ಭಾರತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಉಕ್ರೇನ್ ಸೇನೆ

ಹೊಸದಿಲ್ಲಿ ಫೆ.28 : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವುದರಿಂದ ಗಡಿ ರಕ್ಷಣಾ ಸಿಬ್ಬಂದಿ ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಲ್ಲಿನ ಭಾರತೀಯ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಯುದ್ಧಪೀಡಿತ ಉಕ್ರೇನ್- ಪೋಲಂಡ್ ಗಡಿ ಸಮೀಪ ಚೆಕ್ ಪೋಸ್ಟ್‍ಗಳಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ. ಮೈಕೊರೆಯುವ ಚಳಿಯಲ್ಲಿ ಅನ್ನ- ನೀರು, ವಸತಿ ಅಥವಾ ಸುರಕ್ಷಿತವಾಗಿ ತೆರಳುವ ಮಾರ್ಗವನ್ನೂ ಕಲ್ಪಿಸದೇ ಒತ್ತೆಯಾಳುಗಳ ರೀತಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.

ಉಕ್ರೇನ್ ಸೈನಿಕರು ಎಚ್ಚರಿಕೆಯ ಸಂಕೇತವಾಗಿ ಗುಂಡು ಹಾರಿಸುವುದು ಮತ್ತು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಬಲ ಪ್ರಯೋಗ ಮಾಡುತ್ತಿರುವ ವೀಡಿಯೊವನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬರನ್ನು ಸೈನಿಕರು ತಳ್ಳುತ್ತಿರುವ ಚಿತ್ರಣ ಹಾಗೂ ವಿದ್ಯಾರ್ಥಿನಿ ಸೈನಿಕರ ಕಾಲಿಗೆ ಬಿದ್ದು ಗಡಿ ದಾಟಲು ಅವಕಾಶ ನೀಡುವಂತೆ ಬೇಡುತ್ತಿರುವ ದೃಶ್ಯ ಕಾಣಬಹುದಾಗಿದೆ. ಈ ವಿಚಾರವಾಗಿ ಉಕ್ರೇನ್ ನಾಗರಿಕರು ಕೂಡಾ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ದ್ವೇಷಭಾವನೆ ಹೊಂದಿದ್ದಾರೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಲು ಹರ ಸಾಸಹ ಮಾಡುತ್ತಿದ್ದು, ಪೋಲಂಡ್ ಗಡಿಯಲ್ಲಿ ಅತಂತ್ರರಾಗಿದ್ದಾರೆ. ಮಾತ್ರವಲ್ಲದೆ ರೈಲು, ಕಾರು ಅಥವಾ ಬಸ್‍ನಲ್ಲಿ ಯುದ್ಧಪೀಡಿತ ಪ್ರದೇಶಗಳಿಂದ ತಪ್ಪಿಸಿಕೊಂಡಿರುವ ಹಲವು ವಿದ್ಯಾರ್ಥಿಗಳು ದೇಶದ ಗಡಿಬೇಲಿ ದಾಟಲು ಹಲವು ಮೈಲುಗಳನ್ನು ನಡೆದಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!