ಶೇಖ್ ಆದಂ ಸಾಹೇಬ್‌ರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬಂಟ್ವಾಳ : ಬಂಟ್ವಾಳ ತಾ| ಕಾವಳಪಡೂರು, ವಗ್ಗ ಸ. ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ, ಇಂಗ್ಲಿಷ್ ಭಾಷಾ ಶಿಕ್ಷಕ ಶೇಖ್ ಆದಂ ಸಾಹೇಬ್ ನೆಲ್ಯಾಡಿ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಕಳೆದ 21 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಶಿಕ್ಷಕ ಹುದ್ದೆ ಸಹಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮಕ್ಕಳು ಮತ್ತು ತಾನು ಸೇವೆ ಸಲ್ಲಿಸಿದ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಅವರು ಈಗಾಗಲೇ ತಮ್ಮ ಶೈಕ್ಷಣಿಕ ಸಾಧನೆಗಾಗಿ ತಮ್ಮ ಶಾಲೆಗೆ ಹಾಗೂ ತಾವು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಇಂಗ್ಲಿಷ್ ಭಾಷಾ ಸ್ನಾತಕೋತ್ತರ ಪದವೀಧರರಾದ ಅವರು 1998ರಲ್ಲಿ ಗುರುಕಂಬಳ ಎ.ಕೆ.ಯು. ಹೆಣ್ಣುಮಕ್ಕಳ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಶಿಕ್ಷಣ ವೃತ್ತಿ ಆರಂಭಿಸಿ 2004ರಿಂದ ವಗ್ಗ ಸ. ಪ್ರೌ. ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರಾಗಿ 2012ರಿಂದ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶೈಕ್ಷಣಿಕ ಕಾರ್ಯಕ್ರಮಗಳಾದ ಪ್ರತಿಭಾ ಪುರಸ್ಕಾರ,ವಲಯ ಮಟ್ಟದ ಪ್ರತಿಭಾ ಕಾರಂಜಿ, ಗೇಮ್ಸ್, ಶಾಲಾ ಬೆಳ್ಳಿ ಹಬ್ಬ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ,ತಾ| ಮಟ್ಟದ ಸ್ಕೌಟ್ಸ್ ಗೈಡ್ಸ್ ರ್‍ಯಾಲಿ, ಆರೋಗ್ಯ ಶಿಬಿರ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ನಡೆಸಿದ್ದಾರೆ.

ಶಾಲೆಗೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ, ಹಳದಿ ಶಾಲೆ ಪ್ರಶಸ್ತಿ, ಕಿತ್ತಳೆ ಶಾಲೆ ಪ್ರಶಸ್ತಿ, 2016 ಮತ್ತು 2019ರಲ್ಲಿ ಎಸೆಸ್ಸೆಲ್ಸಿಯಲ್ಲಿ ಶೇ. ನೂರು ಫಲಿತಾಂಶ, ಶಿಕ್ಷಣ ಇಲಾಖೆಯಿಂದ ಉತ್ತಮ ಸಾಧನಾ ಪ್ರಶಸ್ತಿ, ಶಿಕ್ಷಣ ಮಂತ್ರಿಗಳ ಕಚೇರಿಯಿಂದ ಉತ್ತಮ ಮುಖ್ಯ ಶಿಕ್ಷಕ, ಉತ್ತಮ ಇಂಗ್ಲಿಷ್ ಭಾಷಾ ಸಾಧನಾ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ದಾನಿಗಳ ಸಹಕಾರದಿಂದ ಶೌಚಾಲಯ, ಇಂಟರ್‌ಲಾಕ್, ಸಿಸಿ ಕ್ಯಾಮರಾ, ಶುದ್ಧೀಕರಿಸಿದ ಕುಡಿಯುವ ನೀರು, ಗೇಟ್, ಕಂಪ್ಯೂಟರ್, ಆವರಣ ಗೋಡೆ, ಸುಣ್ಣ ಬಣ್ಣ, ಬೋರ್‌ವೆಲ್, ಸೋಲಾರ್ ವ್ಯವಸ್ಥೆಯ ಸ್ಮಾರ್ಟ್ ಕ್ಲಾಸ್,ಸೌಂಡ್ ಸಿಸ್ಟಮ್, ಸಭಾಭವನ ವಿಸ್ತರಣೆ, ಬಾಲಕಿಯರ ಶೌಚಾಲಯಕ್ಕೆ ನ್ಯಾಪ್‌ಕೀನ್ ಬರ್ನರ್ ಅಳವಡಿಕೆ, ಶಾಲಾವನ, ಉತ್ತಮ ವಾಚನಾಲಯ, ಮಗು ಸ್ನೇಹಿ ವಾತಾವರಣದಿಂದ ವಗ್ಗ ಸರಕಾರಿ ಪ್ರೌಢಶಾಲೆಯ ಶಾಲೆಯ ಸಮಗ್ರ ಅಭಿವೃದ್ಧಿ ಸಾದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!