ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ ಮೋದಿ
ಹೊಸದಿಲ್ಲಿ ಜ.5 : ಪಂಜಾಬ್ನ ಹುಸೈನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ತೆರಳುತಿದ್ದ ವೇಳೆ ಭದ್ರತಾ ಲೋಪದಿಂದಾಗಿ 20 ನಿಮಿಷಗಳ ಕಾಲ ಫ್ಲೈ ಓವರ್ ನಲ್ಲಿ ಸಿಲುಕಿದ ಘಟನೆ ಇಂದು ನಡೆದಿದೆ.
ಭಟಿಂಡಾಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರು ಹುಸೈನಿವಾಲಾಕ್ಕೆ ತೆರಳುತ್ತಿದ್ದ ವೇಳೆ ಸ್ಮಾರಕದಿಂದ ಸುಮಾರು 30 ಕಿಮೀ ದೂರದಲ್ಲಿ ಫ್ಲೈಓವರ್ನಲ್ಲಿ ಪ್ರಧಾನಿಯ ವಾಹನ ಮತ್ತು ಬೆಂಗಾವಲು ಪಡೆ ಸಾಗುತ್ತಿದ್ದಾಗ ಪ್ರತಿಭಟನಾಕಾರರು ರಸ್ತೆಗೆ ಅಡ್ಡಿಯುಂಟು ಮಾಡಿದ್ದರು. ಇದರಿಂದ ಪ್ರಧಾನಿ ವಾಹನ 15-20 ನಿಮಿಷ ಅಲ್ಲಿಯೇ ಬಾಕಿಯಾಯಿತು. ಪಂಜಾಬ್ ಸರಕಾರಕ್ಕೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ವಾಯು ಮಾರ್ಗದಲ್ಲಿ ಸಾಗಲು ಸಾಧ್ಯವಿಲ್ಲದೇ ಇದ್ದಲ್ಲಿ ರಸ್ತೆ ಮೂಲಕ ಸಾಗಲು ಏರ್ಪಾಟು ಮಾಡಬೇಕಿದ್ದರೂ ಸೂಕ್ತ ಏರ್ಪಾಟು ಮಾಡಿರದೇ ಇದ್ದುದರಿಂದ ತಮ್ಮ ಕಾರ್ಯಕ್ರಮ ರದ್ದುಗೊಳಿಸಿ ಮರಳಿ ಭಟಿಂಡಾ ವಿಮಾನ ನಿಲ್ದಾಣಕ್ಕೆ ತೆರಳಿದರು.
ಘಟನೆಯ ಬಳಿಕ ಬಟಿಂಡಾ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ನಾನು ಜೀವಂತವಾಗಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ್ದಾರೆ.
ಘಟನೆ ಯನ್ನು ಕೇಂದ್ರ ಗೃಹ ಸಚಿವಾಲಯ ಇದೊಂದು ದೊಡ್ಡ ಭದ್ರತಾ ಲೋಪ ಎಂದೂ ಬಣ್ಣಿಸಿದ್ದು, ಪಂಜಾಬ್ ರಾಜ್ಯದ ಆಡಳಿತ ಕಾಂಗ್ರೆಸ್ ಸರಕಾರ ಈ ಭದ್ರತಾ ಲೋಪಕ್ಕೆ ಕಾರಣ ಆರೋಪಿಸಿದೆ. ಈ ಘಟನೆ ಕುರಿತು ಪಂಜಾಬ್ ಸರಕಾರದಿಂದ ವಿಸ್ತೃತ ವರದಿಯನ್ನು ಗೃಹ ಸಚಿವಾಲಯ ಕೇಳಿದೆಯಲ್ಲದೆ ಅದಕ್ಕೆ ಯಾರು ಜವಾಬ್ದಾರರೆಂದು ಪತ್ತೆ ಹಚ್ಚಿ ಕ್ರ್ರಮಕೈಗೊಳ್ಳಬೇಕೆಂದೂ ಸೂಚಿಸಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಫಿರೋಝ್ಪುರ್ನಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಭಾಗವಹಿಸದೇ ಇದ್ದ ಕಾರಣ, ಹೆಚ್ಚಿನ ಭಾಷಣಕಾರರು ಆಗಮಿಸಿದ್ದರೂ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
“ಭಟಿಂಡಾಗೆ ಇಂದು ಆಗಮಿಸಿದ್ದ ಪ್ರಧಾನಿ, ಅಲ್ಲಿಂದ ಸ್ಮಾರಕಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುವುದೆಂದು ಈ ಹಿಂದೆ ನಿಗದಿಯಾಗಿತ್ತಾದರೂ ಮಳೆ ಹಾಗೂ ಮಂಜಿನ ವಾತಾವರಣದಿಂದಾಗಿ ಅವರು ಸುಮಾರು 20 ನಿಮಿಷ ಅಲ್ಲಿಯೇ ಬಾಕಿ ಯಾಗಿದ್ದರು. ಆದರೆ ಪರಿಸ್ಥಿತಿ ಸುಧಾರಿಸದೇ ಇದ್ದಾಗ ರಸ್ತೆ ಮೂಲಕ ಸಾಗಲು ನಿರ್ಧರಿಸಲಾಯಿತು. ರಸ್ತೆ ಮೂಲಕ ಸಾಗಲು ಎರಡು ಗಂಟೆಗೂ ಅಧಿಕ ಸಮಯ ತಗಲುವುದೆಂದು ತಿಳಿದಿದ್ದರೂ ಸೂಕ್ತ ಭದ್ರತಾ ಏರ್ಪಾಟುಗಳ ಬಗ್ಗೆ ಪಂಜಾಬ್ ಡಿಜಿಪಿಯವರಿಂದ ಮಾಹಿತಿ ಪಡೆದು ರಸ್ತೆ ಮೂಲಕ ಸಾಗಲು ನಿರ್ಧರಿಸಿದ್ದರು, ಎಂದು ಗೃಹ ಸಚಿವಾಲಯ ಹೇಳಿದೆ.
ಪ್ರಧಾನಿ ಇಂದು ಪಂಜಾಬ್ನಲ್ಲಿ ರೂ. 42,750 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದರು. ದಿಲ್ಲಿ-ಅಮೃತಸರ್ ಕತ್ರಾ ಎಕ್ಸಪ್ರೆಸ್ವೇ, ಅಮೃತಸರ್-ಉನಾ ಚತುಷ್ಪಥ ಯೋಜನೆಗೆ ಶಿಲಾನ್ಯಾಸ, ಕಪುರ್ತಲಾ ಮತ್ತು ಹೋಶಿಯಾರ ಪುರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಿಲಾನ್ಯಾಸ ಕೂಡ ಇಂದು ನೆರವೇರಿಸಲಿದ್ದರು.
ವಿವಾದಾತ್ಮಕ ಕೃಷಿ ಕಾನೂನು ವಾಪಸಾತಿ ನಂತರ ಇದೇ ಮೊದಲ ಬಾರಿ ಪ್ರಧಾನಿ ಪಂಜಾಬ್ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿತ್ತು.