ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಇನ್ನಿಲ್ಲ

ಉಡುಪಿ ಅ.29 : ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿಯಿಂದ ಆರೋಗ್ಯ ಸ್ಥಿತಿ ಏರುಪೇರಾಗಿತ್ತು. ಇಂದು ಮುಂಜಾನೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದ ವೇಳೆ ಹೃದಯಾಘಾತ ದಿಂದ ಕುಸಿದು ಬಿದ್ದ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇಂದು ನಸುಕಿನ ಜಾವ ಎಂದಿನಂತೆ ಜಿಮ್ ನಲ್ಲಿ ದೇಹ ಕಸರತ್ತು ನಡೆಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತ ವಾಗಿತ್ತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತು. ಆಗ ಆಸ್ಪತ್ರೆಯಲ್ಲಿ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ವರ್ಗಾಯಿಸಲಾಯಿತು. 

ಪುನೀತ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅಸುನೀಗಿದ್ದು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆಘಾತವಾಗಿದೆ. ಪುನೀತ್ ಅವರ ನಿಧನ ಸುದ್ದಿ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಚಿತ್ರರಂಗದ ಗಣ್ಯರು, ಅಸಂಖ್ಯಾತ ಅಭಿಮಾನಿಗಳು ಆಸ್ಪತ್ರೆಯತ್ತ ದೌಡಾಯಿಸಿದರು.

ಪುನೀತ್ ನಿವಾಸಕ್ಕೆ ಬಿಗಿ ಭದ್ರತೆ: ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ತಂಡೋಪತಂಡವಾಗಿ ಮನೆಯತ್ತ ಲಗ್ಗೆಯಿಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪುನೀತ್ ಮನೆಗೆ ತೆರಳುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ. 

ನಟ ಪುನೀತ್ ರಾಜ್ ಕುಮಾರ್ ಅವರು ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಬಂದಿದ್ದಾರೆ, ಇಂದು ಬೆಳಗ್ಗೆ 11.30ರ ಹೊತ್ತಿಗೆ ಅವರು ಆಸ್ಪತ್ರೆಗೆ ಬರುವಾಗಲೇ ಗಂಭೀರವಾಗಿದ್ದರು. ಅದಕ್ಕೆ ಮೊದಲು ಎದೆನೋವು ಕಾಣಿಸಿಕೊಂಡು ಬೇರೆ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಂಡು ಇಲ್ಲಿಗೆ ಬಂದರು. ಐಸಿಯುನಲ್ಲಿ ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಮ್ಮಿಂದ ಬದುಕಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ತಜ್ಞ ಡಾ ರಂಗನಾಥ್ ನಾಯಕ್ ತಿಳಿಸಿದ್ದಾರೆ. ಇಂದು ನಸುಕಿನ ಜಾವ ಜಿಮ್ ಗೆ ವರ್ಕೌಟ್ ಗೆ ಹೋಗಿದ್ದಾಗಲೇ ಪುನೀತ್ ಅವರಿಗೆ ತೀವ್ರ ಹೃದಯಾಘಾತವಾಗಿದೆ.

ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೆ ಗಾಯನದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಸದಭಿರುಚಿಯ ಚಿತ್ರದ ಮೂಲಕ ಸಿನಿಪ್ರಿಯರಿಗೆ ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುತ್ತಿದ್ದರು. ಇವರು ನಟನೆ ಜೊತೆಗೆ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದರು. ಇವರು ಕನ್ನಡದ ಕೋಟ್ಯಾಧಿಪತಿ ಹಾಗೂ ಫ್ಯಾಮಿಲಿ ಪವರ್ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದರು. ಇದರೊಂದಿಗೆ ಇವರು ಅನೇಕ ಪ್ರತಿಷ್ಟಿತ ಕಂಪೆನಿಗಳ ಜಾಹಿರಾತಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

1999 ರ ಡಿ.1 ರಂದು ಅಶ್ವಿನಿ ರೇವಂತ್ ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇವರು ಪಿಆರ್‍ಕೆ ಆಡಿಯೋದ ಮಾಲಕರಾಗಿದ್ದಾರೆ.

1975 ರ ಜ.17 ರಂದು ಜನಿಸಿದ ಇವರ ಮೂಲ ಹೆಸರು ಲೋಹಿತ್. ಬಾಲನಟನಾಗಿ 1976ರಲ್ಲಿ ಪ್ರೇಮದ ಕಾಣಿಕೆ ಚಿತ್ರದ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ ಅವರು ನಂತರ  ವಸಂತ ಗೀತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಭಕ್ತ ಪ್ರಹಲ್ಲಾದ, ಯಾರಿವನು ಚಿತ್ರ ಸೇರಿದಂತೆ 10 ಚಿತ್ರಗಳಲ್ಲಿ ನಟಿಸಿದ್ದರು.

2002 ರಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಪ್ಪು ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ಅವರು, ಅಭಿ, ಆಕಾಶ್, ಅರಸು, ಮಿಲನ, ವಂಶಿ, ಹುಡುಗರು, ಮೈತ್ರಿ, ಚಕ್ರವ್ಯೂಹ, ನಟಸಾರ್ವ ಭೌಮ, ರಾಜಕುಮಾರ, ಚಕ್ರವ್ಯೂಹ ಸೇರಿ 43 ಚಿತ್ರಗಳಲ್ಲಿ ನಟಿಸಿದ್ದು ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಆಗಿದ್ದರು. 

Leave a Reply

Your email address will not be published. Required fields are marked *

error: Content is protected !!