ಪಂಜಾಬ್: ಪ್ರಧಾನಿ ಭಧ್ರತಾ ಲೋಪ, ಪೊಲೀಸರಿಂದಲೇ ಮಾರ್ಗದ ಮಾಹಿತಿ ಸೋರಿಕೆ
ಪಂಜಾಬ್ : ದೇಶದಲ್ಲಿ ನಡೆದ ಅತೀ ದೊಡ್ಡ ಭದ್ರತಾ ಲೋಪದ ಮೊದಲೇ ನಿಗದಿಯಾಗಿದ್ದ ರ್ಯಾಲಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಪ್ರಧಾನಿ ಮೋದಿ ಪಂಜಾಬ್ನಿಂದ ಹಿಂದಿರುಗಿದ್ದರು. ನಿನ್ನೆ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಫಿರೋಜ್ಪುರದಲ್ಲಿ ಪ್ರತಿಭಟನಾ ನಿರತ ರೈತರ ದಿಗ್ಬಂಧನದಿಂದಾಗಿ ಫ್ಲೈಓವರ್ನಲ್ಲಿ ಸಿಲುಕಿಕೊಂಡಿತ್ತು.
ಮೋದಿ ಯಾವ ಮಾರ್ಗದಲ್ಲಿ ಸಂಚರಿಸುತ್ತಾರೆ ಎನ್ನುವುದು ಪಂಜಾಬ್ ಪೊಲೀಸರಿಗೆ ಮಾತ್ರ ತಿಳಿದಿತ್ತು. ಹೀಗಾಗಿ ಭದ್ರತಾ ಲೋಪದ ಬಗ್ಗೆ ಪಂಜಾಬ್ ಪೊಲೀಸರ ಬಗ್ಗೆ ಅನುಮಾನ ಮೂಡುವಂತೆ ಆಗಿತ್ತು.
ಹೆಲಿಕಾಪ್ಟರ್ನಲ್ಲಿ ತೆರಳಬೇಕಿದ್ದ ಪ್ರಧಾನಿ ಮೋದಿ ಹವಾಮಾನ ಸೂಕ್ತವಾಗಿಲ್ಲದ ಕಾರಣ ರಸ್ತೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಪಂಜಾಬ್ ಪೊಲೀಸರು ರಸ್ತೆ ಮಾರ್ಗದ ಭದ್ರತೆಯನ್ನು ಖಚಿತಪಡಿಸಿದ ಬಳಿಕವೇ ಪ್ರಧಾನಿ ಮೋದಿ ಬೆಂಗಾವಲು ವಾಹನ ರಸ್ತೆ ಮಾರ್ಗದಲ್ಲಿ ಹೊರಟಿತ್ತು.
ಈ ಶಂಕೆಯ ನಡುವೆಯೇ ಭಾರತೀಯ ಕಿಸಾನ್ ಯೂನಿಯನ್ ಭದ್ರತಾ ಲೋಪದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದೆ. ಬಿಕೆಯು ಸುರ್ಜೀತ್ ಸಿಂಗ್ ಫೂಲ್ ಪಂಜಾಬ್ ಪೊಲೀಸರೇ ಪ್ರಧಾನಿಯವರ ರಸ್ತೆ ಮಾರ್ಗದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ್ದಾರೆ.
ದೆಹಲಿಯ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ಹಾಗೂ ಲಖೀಂಪುರ ಹಿಂಸಾಚಾರ ಪ್ರಕರಣಗಳಲ್ಲಿ ನಷ್ಟ ಅನುಭವಿಸಿದ ರೈತರಿಗೆ ಕೇಂದ್ರದಿಂದ ಈವರೆಗೆ ಯಾವುದೇ ಪರಿಹಾರ ದೊರಕಿರಲಿಲ್ಲ . ಹೀಗಾಗಿ ನಾವು ಪ್ರತಿಭಟನೆ ಮಾಡಲು ನಿರ್ಧರಿಸಿದೆವು. ಬಟಿಂಡಾಗೆ ಅವರು ರಸ್ತೆ ಮಾರ್ಗದಲ್ಲಿ ಬರಲಿದ್ದಾರೆ ಎಂಬ ಮಾಹಿತಿ ನಮಗೆ ತಿಳಿಯಿತು.
ಅಲ್ಲಿ ಹೆಲಿಪ್ಯಾಡ್ ಕೂಡ ನಿರ್ಮಾಣವಾಗಿತ್ತು. ಆದರೆ ಪೊಲೀಸರು ನಮಗೆ ಅವರು ರಸ್ತೆ ಮಾರ್ಗದಲ್ಲಿ ಬರುತ್ತಾರೆ ಎಂದು ಮಾಹಿತಿ ನೀಡಿದರು. ಮೊದಲು ನಮಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದೆನಿಸಿತು. ಪೊಲೀಸರು ನೀಡಿದ ಮಾಹಿತಿಯನ್ನೇ ಆಧರಿಸಿ ನಾವು ಫ್ಲೈಓವರ್ನಲ್ಲಿ ಮೋದಿಯ ಬೆಂಗಾವಲು ವಾಹನವನ್ನು ತಡೆಯಲು ಯೋಜನೆ ರೂಪಿಸಿದೆವು ಎಂದು ಹೇಳಿದ್ದಾರೆ.