ಭೋಪಾಲ್ : ಮಹಾತ್ಮ ಗಾಂಧಿಗೆ ಅವಮಾನ, ನಾಥೂರಾಮ್ ಗೋಡ್ಸೆ ಹೊಗಳಿದ ಆರೋಪ ಕಾಳಿಚರಣ್ ಮಹಾರಾಜ್ ಬಂಧನ

ಭೋಪಾಲ್ : ಮಹಾತ್ಮ ಗಾಂಧಿಯವರನ್ನು ಅವಮಾನಿಸಿ, ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ಆರೋಪದ ಮೇಲೆ ಮಹಾರಾಷ್ಟ್ರದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಪೊಲೀಸರ ತಂಡ ಅವರನ್ನು ಅರೆಸ್ಟ್ ಮಾಡಿದೆ. ನಂತರ ಅವರನ್ನು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಕರೆದೊಯ್ದಿದ್ದಾರೆ. ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್ ಸಭೆಯಲ್ಲಿ ಪಾಲ್ಗೊಂಡು ಕಾಳಿಚರಣ್ ಮಹಾರಾಜ್ ವಿವಾದಾತ್ಮಕ ಭಾಷಣ ಮಾಡಿದ್ದು, ಈ ಭಾಷಣದಲ್ಲಿ ಮೋಹನ್‌ದಾಸ್ ಕರಮಚಂದ್ ಗಾಂಧಿಯವರು ಭಾರತ ದೇಶವನ್ನು ನಾಶಪಡಿಸಿದ್ದಾರೆ. ಅವರನ್ನು ಕೊಂದ ನಾಥೂರಾಮ್ ಗೋಡ್ಸೆಗೆ ನಮಸ್ಕಾರಗಳು. ಹಿಂದೂ ಧರ್ಮವನ್ನು ರಕ್ಷಿಸಲು ಜನರು ಒಳ್ಳೆಯ ಹಿಂದೂ ನಾಯಕನನ್ನು ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.

ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಳಿಚರಣ್ ಭಾಷಣದ ವೀಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!