ಸುಳ್ಳು ಕೇಸು ದಾಖಲಿಸಿ ಬೆದರಿಕೆ,ಎಸ್ ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಫ್ರಾನ್ಸಿಸ್ ಡಿ ಅಲ್ಮೇಡಾ ಆಗ್ರಹ
ಉಡುಪಿ (ಉಡುಪಿ ಟೈಮ್ಸ್ ವರದಿ):ಜಾನುವಾರು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿ ಬೆದರಿಸಿದ ಗಂಗೊಳ್ಳಿ ಠಾಣೆಯ ಎಸ್ ಐ ನಂಜ ನಾಯಕ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಗಂಗೊಳ್ಳಿಯ ಫ್ರಾನ್ಸಿಸ್ ಡಿ ಅಲ್ಮೇಡಾ ಅವರು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ನನ್ನಲ್ಲಿದ್ದ ದನವನ್ನು ನಾನು ಸ್ನೇಹಿತರಾದ ಇಬ್ರಾಹಿಂ ಎಂಬವರಿಗೆ ಸಾಕುವ ಉದ್ದೇಶದಿಂದ ನೀಡಿದ್ದೆ. ಕೆಲವು ದಿನಗಳ ನಂತರ ಈ ವಿಷಯ ಪೊಲಿಸರಿಗೆ ತಿಳಿದು ಅವರು ದನವನ್ನು ಠಾಣೆಗೆ ಕರೆತಂದು ಇಬ್ರಾಹಿಂ ಮೇಲೆ ಗೋ ಹತ್ಯೆ ಕೇಸ್ ಅನ್ನು ದಾಖಲಿಸಿದರು. ಈ ಸಂಧರ್ಭದಲ್ಲಿ ನನ್ನನ್ನು ಕೂಡಾ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದರು. ಈ ಘಟನೆ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ನನ್ನನ್ನು ಮತ್ತು ಇಬ್ರಾಹಿಂ ನನ್ನು ಗೋಳಿಕಟ್ಟೆ ಬಳಿ ಕರೆದುಕೊಂಡು ಹೋಗಿ ದನವನ್ನು ಮರಕ್ಕೆ ಕಟ್ಟಿ, ನೆಲದಲ್ಲಿ ಚೂರಿ ಇನ್ನಿತರ ಆಯುಧಗಳನ್ನು ಇರಿಸಿ ಗೋ ಹತ್ಯೆ ನಡೆಸುತ್ತಿರುವಂತೆ ಬಿಂಬಿಸಿ ಫೋಟೋ ತೆಗೆಸಲಾಗಿತ್ತು. ಮಾತ್ರವಲ್ಲದೇ ಫೆಬ್ರವರಿ 18 ರಂದು ನನ್ನನ್ನು ಠಾಣೆಗೆ ಕರೆಯಿಸಿ ನಾನು ಮತ್ತು ಇಬ್ರಾಹಿಂ ದನ ಕಡಿಯುವುದರಲ್ಲಿ ಶಾಮೀಲಾಗಿದ್ದೇವೆ ಎಂದು ಖಾಲಿ ಪತ್ರಕ್ಕೆ ಸಹಿಮಾಡುವಂತೆ ಒತ್ತಾಯ ಮಾಡಿದ್ದಾರೆ. ಮಾತ್ರವಲ್ಲದೇ ನಾನು ಒಪ್ಪದಿದ್ದಾಗ ಇಡೀ ದಿನ ನನ್ನನ್ನು ಠಾಣೆಯಲ್ಲಿ ಕೂರಿಸಿ ಹಿಂಸಿಸಿದ್ದಾರೆ. ಹಾಗೂ 4 ದಿನ ನಾನು ಹಿರಿಯಡ್ಕ ಜೈಲಿ ನಲ್ಲಿದ್ದು ಇದೀಗ ಜಾಮೀನಿನ ಮೇಲೇ ಬಿಡುಗಡೆ ಹೊಂದಿದ್ದೇನೆ. ಈ ವಿಚಾರದಲ್ಲಿ ಸುಳ್ಳು ಕೇಸ್ ದಾಖಲು ಮಾಡಿದ ಗಂಗೊಳ್ಳಿ ಎಸ್.ಐ ನಂಜ ನಾಯ್ಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವೇಳೆ, ಫ್ರಾನ್ಸಿಸ್ ಡಿ’ಅಲ್ಮೇಡಾ ರ ಮಗಳಾದ ಸಬಿನಾ ಡಿ’ಅಲ್ಮೇಡಾ ಅವರು ಮಾತನಾಡಿ, “ಗಂಗೊಳ್ಳಿ ಪೊಲೀಸರು ನಮಗೆ ಅವ್ಯಾಚ್ಯಾ ಶಬ್ದಗಳಿಂದ ಬೈದಿದ್ದಾರೆ. ಹೇಳಿಕೆಯಲ್ಲಿ ‘ನೀನು ದನವನ್ನು ನೀಡಿಲ್ಲ ಮತ್ತು ನಿನ್ನನ್ನು ನಾವು ಸ್ಟೇಶನ್ ನಲ್ಲಿ ಕೂರಿಸಿಕೊಂಡಿಲ್ಲ’ ಎಂಬರ್ಥದಲ್ಲಿ ಬರೆದಿತ್ತು. ಈ ಪತ್ರಕ್ಕೆ ಸಹಿ ಹಾಕಲು ಒತ್ತಾಯಪಡಿಸಿದರು. ಫ್ರಾನ್ಸಿಸ್ ಅವರು ಇದಕ್ಕೆ ಒಪ್ಪಲಿಲ್ಲ ತದನಂತರ ಪದೇ ಪದೇ ಸಹಿ ಮಾಡುವ ನೆಪ ಒಡ್ಡಿ ಗಂಗೊಳ್ಳಿ ಮತ್ತು ಬೈಂದೂರು ಠಾಣೆಗೆ ಕರೆಸಿಕೊಂಡಿದ್ದರು, ಸರ್ಕಲ್ ಇನ್ಸ್ ಪೆಕ್ಟರ್ ಕೂಡಾ ಅವ್ಯಾಚ್ಯವಾಗಿ ಬೈದು ಬೆದರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.