರ್ ಆಗ ಪ್ರತೀ ಭಾಷಣದಲ್ಲೂ ನಮ್ಮ ಸಂಘಟನೆಗೂ ರಾಜಕೀಯ ಕ್ಕೂ ಯಾವ ಸಂಬಂಧವೂ ಇಲ್ಲ ರಾಜಕೀಯದ ಚಪ್ಪಲಿ ಹೊರಗಿಟ್ಟು ಬನ್ನಿ ಎನ್ನುತ್ತಾ ಹಳ್ಳಿ ಹಳ್ಳಿಗಳಿಗೆ ತೆರಳಿ ಸಂಘಟನೆ ಬಲಪಡಿಸಿದರು. ಆಗ ಶಾಸಕರಾಗಿದ್ದ ಭಂಡಾರಿ ಅವರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ಮುಂದೊಂದು ದಿನ ಬಿಜೆಪಿ ಇದೇ ಬಿಸಿರಕ್ತದ ಯುವಕನನ್ನು ತನ್ನೆದುರು ಕಣಕ್ಕಿಳಿಸಲಿದೆ ಎಂಬ ರಾಜಕೀಯ ದೂರಗಾಮಿ ಚಿಂತನೆ ಗೋಪಾಲ ಭಂಡಾರಿ ಅವರಿಗೆ ಹೊಳೆಯದೇ ಹೋಯ್ತು.ಈಗ ಕಾರ್ಕಳ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಬೆರಳೆಣಿಕೆಯ ಪಂಚಾಯತುಗಳೂ ಕಾಂಗ್ರೆಸ್ ಬಳಿ ಇಲ್ಲ. ಆದರೂ ನಿನ್ನೆ ರಾತ್ರಿಯವರೆಗೂ ಗೋಪಾಲ ಬಂಡಾರಿ ವಿರಮಿಸಿರಲಿಲ್ಲ. ಮೊನ್ನೆಯೂ ಬೆಂಗಳೂರಿಗೆ ಒಂದಷ್ಟು ಬಡವರ ಫೈಲುಗಳನ್ನು ಬಗಲಿಗೇರಿಸಿಕೊಂಡು ಹೋಗಿರುತ್ತಾರೆ ಅಷ್ಟೇ.. ರಾಜಕೀಯವನ್ನೇ ವೃತ್ತಿ ಮಾಡಿಕೊಂಡು ಬದುಕುತ್ತಿರುವವರ ನಡುವೆ ಇಂತಹ ರಾಜಕಾರಣಿಗಳು ಬಲು ಅಪರೂಪ.
ಬಿಜೆಪಿ ರೆಡ್ಡಿಗಳ ಜೇಬಲ್ಲಿದ್ದ ಹೊತ್ತಲ್ಲಿ ಗೋಪಾಲ ಬಂಡಾರಿ ಅವರಿಗೂ ಮೂವತ್ತು ಕೋಟಿ ಬೇಡಿಕೆ ಬಂದಿತ್ತು ಎಂಬ ಮಾಹಿತಿ ಇದೆ. ಆದರೆ ಪಕ್ಷ ನಿಷ್ಠಗಾಗಿ ಆ ಆಫರನ್ನು ಎಡಗಾಲಲ್ಲಿ ಚೆಲ್ಲಿ ಬಂದಿದ್ದರು ಭಂಡಾರಿ.ನಾನು ಬಿಜೆಪಿ ಪರ ಒಲವುಳ್ಳವನು ಸಂಘ ಪರಿವಾರದಲ್ಲಿ ಸಕ್ರಿಯನಾಗಿದ್ದೇನೆ ಎಂದು ತಿಳಿದಿದ್ದರೂ ಅವರೆಂದೂ ನನ್ನನ್ನು ಶತ್ರುವಿನಂತೆ ಕಂಡವರಲ್ಲ. ಜನರೊಂದಿಗೆ ಬೆರೆಯುವ ಅವರ ಗುಣ ಎಲ್ಲರಿಗೂ ಅನುಕರಣೀಯ.
ರಾಜಕಾರಣ ಪಕ್ಕಕ್ಕಿಟ್ಟು ಅವರ ವೈಯುಕ್ತಿಕ ಬದುಕನ್ನು ಗಮನಿಸಿದರೆ ಅದು ಸೋಲುಗಳ ಸರಮಾಲೆಯಾಗಿತ್ತು. ರಾಜಕೀಯ ಅತಂತ್ರತೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿದ್ದವರು. ಆದರೂ ಅವರೆಂದೂ ಪ್ರಮಾಣಿಕತೆ ಮರೆತವರಲ್ಲ. ದುಡ್ಡಿನ ಬೆನ್ನು ಬಿದ್ದವರಲ್ಲ. ಲಾಬಿ ನಡೆಸಿ ಗೆದ್ದವರಲ್ಲ ಜಾತಿ ಹಿಂದೆ ಹೋದವರಲ್ಲ. ಅದೇ ಹಳೇ ಕಚೇರಿಯಲ್ಲಿ ಕುಳಿತು ಜನರನ್ನು ಪ್ರೀತಿಯಿಂದ ಮಾತಾಡಿಸುತ್ತಾ ಜೀವನೋತ್ಸಾಹದ ಚಿಲುಮೆಯಂತಿದ್ದರು.
ಸಿದ್ಧಾಂತವನ್ನೇ ಬದುಕಿದ ಒಬ್ಬ ಅಪರೂಪದ ರಾಜಕಾರಣಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕರಾವಳಿಯ ಒಂದು ತಲೆಮಾರಿನ ರಾಜಕಾರಣಿಗಳು ಜನರಿಗೆ ಅಪಥ್ಯವಾಗಿ ನೇಪಥ್ಯಕ್ಕೆ ಸರಿದರು. ಆದರೆ ಗೋಪಾಲ ಭಂಡಾರಿಯವರು ಬಾರದ ಲೋಕದ ಕಡೆಗೆ ಕೈ ಬೀಸಿ ನಡೆದೇ ಬಿಟ್ಟಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.
ಜೈ ಮಹಾಕಾಲ್ ಶ್ರೀಕಾಂತ್ ಶೆಟ್ಟಿ ಕಾರ್ಕಳ