ಕುವರಿಯರನ್ನೇ ನಾಚಿಸುವ ರಂಗಸ್ಥಳದ ಸುಂದರಿ, ಸ್ತ್ರೀ ವೇಷಧಾರಿ ಶಮಂತ ಕುಮಾರ್
ಲೇಖಕಿ : ನಾಗರತ್ನ ಜಿ
ಶಿಕ್ಷಕಿ, ಯಕ್ಷಗಾನ ಕಲಾವಿದೆ
ಗತಕಾಲ ನಮ್ಮನ್ನು ರೂಪಿಸುತ್ತದೆ, ವರ್ತಮಾನ ನಮ್ಮನ್ನು ಕೈಹಿಡಿದು ನಡೆಸುತ್ತದೆ, ಆದರೆ ಭವಿಷ್ಯ ಎಂಬುದಿಲ್ಲ, ಅದನ್ನು ನಾವು ಜ್ಞಾನದ ಮೂಲಕ ರೂಪಿಸಿಕೊಳ್ಳಬೇಕು. ಅಂತಹ ಜ್ಞಾನದಿಂದ ಉನ್ನತಿಯನ್ನು ಸಾಧಿಸಿದ ಹಲವರಲ್ಲೊಬ್ಬರು ವಿನಯವೇ ವಿದ್ಯೆಗೆ ಭೂಷಣ ಎಂಬಂತಿರುವ ಶಮಂತಕುಮಾರ್ ಕೆ ಎಸ್.
ಇವರು ಕೋಟದ ಶ್ರೀಧರ ಗಾಣಿಗ ಹಾಗೂ ಭಾಗೀರಥಿ ಅವರ ಮೂರನೆಯ ಮಗನಾಗಿ ಜೂನ್ 9,1993 ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಶ್ರೀ ಶಾಂಭವಿ ಅನುದಾನಿತ ಶಾಲೆ ಗಿಳಿಯಾರು, ಪ್ರೌಢ ಶಿಕ್ಷಣ ಸರಕಾರಿ ಪ್ರೌಢಶಾಲೆ ಮಣೂರು ಪಡುಕೆರೆ, ಪದವಿಪೂರ್ವ ಶಿಕ್ಷಣ ವಿವೇಕ ಪದವಿಪೂರ್ವ ಕಾಲೇಜು ಕೋಟ ಪದವಿ ಶಿಕ್ಷಣ ಸರಕಾರಿ ಪದವಿ ಕಾಲೇಜು ಮಣೂರು ಪಡುಕೆರೆ ಇಲ್ಲಿ ನಡೆಯಿತು. ಜ್ಞಾನದಾಹಿಯಾದ ಇವರು ಪದವಿಯ ನಂತರ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟಕುಗೊಳಿಸಲಿಲ್ಲ. ತನ್ನ ಮಾತೃಭಾಷೆಯಾದ ಕನ್ನಡ ಹಾಗೂ ಸಂಪದ್ಭರಿತವಾದ ಕನ್ನಡದ ಸಾಹಿತ್ಯದ ಮೇಲೆ ಅತಿಯಾದ ಪ್ರೇಮ ಇವರಿಗೆ. ಅದಕ್ಕಾಗಿ ಕನ್ನಡದ ಸಾಹಿತ್ಯದ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ ಎಂಬುದನ್ನು ಮನಗಂಡರು. ಈ ಯೋಚನೆ ಬಂದಿದ್ದೇ ಮತ್ತೆ ತಡಮಾಡದೇ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿ ತರಗತಿಗೆ ಸೇರಿಕೊಂಡು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ ಇವರು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ನಾಟಕಗಳ ಕುರಿತು ಸಂಶೋಧನೆ ಮಾಡುತ್ತಿದ್ದಾರೆ.
ಈಗ ಇವರು ಕೆ.ಇ.ಎಲ್ ಸಂಸ್ಥೆಯ ಜಿ.ಎಚ್ ಮಹಾವಿದ್ಯಾಲಯ, ಹಾವೇರಿ ಇಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಏನಾದರೂ ಹೊಸತನ್ನು ಜನರಿಗೆ ನೀಡಬೇಕು ಎಂದು ಸದಾ ತುಡಿಯುವ ಇವರು ಆನ್ಲೈನ್ ನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ವೆಬಿನಾರ್ಗಳನ್ನು ನಡೆಸಿರುತ್ತಾರೆ. ಅವುಗಳಲ್ಲಿ ಪ್ರಮುಖವಾದುದು ನಡುಗನ್ನಡ ಕಾವ್ಯ-ಯಕ್ಷಗಾನ ಸ್ತ್ರೀ ಪಾತ್ರ, ಯಕ್ಷದರ್ಪಣ ಇತ್ಯಾದಿಗಳು. ಇದರ ಜೊತೆಗೆ ಹಾವೇರಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗಾಗಿ ಯಕ್ಷಗಾನವನ್ನು ಶೈಕ್ಷಣಿಕ ವ್ಯಾಪ್ತಿಗೆ ತಂದು ಉಚಿತವಾಗಿ ತರಬೇತಿ ನೀಡಿ ಅವರಿಗೆ ಪ್ರಮಾಣಪತ್ರವನ್ನು ನೀಡಬೇಕು ಎನ್ನುವ ಹಂಬಲವನ್ನು ಹೊಂದಿದ್ದು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಯಕ್ಷಗಾನದ ಪರಿಚಯವೇ ಇಲ್ಲದ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ “ಪಾವನ ಪಕ್ಷಿ” ಎನ್ನುವ ಪ್ರಸಂಗವನ್ನು ಮಿಥುನ್ ನಾಯಕ್ ಹಂದಾಡಿ ಹಾಗೂ ಕಾರ್ತಿಕ್ ಎನ್ನುವವರು ಗುರುಗಳಾಗಿ 15 ದಿನಗಳ ಕಾಲ ತರಬೇತಿ ನೀಡಿದರು. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು ಶಮಂತ್ ಕುಮಾರ್ ಅವರ ಮುಕುಟಕ್ಕೊಂದು ಗರಿ ಬಂದಂತಾಗಿದೆ.
ಇವರು ಹಾವೇರಿಗೆ ವರ್ಗಾವಣೆಗೊಳ್ಳುವ ಮುನ್ನ ಎಂ.ಜಿ.ಎಂ ಕಾಲೇಜು, ಉಡುಪಿ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ “ದತ್ತುಗ್ರಾಮ, ಸರಕಾರಿ ಶಾಲೆಗಳಿಗೆ ಅಧ್ಯಯನ ಸಾಮಾಗ್ರಿ ವಿತರಣೆ, ಉಚಿತ ಗ್ರಂಥಾಲಯ”ದಂತಹ ವಿಶಿಷ್ಟ ಯೋಜನೆಗಳನ್ನು ಪರಿಚಯಿಸಿ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು.
ಬಾಲ್ಯದಲ್ಲಿ ಮನೆಯ ಹತ್ತಿರ ನಡೆಯುತ್ತಿದ್ದ ಅಮೃತೇಶ್ವರಿ ಮೇಳದ ಆಟಗಳನ್ನು ನೋಡುತ್ತಾ ಬೆಳೆದ ಇವರಿಗೆ ಸಹಜವಾಗಿಯೇ ಯಕ್ಷಗಾನದತ್ತ ಒಲವು ಮೂಡಿತು. ತಾನೂ ಕೂಡಾ ಯಕ್ಷಗಾನ ಕಲಿಯಬೇಕು, ವಿವಿಧ ವೇಷ ಧರಿಸಿ ರಂಗಸ್ಥಳದಲ್ಲಿ ನಲಿಯಬೇಕು ಎಂದು ಭಾವಿಸಿದರು. ಅದೇ ಸಮಯಕ್ಕೆ ಸರಿಯಾಗಿ ಯಕ್ಷಗಾನ ಗುರುಗಳಾದ ನರಸಿಂಹ ತುಂಗ ಇವರು ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳಿಗೆ ಯಕ್ಷಗಾನ ಹೆಜ್ಜೆಗಳನ್ನು ಕಲಿಸುತ್ತಿದ್ದರು. ಅದರ ಬಗ್ಗೆ ತಿಳಿದ ಶಮಂತ್ ಅವರಲ್ಲಿ ಕಲಿಯಲು ಪ್ರಾರಂಭಿಸಿದರು. 7 ನೆಯ ತರಗತಿಯಲ್ಲಿ ಇರುವಾಗ ಪ್ರಥಮ ಬಾರಿಗೆ ಮೀನಾಕ್ಷಿ ಕಲ್ಯಾಣದ ಶೂರಸೇನನ ದೂತನಾಗಿ ಹಾಗೂ ವೀರಭದ್ರನಾಗಿ ಬಣ್ಣ ಹಚ್ಚಿ ರಂಗಸ್ಥಳವನ್ನೇರಿದರು. ಎರಡನೆಯ ಬಾರಿಗೆ ಶಶಿಪ್ರಭಾ ಪರಿಣಯದ ಕಿರಾತ ಹಾಗೂ ಘೋರರೂಪಿಯಾಗಿ ಜನಮನ ರಂಜಿಸಿದರು. ನಂತರ ಅಲ್ಲಿಂದ ತಿರುಗಿ ನೋಡಲಿಲ್ಲ. ಉಡುಪಿ, ಮೈಸೂರು, ಬೆಂಗಳೂರು, ದೊಡ್ಡಬಳ್ಳಾಪುರ, ಉತ್ತರಕನ್ನಡ, ಮಂಗಳೂರು ಸೇರಿದಂತೆ ನಾಡಿನ ನಾನಾ ಕಡೆ ಯಕ್ಷಗಾನ ಪ್ರದರ್ಶನವನ್ನು ನೀಡಿದ ಹೆಮ್ಮೆ ಇವರದು. ಗೆಳೆಯರೊಂದಿಗೆ ಸೇರಿ ಅನೇಕ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಬಾಚಿಕೊಂಡ ಕೀರ್ತಿ ಇವರದು. ತರುವಾಯ ಯಕ್ಷ ಗುರು, ಪ್ರಸಂಗಕರ್ತ, ಕವಿ, ಭಾಗವತ ಹೀಗೆ ಬಹುಮುಖ ಪ್ರತಿಭಾ ಸಂಪನ್ನರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಗರಡಿಯಲ್ಲಿ ಅವರ ಪ್ರೀತಿಯ ಶಿಷ್ಯರಾಗಿ ಪಳಗಿದರು. ವಿಪರ್ಯಾಸವೆಂದರೆ ಮೊದಲಿಗೆ ಇವರು ಪುರುಷ ವೇಷಗಳನ್ನು ಮಾಡಿದ್ದರೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವುದು ಪ್ರಮುಖ ಸ್ತ್ರೀ ವೇಷಧಾರಿಯಾಗಿ.
ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ಭಸ್ಮಾಸುರ ಮೋಹಿನಿಯ ಮೋಹಿನಿ, ಶಶಿಪ್ರಭಾ ಪರಿಣಯದ ಭ್ರಮರಕುಂತಳೆ, ಶಶಿಪ್ರಭೆ, ದಕ್ಷಯಜ್ಞದ ದಾಕ್ಷಾಯಿಣಿ, ಚಂದ್ರಾವಳಿ ವಿಲಾಸದ ಚಂದ್ರಾವಳಿ, ಕೃಷ್ಣಾರ್ಜುನದ ಸುಭದ್ರೆ, ಸುಧನ್ವಾರ್ಜುನದ ಪ್ರಭಾವತಿ, ಭೀಷ್ಮ ವಿಜಯದ ಅಂಬೆ, ಭೀಷ್ಮ ಪ್ರತಿಜ್ಞೆಯ ಯೋಜನಾಗಂಧಿ, ದೇವಿ ಮಹಾತ್ಮೆಯ ಮಾಲಿನಿ, ದೇವಿ ಮುಂತಾದವುಗಳು ಇವರ ಮೆಚ್ಚಿನ ವೇಷಗಳು. ಮೊದಲಿಗೆ ಹವ್ಯಾಸಿ ಕಲಾವಿದರಾಗಿ ಗುರುತಿಸಿಕೊಂಡಿದ್ದರೂ ಅಗತ್ಯ ಬಿದ್ದಾಗ ಮಹಿಷಮರ್ದಿನಿ ದಶಾವತಾರ ಮಂಡಳಿ ಶ್ರೀ ಕ್ಷೇತ್ರ ನೀಲಾವರ, ಶ್ರೀ ಅಮೃತೇಶ್ವರಿ ದಶಾವತಾರ ಮಂಡಳಿ ಕೋಟ, ಹಟ್ಟಿಯಂಗಡಿ ಮೇಳಗಳಲ್ಲಿ ಬದಲಿ ಕಲಾವಿದರಾಗಿ ವೃತ್ತಿಪರತೆಯನ್ನು ಮೆರೆದಿದ್ದಾರೆ. ಅಂತಹ ಸಂದರ್ಭದಲ್ಲಿ ತನ್ನ ನೆಚ್ಚಿನ ಕಲಾವಿದರಾದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರ ಉಗ್ರಸೇನನಿಗೆ ರುಚಿಮತಿಯಾಗಿ, ಮತ್ತು ತೀರ್ಥಹಳ್ಳಿ ಗೋಪಾಲ ಆಚಾರ್ ಅವರ ಬಾಲಕಂಸನಿಗೆ ಆಸ್ತಿಯಾಗಿ ಜೋಡಿವೇಷ ಮಾಡಿದ್ದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣಗಳು ಎನ್ನುತ್ತಾರೆ.
ಬರೀ ಯಕ್ಷಗಾನ ಕಲಾವಿದನಾಗಿ ಮಾತ್ರವಲ್ಲ ಒಬ್ಬ ಕಥೆಗಾರನಾಗಿ “ಬಾಲ್ಯ ಮಾಂಗಲ್ಯ” ಎನ್ನುವ ಸಾಮಾಜಿಕ ಕಳಕಳಿಯುಳ್ಳ ಪ್ರಸಂಗವೊಂದನ್ನು ರಚಿಸುವಲ್ಲಿ ಇವರ ಪಾತ್ರ ಪ್ರಮುಖವಾದುದು. ಇದಕ್ಕೆ ಇವರ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರು ಪದ್ಯ ರಚನೆ ಮಾಡಿದ್ದಾರೆ. ಈ ಪ್ರಸಂಗ ಕೋಟದಲ್ಲಿ ಪ್ರದರ್ಶನವಾಗಿ ಅದ್ಭುತವಾದ ಯಶಸ್ಸನ್ನು ಪಡೆದದ್ದು ಸುಳ್ಳಲ್ಲ. ನಂತರ ಇವರು ಈ ಪ್ರಸಂಗವನ್ನು ತನ್ನ ಪ್ರೀತಿಯ ಅಮೃತೇಶ್ವರಿ ಮೇಳಕ್ಕೆ ನೀಡಿದ್ದು ಮೇಳದಲ್ಲಿ ಇದು 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆಯೆಂದರೆ ಇದರಲ್ಲಿರುವ ಸತ್ವವನ್ನು, ಸಂದೇಶವನ್ನು ಯಾರೂ ಊಹಿಸಬಹುದು.
ಇಲ್ಲಿಗೇ ಶಮಂತರ ಪ್ರತಿಭೆ ಕೊನೆಗೊಳ್ಳುವುದಿಲ್ಲ. ಒಬ್ಬ ರಂಗಭೂಮಿ ಕಲಾವಿದನಾಗಿಯೂ ಇವರು ರಂಗದಲ್ಲಿ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಗುರುರಾಜ ಮಾರ್ಪಳ್ಳಿ, ಬಾಸುಮ ಕೊಡಗು ಅವರಂತಹ ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ಅಭಿನಯಿಸಿ ತಾನೇನು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮಂಥರಾ, ಕುಲವೆಂಬುದು ಕುಲವಲ್ಲ, ಅಂಧಯುಗ, ರಥಯಾತ್ರೆ ಮುಂತಾದ ನಾಟಕಗಳಲ್ಲಿ ಇವರು ಸ್ತ್ರೀ ಸಂವೇದನೆಯನ್ನು ವ್ಯಕ್ತಪಡಿಸುವ ಪರಿ ಅನನ್ಯ. ಇದಲ್ಲದೇ ಕಾರ್ಯಕ್ರಮ ನಿರೂಪಣೆ, ಕಾರ್ಯಕ್ರಮ ಸಂಘಟನೆ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಭಾಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ. ಒಬ್ಬ ಲೇಖಕನಾಗಿಯೂ ಇವರು ಗುರುತಿಸಿಕೊಂಡಿದ್ದು ಹಲವಾರು ಸಂಶೋಧನಾ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಯಕ್ಷ ಸುಮನಸಾ ವ್ಯವಸಾಯೀ ಕಲಾಂತರಂಗ ಕೋಟ ಎನ್ನುವ ಸಂಸ್ಥೆಯನ್ನು ಗೆಳೆಯರೊಂದಿಗೆ ಸ್ಥಾಪಿಸಿ ಅದರ ಮೂಲಕ ಹಲವಾರು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಹಾಗೆಯೇ ಇವರು ಯಕ್ಷ ಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗ ಇದರ ಕಲಾವಿದರಾಗಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ ಕಾರಂತ ಪ್ರತಿಷ್ಠಾನ ಕೋಟ ಇವರು “ಯಕ್ಷ ಕಿನ್ನರ ಕೋಟ ವೈಕುಂಠ ಯುವ ಪುರಸ್ಕಾರ” ಎಂಬ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸಂಮಾನಿಸಿವೆ.
ನೇಹಾ ಎನ್ನುವವರನ್ನು ವರಿಸಿದ ಇವರು ಸುಖೀ ಸಂಸಾರ ನಡೆಸುತ್ತಿದ್ದಾರೆ. ಇವರ ಮಡದಿ ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಯತ್ನ ಎನ್ನುವುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಚಿಗುರಿದರೆ ಮರವಾಗಲಿ. ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ ಎಂಬ ಉಕ್ತಿಯಂತೆ ಶಮಂತರ ಹೊಸ ಹೊಸ ಪ್ರಯೋಗಗಳು ಇನ್ನಷ್ಟು ಹೊಸತನದ ಹುಟ್ಟಿಗೆ ಕಾರಣವಾಗಲಿ ಇಲ್ಲವೇ ಅವರ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಲಿ ಎಂಬ ಶುಭ ಹಾರೈಕೆ.
ಲೇಖಕಿ : ನಾಗರತ್ನ ಜಿ
ಶಿಕ್ಷಕಿ, ಯಕ್ಷಗಾನ ಕಲಾವಿದೆ
ನವ್ಯತೆಯನ್ನು ತಮ್ಮಲ್ಲಿ ತಮ್ಮ ಸುತ್ತಮುತ್ತ ಇರುವವರಲ್ಲಿ ಕಾಣಬೇಕೆಂಬುದು , ನಮ್ಮ ಗುರುಗಳ ಮಹದಾಸೆ. ಅದರಂತೆಯೇ ಅವರ ವಿಚಾರಗಳು ಕಲೆ, ಸಾಹಿತ್ಯದ ಹೊಸ ರೂಪುರೇಷೆಗಳನ್ನು ನಮ್ಮಲ್ಲಿ ಮೂಡಿಸಿರುವುದು ನಮ್ಮ ಸೌಭಾಗ್ಯ.. ಅವರ ಎಲ್ಲ ಕಾರ್ಯಗಳು ಮಂಗಳಕರವಾಗಿರಲಿ..