ಪ್ರಧಾನಿ ಪಂಜಾಬ್ ಭೇಟಿ ವೇಳೆ ಬೆಂಗಾವಲು ವಾಹನ ಬಳಿ ಬಿಜೆಪಿ ಕಾರ್ಯಕರ್ತರ ಘೋಷಣೆ- ವಿಡಿಯೋ ವೈರಲ್

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಮೊಗಾ-ಫಿರೋಜ್‌ಪುರ ರಸ್ತೆ ಮೇಲ್ಸೇತುವೆ ಬಳಿ ಪ್ರತಿಭಟನಾಕಾರರು ಅಡ್ಡಗಟ್ಟಿ ಭದ್ರತಾ ಲೋಪ ಉಂಟಾದ ಘಟನೆಗೆ ಸಂಬಂಧಿಸಿ ಹೊಸ ವಿಡಿಯೋವೊಂದು ಹರಿದಾಡುತ್ತಿದ್ದು ಭಾರೀ ಸುದ್ದಿಯಾಗುತ್ತಿದೆ. 

ವಿಡಿಯೊದಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ವಾಹನದ ಬಳಿ ಬಿಜೆಪಿ ಕಾರ್ಯಕರ್ತರ ಗುಂಪೊಂದು ಬಂದು ಬಿಜೆಪಿ ಜಿಂದಾಬಾದ್ ಎಂದು ಕೂಗಿ ರೈತ ಸಂಘಟನೆಗಳ ಕಾರ್ಯಕರ್ತರನ್ನು ಮತ್ತು ಸ್ಥಳದಲ್ಲಿದ್ದ ಇತರರನ್ನು ಪ್ರಚೋದಿಸುತ್ತಿರುವಂತೆ ಕಂಡುಬರುತ್ತಿದೆ. ಪ್ರಧಾನಿಯವರ ಭೇಟಿ ವೇಳೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. 

ಮೊನ್ನೆ ಜನವರಿ 5ರಂದು ಪಂಜಾಬ್ ಭೇಟಿ ವೇಳೆ ರೈತ ಸಂಘಟನೆಗಳ ಕಾರ್ಯಕರ್ತರಿಂದ ಫೆರೋಜ್ ಪುರ್ ಎಂಬಲ್ಲಿ ಪ್ರತಿಭಟನೆ ಎದುರಾಗಿ ಪ್ರಧಾನಿ ಮೋದಿ ಸಂಚರಿಸುತ್ತಿದ್ದ ಮತ್ತು ಅವರ ಬೆಂಗಾವಲು ವಾಹನಗಳು 20 ನಿಮಿಷ ರಸ್ತೆಯಲ್ಲಿಯೇ ಸ್ಥಗಿತ ಗೊಂಡಿದ್ದವು. ರೈತರು ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡುತ್ತಿದ್ದಂತೆ ಕೇಸರಿ ಪಕ್ಷ ಬಿಜೆಪಿಯ ಕಾರ್ಯಕರ್ತರು ಕೂಡ ರಸ್ತೆಯನ್ನು ತಡೆಯೊಡ್ಡಿ ಪ್ರತಿಭಟನೆ ಮಾಡಿದ್ದಾರೆ.

ವಿಡಿಯೊದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಕಪ್ಪು ಬಣ್ಣದ ಬುಲ್ಲೆಟ್ ಪ್ರೂಫ್ ಎಸ್ ಯುವಿ ಕಾರಿಗೆ ಹತ್ತಿರವಾಗಿ ಮತ್ತೊಂದು ದಾರಿಯಲ್ಲಿ ಘೋಷಣೆ ಕೂಗುತ್ತಾ ಸಾಗುತ್ತಿದ್ದಾರೆ. ಈ ವಿಡಿಯೊದ ನಿಖರತೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ರೈತರು ಪ್ರಧಾನಿಯವರ ಬೆಂಗಾವಲು ಪಡೆಯ ಕಡೆಗೆ ಹೋಗಲು ಯಾವುದೇ ಪ್ರಯತ್ನ ಮಾಡಲಿಲ್ಲ, ಆದ್ದರಿಂದ ಅವರ ಭದ್ರತೆಗೆ ಬೆದರಿಕೆಯ ಹೇಳಿಕೆಯು ಅಲ್ಲಿ ನಿಜವಾಗಿ ನಡೆದ ಘಟನೆಗಿಂತ ವ್ಯತಿರಿಕ್ತವಾಗಿದ್ದು ಉತ್ಪ್ರೇಕ್ಷೆಯಾಗಿದೆ ಎಂಬುದು ವೀಡಿಯೊದಿಂದ ಸ್ಪಷ್ಟವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚ ಆರೋಪಿಸಿದೆ.

ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪವಾಗಿರುವುದರಿಂದ ಪಂಜಾಬ್ ನ ಚರಂಜಿತ್ ಸಿಂಗ್ ಚನ್ನಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಹರ್ಯಾಣ ಮುಖ್ಯಮಂತ್ರಿ ಎಂ ಎಲ್ ಖಟ್ಟರ್ ಒತ್ತಾಯಿಸಿದ್ದಾರೆ. 

ಮುಖ್ಯಮಂತ್ರಿ ಖಟ್ಟರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಒ ಪಿ ಧನ್ ಕರ್ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ, ಇದಕ್ಕೂ ಮೊದಲು ಅವರು ಪ್ರಧಾನಿ ಮೋದಿಯವರ ದೀರ್ಘಾಯಸ್ಸಿಗಾಗಿ ಸ್ಪೀಕರ್ ಗಿಯನ್ ಚಂದ್ ಗುಪ್ತ ಅವರ ಜೊತೆಗೆ ಪಂಚಕುಲ ದೇವಾಲಯದಲ್ಲಿ ಯಜ್ಞದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!