ಕನ್ನಡದ ಭವಿಷ್ಯ ಉಡುಪಿ ಜಿಲ್ಲೆಯಲ್ಲಿ
ಬರಹ:ನೀಲಾವರ ಸುರೇಂದ್ರ ಅಡಿಗ
ಉಡುಪಿ ಜಿಲ್ಲೆಯ ವಿಚಾರದಲ್ಲಿ ಕನ್ನಡದ ಭವಿಷ್ಯದ ಬಗ್ಗೆ ಇಲ್ಲಿನ ಅಭಿಪ್ರಾಯಗಳು ಸತ್ಯವಾಗುತ್ತದೋ ? ನಾನರಿಯೆ ಆದರೆ ರಾಜ್ಯದ ಕನ್ನಡದ ಭವಿಷ್ಯದ ಬಗ್ಗೆ ಸುಮಾರು ವರ್ಷದ ಹಿಂದೆ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕವನದಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ.
ಹೊನ್ನಿನಂತಹ ನುಡಿ ಇದೆ ಭಾರತದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿ, ಮಹನೀಯರು ನಿರ್ಧರಿಸಿದಂತೆ ಇಂಗ್ಲಿಷನ್ನು ಮೂರನೇ ತರಗತಿಯಿಂದಲೇ ಕಲಿಯಲು ಪ್ರಾರಂಭಿಸುತ್ತಾರೆಂಬ ದೇಶ ವಿನಾಶಕವಾದ ಅಮಂಗಳ ವಾರ್ತೆ ಕೇಳಿ ಕುವೆಂಪುರವರು ಈ ರೀತಿ ಬರೆದಿದ್ದರು.
ಪಾರುಮಾಡೆಮ್ಮ ನೀ ಇಂಗ್ಲೀಷಿನಿಂದ
ಪೂತನೇಯ ಅಸುವೀಂಟಿ ಕೊಂದ ಗೋವಿಂದ
ನಮ್ಮ ನುಡಿ ಗೋಮಾತೆಯಾ ಮೆತ್ತ ಗೆಚ್ಚಲಿಗೆ
ಬಯಿಟ್ಟರಾಯ್ತು ಹೊಡೆತುಂಬೆ ನೊರೆ ಹಾಲಿರಲು
ಏಕಯ್ಯ ಈ ಬರುಡು ಪೂತನೀಯ ಹಾಲೋರಿಕೆ
ಹೇ ಕೃಷ್ಣ ಹೇ ಬಾಲಗೋಪಾಲ ಕಂದ
ದೇಶದಲ್ಲಿ ಮೂರನೇ ತರಗತಿಯಿಂದ ಆಂಗ್ಲಭಾಷೆ ಪ್ರಾರಂಭಿಸುವ ಬಗ್ಗೆ ಕುವೆಂಪು ಅಂದೇ ಉಡುಪಿ ಕೃಷ್ಣನ ಮೊರೆ ಹೋಕ್ಕಿದ್ದರು. ಈ ಇಂಗ್ಲೀಷಿನ ಸಾಮೂಹಿಕ ಸನ್ನೆಗೆ ಒಳಗಾಗಿ ಬಡವಾಗುತ್ತಿರುವ ಕನ್ನಡ ಭವಿಷ್ಯದ ಹಿನ್ನೆಲೆಯಲ್ಲಿ ನನಗೆ ಏನು ಹೇಳಬೇಕೆಂದು ತೋಚದಂತಾಗಿದೆ. ಸರಕಾರದ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡಿತ್ತು. ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಒಂದನೆಯ ತರಗತಿಯಿಂದಲೇ ಆಂಗ್ಲ ಮಾಧ್ಯಮ ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಕನ್ನಡದ ಭವಿಷ್ಯದ ಬಗ್ಗೆ ತುಂಬಾ ಚಿಂತೆಯಾಗಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಐದನೇ ತರಗತಿಯಿಂದ ಭಾಷೆಯಾಗಿ ಆಂಗ್ಲ ಭಾಷೆ ಕಲಿಯಲಿಕ್ಕೆ ಅವಕಾಶವಿತ್ತು ಆದರೆ ಒತ್ತಡಕ್ಕೆ ಮಣಿದ ಸರಕಾರ ಮೊದಲು ಆರನೇ ತರಗತಿಯಿಂದ ಈಗ ಒಂದನೇ ತರಗತಿಯಿಂದ ಮಾಧ್ಯಮವಾಗಿ ಕಲಿಸುವ ಅವಕಾಶ ಮಾಡಿಕೊಟ್ಟಿದೆ. ಭಾಷೆಯಾಗಿ ಒಂದನೇ ತರಗತಿಯಿಂದ ಆಂಗ್ಲ ಭಾಷೆ ಕಲಿಸುವ ಅವಕಾಶ ಕಲ್ಪಿಸಿ ತದನಂತರ ಮಾಧ್ಯಮವಾಗಿ ಆಂಗ್ಲಭಾಷೆಯ ಕಲಿಯಲು ಅವಕಾಶ ಮಾಡಿಕೊಟ್ಟಿರುವುದು ನನಗೆ ಚಿಂತೆಗೆ ಕಾರಣವಾದ ಅಂಶವಾಗಿದೆ.
ಇದು ಕನ್ನಡಕ್ಕೆ ವರವಾಗುತ್ತದೋ ಮಾರಕವಾಗುತ್ತದೋ ಆ ಕೃಷ್ಣನೇ ಬಲ್ಲ. ಪ್ರತಿಯೊಬ್ಬರೂ ಶೈಕ್ಷಣಿಕ ವಿಚಾರದಲ್ಲಿ ಮಾತನಾಡುವಾಗ ಕನ್ನಡದ ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ. ಇದೊಂದು ನುಣುಚಿಕೊಳ್ಳುವ ಪ್ರಕ್ರಿಯೆ, ವಿಷಕನ್ಯೆಯನ್ನು ಸೃಷ್ಟಿಸಿ ಕೊಲ್ಲುವ ಪ್ರಯತ್ನವಾಗಿದೆ. ಈ ಸಂದರ್ಭದಲ್ಲಿ ಕವಿ ಕುವೆಂಪುರವರು ಹೇಳಿದ್ದ ಈ ಮಾತನ್ನು ಇಲ್ಲಿ ಮತ್ತೆ ಉಲೇಖಿಸುತ್ತಿದೇನೆ .
ಹೆಣ ಭಾರ ಹೆಣಭಾರ ಸಾಕೀ ಬಲತ್ಕಾರ
ಸಾಕು ನಿಲ್ಲಿಸಿ ನಿಮಗೆ ಬೇಕೋದ್ದಾರ
ಇಂಗ್ಲೀಷಿನ ಚಪ್ಪಡಿ ಅಡಿಯ ಹಸುಳೆ ಚಿತ್ಕಾರ
ಕೇಳಿಯೂ ದಿಮ್ಮನಿರೆ ಕೋಟಿ ದಿಕ್ಕಾರ
ಇಂಗ್ಲೀಷನ್ನು ಕಲಿತರೆ ಮಾತ್ರ ತಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಭ್ರಮೆ ಬೇಡ. ಪ್ರಾರಂಭದಲ್ಲಿ ಮಾತೃ ಭಾಷೆಯ ಶಿಕ್ಷಣ ನೀಡುವುದು ಅತ್ಯಂತ ಅವಶ್ಯಕ ಆದರೆ ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಗಾಗಿ ಎಲ್ಲವನ್ನು ಇಂಗ್ಲಿಷ್ ನಲ್ಲಿ ಕಲಿಸುವುದು ಎಷ್ಟರಮಟ್ಟಿಗೆ ಸರಿ ನೀವೇ ಯೋಚಿಸಿ ನಾಡು-ನುಡಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಜನ್ಮ ನೀಡಿದ ಕಂದನ ಮಾತೃಭಾಷೆ ಶಿಕ್ಷಣ ನೀಡುವ ಜೊತೆಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಿದರೆ ಸಾಕು. ನಾನೇನು ಆಂಗ್ಲಭಾಷೆ ವಿರೋಧಿಯಲ್ಲ ಕನ್ನಡದ ಕಂದನ ಮೇಲೆ ಇಂಗ್ಲಿಷ್ ಚಪ್ಪಡಿ ಎಳೆಯುವುದನ್ನು ನೋಡಿ ಸುಮ್ಮನಿರಲಾಗದೆ ಈ ಮಾತನ್ನು ದಾಖಲಿಸುತ್ತಿದ್ದೇನೆ. ಕನ್ನಡ ಭವಿಷ್ಯದ ಹಿನ್ನೆಲೆಯಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ 2011ರ ಜೂನ್ 27ರಂದು ಎಸ್.ಜಿ ಕುರ್ಯ ಅವರ ವರದಿ ಗಮನಸೆಳೆದಿದೆ.
ಉಡುಪಿ ಬೋರ್ಡ್ ಹೈಸ್ಕೂಲ್, ಅಜ್ಜರಕಾಡು ಮಲ್ಪೆ, ಉಡುಪಿಯ ಸರಕಾರಿ ಪ್ರೌಢ ಶಾಲೆ ಸಹಿತ ಜಿಲ್ಲೆಯ ವಿವಿಧೆಡೆ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭಿಸಿದ್ದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕೊರತೆಯಿಂದ ಸೊರಗುತ್ತಿದೆ.
ದಶಕದ ಹಿಂದೆ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿ ಮೂರು ವಿಭಾಗ, ಆಂಗ್ಲ ಮಾಧ್ಯಮ ಒಂದು ವಿಭಾಗವಿದ್ದರೆ, ಇಂದು ಉಲ್ಟಾಪಲ್ಟಾ. ಈಗ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಿದ ಶಾಲೆಗಳಲ್ಲಿ ಇದೇ ಪರಿಸ್ಥಿತಿಯಾಗಿದೆ.
ಹತ್ತು ವರ್ಷದ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಎಸ್.ಜಿ ಕುರ್ಯ ಅವರು ತಿಳಿಸಿದ ವಾಸ್ತವಾಂಶ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನೆಲ್ಲಾ ಗಮನಿಸಿದಾಗ ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕನ್ನಡದ ಭವಿಷ್ಯದ ಬಗ್ಗೆ ಯೋಚಿಸುವಂತಾಗಿದೆ. ಆದರೂ ಕೆಲವು ಸಮಾಧಾನದ ಅಂಶವು ಇದೆ ಇಷ್ಟೆಲ್ಲಾ ಕನ್ನಡದ ಮೇಲೆ ಅಡೆತಡೆಗಳು ಬಂದರೂ ಕೂಡ ಪಿಯು ವಿಭಾಗ, ಪದವಿ ವಿಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ. ಸುಮಾರು 10,15 ವರ್ಷಗಳ ಹಿಂದೆ ಪ್ರೌಢಶಾಲೆಯ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಪಿಯುಸಿಯಲ್ಲಿ ಆಂಗ್ಲ ಮಾಧ್ಯಮ ದಲ್ಲಿ ಓದುತ್ತಿದ್ದರು. ಆಗ ಕನ್ನಡ ಮಾಧ್ಯಮದಲ್ಲಿ ಬರೆಯುವವರು ತೀರಾ ಕಡಿಮೆ ಇದ್ದರೂ, ಈಗ ವಿಜ್ಞಾನ ವಿಭಾಗ ಬಿಬಿಎಂ ವಿಭಾಗ ಹೊರತುಪಡಿಸಿ ಉಳಿದ ವಿಭಾಗದಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಬರೆದು ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ಸರಕಾರಿ ಪ್ರೌಢಶಾಲೆಯಲ್ಲಿ ,ಪಿಯುಸಿಯಲ್ಲಿ ಕಲಾ ,ವಾಣಿಜ್ಯ ವಿಭಾಗದಲ್ಲಿ ಕನ್ನಡದಲ್ಲಿ ಬರೆಯುವವರು ಜಾಸ್ತಿ ಇದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಇದನ್ನೆಲ್ಲಾ ಗಮನಿಸಿದಾಗ ಉಡುಪಿ ಜಿಲ್ಲೆಯಲ್ಲಿ ನಾವು ಅಷ್ಟೊಂದು ಹೆದರಬೇಕಾಗಿಲ್ಲ ಎಂದು ನನ್ನ ಮನಸ್ಸು ಹೇಳುತ್ತದೆ.
ಪ್ರಾಥಮಿಕ ಶಾಲೆಗಳನ್ನು ಪ್ರಯೋಗಾಲಯವನ್ನಾಗಿ ಮಾಡದೆ ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳನ್ನು ಗುರುತಿಸಿಕೊಂಡು ಅದನ್ನು ಪೂರೈಸುವ ನಿಟ್ಟಿನಲ್ಲಿ ಶ್ರಮಿಸಬೇಕಾದುದು ಮೊದಲ ಆದ್ಯತೆ ಆಗಬೇಕಾಗಿದೆ. ಯಾರೋ ಹೇಳಿದ್ದನ್ನು ಹೇಳಿ ದಿನಕ್ಕೊಂದು ಯೋಜನೆ ತಂದರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ನಮ್ಮಲ್ಲಿ ಇಚ್ಚಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಗಳ ಕೊರತೆ ಇದೆ. ಈ ಕೊರತೆ ಶೈಕ್ಷಣಿಕವಾಗಿ ಕನ್ನಡದ ಮೇಲೆ ಪ್ರಭಾವ ಬೀರುವುದಂತು ಸತ್ಯ. ಈ ಪ್ರಭಾವ ನಮ್ಮ ಕಂದಮ್ಮಗಳ ಮೇಲಾಗುತ್ತದೆ ಪೋಷಕರ ಸಾಮೂಹಿಕ ಸನ್ನಿಗೆ ಕನ್ನಡದ ಮಕ್ಕಳು ಬಲಿಯಾಗುತ್ತಿರುವುದು ವಿಷಾದನೀಯ. ಇದು ಈಗ ಗೊತ್ತಾಗುವುದಿಲ್ಲ ಮುಂದೆ ಇದರ ಫಲ ನೋಡಿ ಪೋಷಕರು ಪಶ್ಚಾತಾಪ ಪಟ್ಟುಕೊಳ್ಳುವ ಕಾಲ ದೂರವಿಲ್ಲ ಕರ್ನಾಟಕದಾದ್ಯಂತ 66 ನೇ ಯ ಕನ್ನಡ ರಾಜ್ಯೋತ್ಸವವನ್ನು ಜನರು ಬಹು ಪ್ರೀತಿಯಿಂದ ಆಚರಣೆಗೆ ಮುಂದಾಗಿರುವುದನ್ನು ಕಂಡಾಗ ಹೃದಯ ತುಂಬಿ ಬರುತ್ತದೆ
ನಮ್ಮ ಸಚಿವರಾದ ಮಾನ್ಯ ಸುನಿಲ್ ಕುಮಾರ್ ರವರು “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸಂತಸದ ವಿಷಯ ಇದು ಒಂದು ರೀತಿಯ ಸಂಚಲನ ಮೂಡಿಸುವುದಂತೂ ಸತ್ಯ. ಕನ್ನಡ ಗೀತೆಗಳನ್ನು ಹಾಡಿದ್ದು. ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಇದರ ಮೂಲಕ ನಮ್ಮ ಸರಕಾರ ಕನ್ನಡದ ಬಗ್ಗೆ ಹೆಚ್ಚು ಕಾಳಜಿ ಮೂಡಿಸಿರುವುದು ಶ್ಲಾಘನೀಯ ವಿಷಯ.
ಇದು ಕೇವಲ ಒಂದು ಮಾರದಲ್ಲಿ ಮಾಡಿ ಮುಗಿಸಿದರೆ ಪ್ರಯೋಜನವಿಲ್ಲ. ನಿರಂತರವಾಗಿ ನಡೆಸಬೇಕೆಂಬುದು ನನ್ನ ಮನದಾಳದ ಅನಿಸಿಕೆಯಾಗಿದೆ. ಕನ್ನಡದಲ್ಲಿ ಮಾತನಾಡೋಣ, ಕನ್ನಡ ಅಂಕಿಯನ್ನು ಬರೆಯೋಣ, ಕನ್ನಡದಲ್ಲಿ ಸಹಿ ಮಾಡೋಣ, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಜನಪದ ಇವುಗಳ ಸಂರಕ್ಷಣೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಕ್ತಿಮೀರಿ ಶ್ರಮಿಸೋಣ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸೋಣ ಕನ್ನಡದಲ್ಲಿ ಕಲಿ ಇಂಗ್ಲಿಷ ನ್ನು ಕಲಿ ಎಂಬ ಮಾತಿನಂತೆ ನಡೆಯೋಣ ಕನ್ನಡ ರಾಜ್ಯೋತ್ಸವ ದಿನ ಇದು ನಮ್ಮೆಲ್ಲರ ಸಂಕಲ್ಪವಾಗಲಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ನೀಲಾವರ ಸುರೇಂದ್ರ ಅಡಿಗ
ನಿಕಟಪೂರ್ವ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ