ಎಸ್ಸೆಸ್ಸೆಲ್ಸಿ ಟಾಪರ್ ಗೆ ಚಿನ್ನದ ಕೈಚೈನ್ ನೀಡಿ ಸನ್ಮಾನಿಸಿದ ಯು.ಟಿ.ಖಾದರ್
ವಿಟ್ಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಕೂಡೂರು ನಿವಾಸಿ ಚಿನ್ಮಯಿ ಅವರ ಮನೆಗೆ ಭೇಟಿ ನೀಡಿದ ರಾಜ್ಯ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಶುಭ ಹಾರೈಸಿದರು.
ವಿದ್ಯಾರ್ಥಿನಿಗೆ ಚಿನ್ನದ ಕೈಚೈನ್ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಸಚಿವರು ಚಿನ್ಮಯಿ ಮತ್ತು ಕಟುಂಬದವರನ್ನು ಹಾಗೂ ಶಾಲಾ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಚಿನ್ಮಯಿ ಅವರ ಸಾಧನೆ ಕೇವಲ ವಿಟ್ಲ ಪರಿಸರಕ್ಕೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಗೌರವ ತಂದಿದೆ. ಈ ಹಿಂದೆ ಇಲ್ಲಿಗೆ ಬಂದು ಗೌರವಿಸಬೇಕೆಂದು ನಿರ್ಧರಿಸಿದ್ದೆ. ಆದರೆ ಕೆಲಸದ ಒತ್ತಡದಿಂದ ಸಾಧ್ಯವಾಗಿಲ್ಲ. ಇಂದು ಬಿಡುವು ಮಾಡಿಕೊಂಡು ಬಂದಿದ್ದೇನೆ. ಇವರ ಈ ಸಾಧನೆಗೆ ಕಾರಣಕರ್ತರಾದ ಆಕೆಯ ಹೆತ್ತವರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಚಿನ್ಮಯಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ನಾವೆಲ್ಲ ಸಹಕಾರ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ ರೈ, ಚಿನ್ಮಯಿ ಹೆತ್ತವರಾದ ರಾಜನಾರಾಯಣ ಹಾಗೂ ಗೀತಾ ದಂಪತಿಗಳು, ಕುಟುಂಬದ ಹಿರಿಯರು, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ರಶೀದ್ ವಿಟ್ಲ, ಹಾರೀಸ್ ಕಾನತ್ತಡ್ಕ, ಮನ್ಸೂರು ಹೋನೆಸ್ಟ್, ಹಾರೀಸ್ ಬೈಕಂಪಾಡಿ, ಯು.ಟಿ. ತೌಸಿಫ್ ಉಪ್ಪಿನಂಗಡಿ, ಅಬೂಬಕ್ಕರ್ ಅನಿಲಕಟ್ಟೆ, ಮಹಮ್ಮದ್ ಲಿಬ್ಜತ್ ಉಪಸ್ಥಿತರಿದ್ದರು.