ಬೆಂಗಳೂರು: ಯುವಕನಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿದ ಎಸ್ಐ ಅಮಾನತು
ಬೆಂಗಳೂರು: ನಗರದಲ್ಲಿ ಯುವಕನೊಬ್ಬನ ಮೇಲೆ ದೌರ್ಜನ್ಯ ಎಸಗಿ, ಮೂತ್ರ ಕುಡಿಸಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಬುಧವಾರ ಅಮಾನತು ಮಾಡಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಇಲಾಖಾ ವಿಚಾರಣೆಯ ನಂತರ ಸಬ್ ಇನ್ಸ್ಪೆಕ್ಟರ್ ಹರೀಶ್ ಕೆ ಎನ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ‘ಕರ್ತವ್ಯ ಲೋಪ ಹಾಗೂ ದೂರು ದಾಖಲಿಸಿಕೊಳ್ಳದ’ ಆರೋಪ ಹೊರಿಸಲಾಗಿದೆ.
ಕೆಲವು ದಿನಗಳ ಹಿಂದೆ 23 ವರ್ಷದ ತೌಸಿಫ್ ಎಂಬ ಯುವಕನಿಗೆ ಮೂತ್ರ ಕುಡಿಯುವಂತೆ ಪೊಲೀಸರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳದಲ್ಲಿನ ಉದ್ವಿಗ್ನತೆ ಮತ್ತು ತೌಸಿಫ್ ಅವರ ಸಂಬಂಧಿಕರ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.
ನೆರೆಹೊರೆಯವರೊಂದಿಗೆ ಜಗಳವಾಡಿದ್ದಕ್ಕಾಗಿ ಪೊಲೀಸರು ತನ್ನ ಮಗನನ್ನು ಗುರುವಾರ ಮಧ್ಯರಾತ್ರಿ 1 ಗಂಟೆಗೆ ಕರೆದೊಯ್ದಿದ್ದರು ಎಂದು ತೌಸಿಫ್ ತಂದೆ ಅಸ್ಲಾಂ ಹೇಳಿದ್ದಾರೆ. ಪೊಲೀಸರು ಥಳಿಸಿದ್ದು, ಬಿಡುಗಡೆಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು. ನೋವಿನಿಂದ ನರಳುತ್ತಿದ್ದ ತೌಸಿಫ್, ಪೊಲೀಸರು ತನ್ನ ಕೂದಲನ್ನು ಕತ್ತರಿಸಿ, ಹೊಟ್ಟೆಯ ಕೆಳಗೆ ಥಳಿಸಿ ನಂತರ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಹೇಳುವ ವಿಡಿಯೋ ಸಹ ವೈರಲ್ ಆಗಿತ್ತು.