‘ಜನರ ಭಾವನೆ ಜತೆ ಸರ್ಕಾರ ಚೆಲ್ಲಾಟ’: ಗುಂಡೂ ರಾವ್
ಕಾಪು: ‘ಕೇಂದ್ರ ಸರಕಾರ ಜನರ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಆರೋಪಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡ ಕೋವಿಡ್-19 ‘ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ’ ಕಾರ್ಯಕ್ರಮವನ್ನು ಸೋಮವಾರ ಕಾಪು ರಾಜೀವ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿ ಸರ್ಕಾರವು ತನ್ನ ತಪ್ಪು ಕಾರ್ಯಗಳನ್ನು ಸಮರ್ಥಿಸುವುದಕ್ಕಾಗಿ ತಪ್ಪು ಸಂದೇಶಗಳನ್ನು ಜನರಿಗೆ ನೀಡುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಬರದಿದ್ದರೆ, ಅಭಿವೃದ್ಧಿ ಅಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನಷ್ಟು ಒತ್ತಡ ಹೇರಬೇಕಿದೆ’ ಎಂದ ಅವರು, ‘ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸ ಮಾಡಬೇಕಿದೆ. ಆಗ ಪಕ್ಷ ಪ್ರಾಬಲ್ಯ ಪಡೆಯಲಿದೆ’ ಎಂದರು. ಮಾಜಿ ಸಚಿವೆ ಜಯಮಾಲಾ ಮಾತನಾಡಿ, ‘ಲಾಕ್‌ಡೌನ್‌ನಿಂದ ಜನರು ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ಸಾಂತ್ವನ ಹೇಳುವ ಅತ್ಯಗತ್ಯ ಇದೆ. ಜನರ ಋಣ ತೀರಿಸಲು ‘ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ’ ಕಾರ್ಯಕ್ರಮ ಆರಂಭಿಸಿದೆ’ ಎಂದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಹಮ್ಮಿಕೊಂಡಿದೆ. ಜನರು ಜಾಗರೂಕರಾಗಿ, ಕೊರೊನಾವನ್ನು ಎದುರಿಸುವ ಶಕ್ತಿ ಪಡೆಯಬೇಕು’ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕಾಪು ಘಟಕದ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಆಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಸ್ತುವಾರಿ ಜಿ.ಎ ಬಾವಾ, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಡಾ. ಹರೀಶ್ ಕುಮಾರ್, ನವೀನ್‌ಚಂದ್ರ ಜೆ ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ಇಸ್ಮಾಯಿಲ್ ಆತ್ರಾಡಿ, ವಿಶ್ವಾಸ್ ಅಮೀನ್, ಅಖಿಲೇಶ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ಕೇಶವ್ ಹೆಜಮಾಡಿ, ಶೇಖಬ್ಬ ಯು.ಸಿ, ಅಮೀರ್ ಮುಹಮ್ಮದ್ ಕಾಪು, ಸರಸು ಬಂಗೇರ ಇದ್ದರು. |