ಕ್ರಮವತ್ತಾದ ಹೆಜ್ಜೆ ಗೆಜ್ಜೆಗಳೊಂದಿಗೆ ರಂಗಸ್ಥಳದಲ್ಲಿ ಮಿಂಚುತ್ತಿರುವ ಕ್ರಮಧಾರಿ

ಬರಹ ::ನಾಗರತ್ನ ಜಿ ,ಯಕ್ಷಗಾನ ಕಲಾವಿದೆ

“ಸಾಧನೆಯ ಸಾಲಿನಲ್ಲಿ ನಿಂತು ಸ್ವತಃ ಪರಿಶ್ರಮ ಪಟ್ಟು ಮುಂದೆ ಸಾಗುವವನಿಗೆ ಕೀರ್ತಿ ಸಲ್ಲುತ್ತದೆಯೇ ವಿನಃ ಮತ್ತೊಬ್ಬರ ಪರಿಶ್ರಮದ ಮೇಲೆ ಅವಲಂಬಿತ ಮೈಗಳ್ಳನಿಗಲ್ಲ”* ಎಂಬ ಮಾತಿನಲ್ಲಿ ಅಪಾರ ನಂಬಿಕೆಯನ್ನಿಟ್ಟು ಸ್ವ ಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿಭಾವಂತ, ಸಮರ್ಥ ಹವ್ಯಾಸಿ ಯಕ್ಷಗಾನ ಕಲಾವಿದ ವೇದಾಂತ ಕ್ರಮಧಾರಿ ಕರ್ಜೆ.

ಇವರು ಫೆಬ್ರವರಿ 7, 1998 ರಂದು ವೆಂಕಟೇಶ ಕ್ರಮಧಾರಿ ಮತ್ತು ಗೀತಾ ಕ್ರಮಧಾರಿ ಇವರ ಮಗನಾಗಿ ಕರ್ಜೆಯಲ್ಲಿ ಜನಿಸಿದರು. ಇವರ ತಂದೆ ವೆಂಕಟೇಶ ಕ್ರಮಧಾರಿ ಬಾರ್ಕೂರು ಹೇರಾಡಿ ನ್ಯಾಷನಲ್ ಐಟಿಐ ಇಲ್ಲಿ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಸದ್ಗೃಹಿಣಿ. ತಮ್ಮ ಒಬ್ಬನೇ ಮುದ್ದಿನ ಮಗನಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಿ ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳುವಂತೆ ಮಾಡುವಲ್ಲಿ ಇವರ ಶ್ರಮ ಅಪಾರ. ತಂದೆ ತಾಯಿಯ ಆಸೆಗೆ ತಣ್ಣೀರೆರೆಚದೆ ಅವರು ಹಾಕಿಕೊಟ್ಟ ಹಾದಿಯಲ್ಲೇ ಮುನ್ನಡೆಯುತ್ತಿರುವ ಸನ್ನಡತೆಯ ವ್ಯಕ್ತಿ ಇವರೆಂದರೆ ತಪ್ಪಾಗಲಾರದು. ಇವರ ಪ್ರಾಥಮಿಕ ವಿದ್ಯಾಭ್ಯಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕರ್ಜೆ ಇಲ್ಲಿ ಆದರೆ,  ಎಸ್ ಆರ್ ಪಬ್ಲಿಕ್ ಶಾಲೆ ಹೆಬ್ರಿ ಇಲ್ಲಿ ಪ್ರೌಢಶಾಲಾ ಶಿಕ್ಷಣ ನೆರವೇರಿತು. ನಂತರ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಅನ್ನು ಆಯ್ಕೆ ಮಾಡಿ ಕೊಂಡು ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಆ ಬಳಿಕ ಪುತ್ತೂರಿನಲ್ಲಿ ನೆಲೆಸಿ ಅಲ್ಲಿ ಹೆಸರುವಾಸಿಯಾದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿ ತನ್ನ ಆಸಕ್ತಿಯ ಕ್ಷೇತ್ರವಾದ ಕಂಪ್ಯೂಟರ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. 

ಬೇರೆಯವರ ಕೈಕೆಳಗೆ ಕೆಲಸ ಮಾಡಲು ಇಚ್ಚಿಸದ ಇವರು ತಾನು ಸ್ವತಂತ್ರವಾಗಿ ಏನನ್ನಾದರೂ ಮಾಡಬೇಕು ಎಂದುಕೊಂಡರು. ಈ ಆಲೋಚನೆ ಬಂದ ತಕ್ಷಣ ತಡಮಾಡದೇ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾದರು. ಅವರ ಕನಸಿನ ಕೂಸೇ ವಿ – ಟೆಕ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ. ಹೊಸತಾಗಿ ಉದ್ಯಮವನ್ನು ಪ್ರಾರಂಭಿಸಿರುವ ಇವರಿಗೆ  ಹಿರಿಯರಾದ ರವೀಂದ್ರ ಕ್ರಮಧಾರಿ, ಸಂದೀಪ ಕುಮಾರ್ ಮಂಜ ಹಾಗೂ ಮಾವ ಮಂಜುನಾಥ ಉಪಾಧ್ಯರು ಬೆಂಬಲವಾಗಿ ನಿಂತಿದ್ದು ಇದರಲ್ಲಿ ಯಶಸ್ವಿಯಾಗಿ ಮುನ್ನಡೆಯುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅವರ ಸಹಾಯ ಸಹಕಾರದಿಂದ ತಾನು ಉದ್ಯಮದಲ್ಲಿ ಯಾವುದೇ ತೊಂದರೆ, ತೊಡಕುಗಳಿಲ್ಲದೆ ಮುಂದುವರೆಯಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ. ಕುಂದಾಪುರದ ಹೃದಯ ಭಾಗದಲ್ಲಿರುವ ಶ್ರೀ ಸಾಯಿ ಸೆಂಟರ್, ಲಕ್ಷ್ಮೀ ನಾರಾಯಣ ದೇವಸ್ಥಾನದ ಮುಂಭಾಗದಲ್ಲಿ ಇರುವ ಕಟ್ಟಡದಲ್ಲಿ ಕಂಪ್ಯೂಟರ್ ಕಲಿಯಲು ಆಸಕ್ತಿ ಇರುವವರಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಜೊತೆಗೆ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸ್ ಕೂಡಾ ಲಭ್ಯವಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. 


ಅಪ್ಪ ವೆಂಕಟೇಶ ಕ್ರಮಧಾರಿ ಹವ್ಯಾಸಿ ಕಲಾವಿದರಾಗಿ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ವೇಷ ಮಾಡುತ್ತಿದ್ದರು. ಇವರ ಅಜ್ಜನಿಗೆ ಯಕ್ಷಗಾನ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಯಕ್ಷಗಾನದ ದೊಡ್ಡ ಅಭಿಮಾನಿಯಾಗಿರುವ ಅಜ್ಜ ಹಾಗೂ ಅಪ್ಪನೊಂದಿಗೆ ಚಿಕ್ಕಂದಿನಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದರು. ಯಕ್ಷಗಾನದಲ್ಲಿ ಬರುವ ವೈವಿಧ್ಯಮಯ ವೇಷಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ಅಲ್ಲದೇ ಮನೆಗೆ ಬಂದು ತಾನು ನೋಡಿದ ಪಾತ್ರಗಳನ್ನು ತನ್ನ ಪುಟ್ಟ ಹೆಜ್ಜೆಗಳಿಂದ, ತೊದಲು ನುಡಿಗಳಿಂದ ಅನುಕರಣೆ ಮಾಡಿ ಮನೆಯವರ ಮನಸ್ಸಿಗೆ ಮುದ ನೀಡುತ್ತಿದ್ದರು. ಹೀಗೆ ಮನೆಯಲ್ಲಿಯೇ ಯಕ್ಷಗಾನದ ವಾತಾವರಣ ಇದ್ದುದರಿಂದ ಸಹಜವಾಗಿ ಯಕ್ಷಗಾನದತ್ತ ಆಕರ್ಷಿತರಾದರು. ಅಚ್ಚರಿಯ ವಿಷಯವೇನೆಂದರೆ ಇವರು ಯಾವುದೇ ಯಕ್ಷಗಾನ ತರಗತಿಗಳಿಗೆ ಹೋಗಿ ಸಾಂಪ್ರದಾಯಿಕವಾಗಿ ಹೆಜ್ಜೆಗಳನ್ನು ಕಲಿತಿಲ್ಲ. ಆದರೂ ಇವರ ಲಯ, ಹೆಜ್ಜೆಗಾರಿಕೆಯ ಗತ್ತು, ದೇಹಭಾಷೆ ಯಕ್ಷಗಾನಕ್ಕೆ ಹೇಳಿ ಮಾಡಿಸಿದಂತಿದೆ. ಗಣಪತಿ ಹೆಗಡೆ ಕಣ್ಣಿಮನೆ ಅವರ ಅಭಿಮಾನಿಯಾಗಿರುವ ಇವರು ಅವರ ವಿಡಿಯೋಗಳನ್ನು  ನೋಡುತ್ತಲೇ ಕಲಿತಿದ್ದು ಜಾಸ್ತಿ. ಹಾಗಾಗಿ ಇವರ ನೃತ್ಯ ಶೈಲಿಯಲ್ಲಿ ಕಣ್ಣಮನೆಯವರ ಪ್ರಭಾವವನ್ನು ಗುರುತಿಸಬಹುದು. 


ಇವರು ನಾಲ್ಕನೆಯ ತರಗತಿಯಲ್ಲಿ ಇರುವಾಗ ಉಡುಪಿ ಕೃಷ್ಣ ಮಠದವರು ನಡೆಸಿದ ಚಿಣ್ಣರ ಅಂಗಳ ಕಾರ್ಯಕ್ರಮದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿದ್ದು ಎಲ್ಲರಿಂದ ಪ್ರಶಂಸಿಸಲ್ಪಟ್ಟಿತ್ತು. ಇದರಿಂದ ಸ್ಪೂರ್ತಿ ಪಡೆದ ಇವರು ಮತ್ತಷ್ಟು ಚೆನ್ನಾಗಿ ಅಭ್ಯಾಸ ಮಾಡಿ ಐದನೆಯ ತರಗತಿಯಲ್ಲಿ ಇರುವಾಗ ಈ ಟಿವಿ ಕನ್ನಡದವರು ನಡೆಸಿದ *”ಬಾಲಗಂಧರ್ವ”* ಎನ್ನುವ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತದವರೆಗೆ ಹೋಗಿದ್ದಾರೆ. ಅಲ್ಲಿ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಕಂಪನ್ನು ಪಸರಿಸಿ ನಿರ್ಣಾಯಕರ ಹೊಗಳಿಕೆಗೆ ಪಾತ್ರರಾದವರು.

ವಿನಾಯಕ ಯಕ್ಷಗಾನ ಸಂಘ, ತೆಂಕಬೆಟ್ಟು ಉಪ್ಪೂರು, ಯಕ್ಷ ಸುಮನಸಾ ವ್ಯವಸಾಯೀ ಕಲಾಂತರಂಗ ಕೋಟ, ಬೈಕಾಡಿ ಅಮ್ಮನವರ ಸಂಘ, ಉಪ್ಪೂರು, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ, ಇದರ ಕಲಾವಿದರಾಗಿ ನಾಡಿನ ಹಲವಾರು ಕಡೆ ಯಕ್ಷಗಾನ ಪ್ರದರ್ಶನ ನೀಡಿರುವ ಹೆಮ್ಮೆ ಇವರದು. ನಂತರ ಯಕ್ಷಗಾನದ ಪ್ರಖ್ಯಾತ ಸ್ತ್ರೀ ವೇಷಧಾರಿ ಹಾಗೂ ಗುರುಗಳಾದ ಎಂ ಶ್ರೀಧರ ಹೆಬ್ಬಾರ್, ಕರ್ಜೆ ಇವರ ನಿರ್ದೇಶನದಲ್ಲಿ ಕುಶಲವದ ಕುಶನಾಗಿ ಪ್ರಬುದ್ಧ ಅಭಿನಯ ನೀಡಿದರು. ಸುಧನ್ವಾರ್ಜುನದ ಸುಧನ್ವ, ಮೀನಾಕ್ಷಿ ಕಲ್ಯಾಣದ ಶೂರಸೇನ, ಯಾವುದೇ ಪ್ರಸಂಗದ ದೇವೇಂದ್ರನ ಬಲ, ಸುದರ್ಶನ ವಿಜಯದ ಸುದರ್ಶನ, ಭಸ್ಮಾಸುರ ಮೋಹಿನಿಯ ವಿಷ್ಣು, ರತಿಕಲ್ಯಾಣದ ಮನ್ಮಥ, ಬ್ರಹ್ಮ ಕಪಾಲದ ಮನ್ಮಥ, ವೀರಮಣಿ ಕಾಳಗದ ಶುಭಾಂಗ, ರುಕ್ಮಾಂಗ, ಅಭಿಮನ್ಯು ಕಾಳಗದ ಅಭಿಮನ್ಯು, ಶ್ವೇತಕುಮಾರ ಚರಿತ್ರೆಯ ಸಿತಕೇತ ಹಾಗೂ ಲೋಹಿತನೇತ್ರ, ದಕ್ಷಯಜ್ಞದ ದಕ್ಷ ಹೀಗೆ ವೈವಿಧ್ಯಮಯ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. ಎಲ್ಲಪ್ರಸಂಗದ ಖಳನಾಯಕನ ಪಾತ್ರ ಹಾಗೂ ಪುಂಡುವೆಷ ಎಂದರೆ ಇವರಿಗೆ ಬಲು ಪ್ರೀತಿ. ಪುತ್ತೂರಿನಲ್ಲಿ ನಡೆದ ತೆಂಕುತಿಟ್ಟಿನ ಯಕ್ಷಗಾನದಲ್ಲೂ ವೇಷ ಮಾಡುವ ಮೂಲಕ ತಾನು ಎರಡೂ ತಿಟ್ಟಿಗೂ ಸೇರಿದವರು ಎಂಬುದನ್ನು ಸಾಬೀತು ಪಡಿಸಿದ್ದಾರೆ. 


ಯಕ್ಷಗಾನ ನೋಡುವುದು, ಹಿಮ್ಮೇಳದ ವಿವಿಧ ವಿಭಾಗಗಳನ್ನು ಅಭ್ಯಸಿಸುವುದು, ಮುಖವರ್ಣಿಕೆ ಅಭ್ಯಾಸ ಮಾಡುವುದು ಇವರ ಇತರ ಆಸಕ್ತಿಗಳು. ಅತಿಥಿ ಕಲಾವಿದರಾಗಿ ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಾದ ಪ್ರಸನ್ನ ಶೆಟ್ಟಿಗಾರ್, ಹಳ್ಳಾಡಿ ಜಯರಾಮ ಶೆಟ್ಟಿ, ನೀಲ್ಕೋಡು ಶಂಕರ ಹೆಗಡೆ, ತೀರ್ಥಳ್ಳಿ ಗೋಪಾಲ ಆಚಾರಿ, ಶ್ರೀಧರ ಹೆಗಡೆ ಕಾಸರಕೋಡು ಇವರ ಜೊತೆ ವೇಷ ಮಾಡಿದ ಖುಷಿ ಇದೆ ಎನ್ನುತ್ತಾರೆ. ಬಡಗುತಿಟ್ಟಿನ ಪ್ರಖ್ಯಾತ ಭಾಗವತರಾದ ಸ್ನೇಹಜೀವಿ ಎಂದೇ ಗುರುತಿಸಿಕೊಂಡಿರುವ ಹಾಲಾಡಿ ರಾಘವೇಂದ್ರ ಮಯ್ಯ ಇವರ ನೆಚ್ಚಿನ ಭಾಗವತರು. 

ತಾನು ಕಲಿತ ವಿದ್ಯೆಯನ್ನು ಇತರರಿಗೂ ಕಲಿಸಬೇಕು, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ದಾಟಿಸಬೇಕು ಎಂಬ ಉದ್ದೇಶದಿಂದ ಗೆಳೆಯರಾದ ದಿನೇಶ್ ಕನ್ನಾರ್ ಇವರೊಂದಿಗೆ ಸೇರಿಕೊಂಡು ಕರ್ಜೆಯಲ್ಲಿ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದಾರೆ. ಯಕ್ಷಗಾನದಲ್ಲಿ ತಾನೇನಾದರೂ ಅಲ್ಪ, ಸ್ವಲ್ಪ ಸಾಧಿಸಿದ್ದರೆ ಅದಕ್ಕೆ ಕಾರಣ ತನ್ನ ಅಪ್ಪ, ಅಜ್ಜ, ಗುರುಗಳಾದ ಎಂ ಶ್ರೀಧರ ಹೆಬ್ಬಾರ್, ಕರ್ಜೆ ಹಾಗೂ ಶ್ರೀಕಾಂತ ಕಲ್ಕೂರ್, ಉಪ್ಪೂರು ಇವರ ಪ್ರೋತ್ಸಾಹವೇ ಕಾರಣ ಎಂದು ವಿನೀತರಾಗಿ ನುಡಿಯುತ್ತಾರೆ. ಅಲ್ಲದೇ ಯಾವುದೇ ಹೊಸ ಪಾತ್ರಗಳನ್ನು ಮಾಡಬೇಕಾಗಿ ಬಂದಾಗ ಇವರೆಲ್ಲರೂ ನನಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಆ ಪಾತ್ರ ಉತ್ತಮ ರೀತಿಯಲ್ಲಿ ಮೂಡಿಬರುವಂತೆ ಮಾಡುತ್ತಾರೆ. ಹಾಗಾಗಿ ತನ್ನ ಏಳ್ಗೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ಅವರೆಲ್ಲರಿಗೂ ನಾನು ಈ ಮೂಲಕ ಕೃತಜ್ಞತೆಯನ್ನು ಅರ್ಪಿಸಲು ಅವರು ಬಯಸುತ್ತಾರೆ.
ತುಳಿದಷ್ಟು ಮತ್ತೆ ಬೆಳೆಯುವ ಗರಿಕೆಯಂತಾಗಬೇಕು ನಮ್ಮ ಬದುಕು. ಆಗಲೇ ಸಾಧನೆಯ ತುದಿ ತಲುಪಲು ಸಾಧ್ಯ. ಅಂತೆಯೇ ಯಕ್ಷಗಾನದಲ್ಲಿ ತಾನು ಏನನ್ನಾದರೂ ಸಾಧಿಸಬೇಕು, ವೃತ್ತಿಯಲ್ಲಿ ಏಳ್ಗೆಯನ್ನು ಸಾಧಿಸಿ ನೂರಾರು ಜನರ ಬಾಳಿಗೆ ದಾರಿದೀಪ ವಾಗಬೇಕು ಎಂಬ ಕನಸನ್ನು ಹೊಂದಿರುವ ಇವರಿಗೆ ಗೆಲುವಿನ ಹಾದಿ ಸುಲಭವಾಗಲಿ. ವೃತ್ತಿ ಹಾಗೂ ಪ್ರವೃತ್ತಿಗಳ ನಡುವೆ ಸಮನ್ವಯ ಸಾಧಿಸುವ ಶಕ್ತಿಯನ್ನು ಆ ದೇವರು ನೀಡಲಿ, ಇವರ ಕನಸೆಲ್ಲವೂ ಸಾಕಾರಗೊಳ್ಳಲಿ ಎಂಬ ಶುಭ ಹಾರೈಕೆ. 

ಬರಹ :ನಾಗರತ್ನ ಜಿ ,ಯಕ್ಷಗಾನ ಕಲಾವಿದೆ

1 thought on “ಕ್ರಮವತ್ತಾದ ಹೆಜ್ಜೆ ಗೆಜ್ಜೆಗಳೊಂದಿಗೆ ರಂಗಸ್ಥಳದಲ್ಲಿ ಮಿಂಚುತ್ತಿರುವ ಕ್ರಮಧಾರಿ

  1. ಆಪ್ತ ಸಂಬಂಧಿ ರಾಮಕುಮಾರ್ ಹತ್ವಾರ್, ಬೆಂಗಳೂರು. says:

    ಅಜ್ಜ ಲಕ್ಷ್ಮೀನಾರಾಯಣ ಕ್ರಮಧಾರಿಯವರು, ಮಗ ವೆಂಕಟೇಶ ಕ್ರಮಧಾರಿಯವರು, ಮತ್ತು ಮೊಮ್ಮಗ ವೇದಾಂತ್ ಕ್ರಮಧಾರಿ ಮೂವರೂ ಪ್ರವೃತ್ತಿಯಾಗಿ ಕರಾವಳಿಯ ಹೆಸರಾಂತ ಕಲೆ ಯಕ್ಷಗಾನದಲ್ಲೂ ತಮ್ಮನ್ನು ತೊಡಗಿಸಿಕೊಂಡು ಆಕರ್ಷಣೀಯವಾಗಿ ವೇಷಧರಿಸಿ ಉತ್ತಮ ಅಭಿನಯವನ್ನು ಪ್ರದರ್ಶಿಸುವವರು. ಅಜ್ಜ ಕರ್ಜೆ ಗ್ರಾಮಕ್ಕೆ ಮಾತ್ರವಲ್ಲ ಸುತ್ತ ಮುತ್ತಲಿನ ಜನರಿಗೂ ಅಚ್ಚು ಮೆಚ್ಚಿನ ಉಪಾಧ್ಯಯರು. ಈಗಲೂ ಈ ಇಲಿ ವಯಸ್ಸಿನಲ್ಲೂ ಯಾವುದೇ ವಿಷಯದಲ್ಲೂ ಅವರ ಅನುಭವದ ನುಡಿ ನಡೆಗಳು ಜನಪ್ರಿಯ. ಅವರ ಮಗ ವೆಂಕಟೇಶ್ ಕ್ರಮಧಾರಿಗಳು ತಂದೆಯಂತೆ ಜನಪ್ರಿಯರು. ಹವ್ಯಾಸಿ ಯಕ್ಷಗಾನ ಕಲಾವಿದರು. ಆ ಮನೆಯ ಮೊಮ್ಮಗ ವೇದಾಂತ್ ಅಪ್ಪ, ಅಜ್ಜನ ನೆರಳಲ್ಲಿ ಕಲೆಯನ್ನು ಬಾಲ್ಯದಿಂದಲೇ ಅರಿತು ಅದರಲ್ಲಿ ಒಬ್ಬ ನುರಿತ ಒಳ್ಳೆ ಕಲಾವಿದರಾಗಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಶ್ರೀ ದೇವಿಯ ಅನುಗ್ರಹ ಆ ಸಂಸಾರದ ಪ್ರತಿ ಸದಸ್ಯರನ್ನು ಸದಾ ಆರೋಗ್ಯ, ನೆಮ್ಮದಿ ಯನ್ನು ಅನುಗ್ರಹಿಸಿ ಸುಖದಿಂದಿಡಲಿ ಎಂದು ಹಾರೈಸುವೆನು. ಈ ವರದಿಯನ್ನು ಉತ್ತಮ ಶೈಲಿಯಲ್ಲಿ ಚೆನ್ನಾಗಿ ವಿವರಿಸಿದ ಶ್ರೀಮತಿ ನಾಗರತ್ನರವರಿಗೆ ಅಭಿನಂದನೆಗಳು.

Leave a Reply

Your email address will not be published. Required fields are marked *

error: Content is protected !!