ವಲಯ ಮಟ್ಟದ ವಾಲಿವಾಲ್ ಪಂದ್ಯಾಟ: ತುಂಬೆ ಬಿಎ ಕಾಲೇಜು ಪ್ರಥಮ
ಬಂಟ್ವಾಳ : ರಾತ್ರಿ ಬೆಳಗಾಗುವುದರೊಳಗೆ ಯಾರೂ ಸಾಧನೆ ಮಾಡಲು ಸಾಧ್ಯವಿಲ್ಲ. ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಕ್ರೀಡೆ ಆಟಗಳಂತೂ ಮನುಷ್ಯನ ಉತ್ತಮ ಮಾನಸಿಕ, ಉತ್ತಮ ಆರೋಗ್ಯ ಹಾಗೂ ಒಳ್ಳೆಯ ಸ್ಥಾನಮಾನವನ್ನು ತಂದುಕೊಡುತ್ತದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಹೇಳಿದ್ದಾರೆ.
ಅವರು ತುಂಬೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬಂಟ್ವಾಳ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಂದ್ಯಾಟಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಕೇವಲ ಪುರಸ್ಕಾರವೇ ಮುಖ್ಯವಾಗಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಕ್ರೀಡಾ ಸಂಘದ ಜೊತೆ ಕಾರ್ಯದರ್ಶಿ ಅಜಿತ್ ಕುಮಾರ್, ಶಾರದಾ ಪ್ರೌಢಶಾಲೆ, ದೀಪಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ಉಮೇಶ್, ತುಂಬೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಕೆದಿಲ, ಆಲ್ವಿನ್ ವಿಲ್ಸನ್ ಪಿರೇರಾ, ಬೆಸ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ವಿದ್ಯಾ, ಉಪನ್ಯಾಸಕ ವಿ.ಎಸ್.ಭಟ್, ಎಂಇಟಿ ತುಂಬೆ ಇದರ ಅಧೀಕ್ಷಕ ಅಬ್ದುಲ್ ಕಬೀರ್ ಬಿ., ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವ್‌ಸ್ ಮುಂತಾದವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ. ಸ್ವಾಗತಿಸಿ, ಪ್ರಸ್ತಾಪಿಸಿದರು. ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ನಾಯಕ್ ವಂದಿಸಿದರು.
ಫಲಿತಾಂಶ: ಬಾಲಕರ ವಿಭಾಗದಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಬಂಟ್ವಾಳ ಎಸ್‌ವಿಎಸ್ ಪ್ರೌಢಶಾಲೆ ದ್ವಿತೀಯ ಹಾಗೂ ಎಸ್‌ವಿಎಸ್ ಪ್ರೌಢಶಾಲೆಯ ಮಿಥಿಲ್, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಝಹೀರ್ ಹಾಗೂ ಅಝೀಮ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆ ದ್ವಿತೀಯ, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಐಮನ್ ಅರಾ, ವಿನುಶ್ರೀ ಹಾಗೂ ಕಾರ್ಮೆಲ್ ಪ್ರೌಢಶಾಲೆ ಅನನ್ಯ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.