ವಾಹನ ಸವಾರರ ಅಡ್ಡಗಟ್ಟಿ ದರೋಡೆಗೆ ಯತ್ನ: ಐವರ ಪೈಕಿ ಮೂವರ ಬಂಧನ

ಭಟ್ಕಳ: ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆಗೆ ಸಂಚು ರೂಪಿಸಿದ ಐವರು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಭಟ್ಕಳ ತಾಲೂಕಿನ ಬಿಲಾಲಖಂಡ ಗ್ರಾಮದ ಸಾಗರ್‌ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮಂಗಳೂರಿನ ಚೊಕ್ಕಟ್ಟು ರಸ್ತೆಯ ಜಲಾಲ್‌ ಹುಸೈನ್‌ (39), ಭಟ್ಕಳದ ಹಬಳೆಯ ಗಾಂಧಿನಗರ ನಿವಾಸಿ ಚಾಲಕ ವೃತ್ತಿಯ ನಾಶಿರ್‌ ಹಕೀಮ್‌ (26) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಬಾಲಕನಾಗಿದ್ದು, ಪರಾರಿಯಾಗಿರುವ ಆರೋಪಿಗಳಲ್ಲಿ ಓರ್ವ ಆರೋಪಿ ಮಗ್ದಂ ಕಾಲನಿ ನಿವಾಸಿ ಜೀಶಾನ್‌ ಹಾಗೂ ಬಟ್ಟಾಗಾಂವ ನಿವಾಸಿ ನಬೀಲ್‌ ಎಂದು ಗುರುತಿಸಲಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ಚಾಕು, ಖಾರದಪುಡಿ, ಮಂಕಿ ಕ್ಯಾಪ್‌, ಬೆಲ್ಟ್‌, ತಾಡಪತ್ರೆ ಸಹಿತ ಇನ್ನೋವಾ ಕಾರಿನಲ್ಲಿ ಐವರು ದರೋಡೆಕೋರರ ಗ್ಯಾಂಗ್‌ ದರೋಡೆಗೆ ಸಂಚು ರೂಪಿಸಿ
ಸಜ್ಜಾಗಿತ್ತು. ಗುಳ್ಮಿ ರಸ್ತೆ ಕ್ರಾಸ್‌ ಹತ್ತಿರ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ್‌ ಪಾಟೀಲ್‌ ವಿಚಾರಿಸಲು ತೆರಳಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಾರು ಹಿಮ್ಮುಖವಾಗಿ ಚಲಿಸಿದ್ದು, ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಬಂಧಿತ ಮೂವರು ಆರೋಪಿಗಳು ಗರುಡ ಗ್ಯಾಂಗ್‌ ನ ಸದಸ್ಯರು ಎಂದು ತಿಳಿದು ಬಂದಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!