ಭಾರತ ಬಂದ್‌ಗೆ ರೈತರ ಬೆಂಬಲ ಸಿಕ್ಕಿಲ್ಲ ,ಬಂದ್ ವಿಫಲಗೊಳಿಸಿದ ರೈತರಿಗೆ ಧನ್ಯವಾದಗಳು ” ಸಿ.ಟಿ. ರವಿ
ಬೆಂಗಳೂರು, ಸೆ. 27: ಭಾರತ ಬಂದ್ ವೇಳೆ ಒಂದು ಹಕ್ಕಿಯೂ ಹಾರಾಡದಂಥ ವಾತಾವರಣ ಇರಬಹುದೇ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೆಲವು ಸಂಘಟನೆಗಳು ಚಳವಳಿ ನಡೆಸಿವೆ. ಜನಸಾಮಾನ್ಯರು, ರೈತರು ಈ ಬಂದ್ ಬೆಂಬಲಿಸಿಲ್ಲ. ಅರಾಜಕತೆ ಸೃಷ್ಟಿಯಿಂದ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಂದ್ ಸಂಘಟಕರು ಮನವರಿಕೆ ಮಾಡಿಕೊಳ್ಳಬಹುದು.”
”ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ, ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ, ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತ ಸಂಘಟನೆ ಹೆಸರಿನಲ್ಲಿ 3 ಪ್ರಮುಖ ಕೃಷಿ ಮಸೂದೆಗಳನ್ನು ವಿರೋಧಿಸಿ 19ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 100ಕ್ಕೂ ಹೆಚ್ಚು ಸಂಘಟನೆಗಳು ದೇಶದ ಉದ್ದಗಲಕ್ಕೆ ಕರೆ ಕೊಟ್ಟಿದ್ದ ಭಾರತ ಬಂದ್‌ಗೆ ರೈತರ ಬೆಂಬಲ ಸಿಕ್ಕಿಲ್ಲ” ಎಂದರು.
“ರೈತರು ಬಂದ್ ವಿಫಲಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಾಮಾಣಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕೆಂಬ ಅವರ ಹಂಬಲವನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಸಿ.ಟಿ. ರವಿ ಹೇಳಿದರು.
“3 ಕೃಷಿ ಮಸೂದೆಗಳು ರೈತಪರವಾಗಿವೆ. ರೈತ ವಿರುದ್ಧವಾದ ಅಂಶಗಳೇನಿವೆ? ಎಂದು ಕೃಷಿ ಸಚಿವರು ಸೇರಿ ಎಲ್ಲರೂ ಕಳೆದೊಂದು ವರ್ಷದಿಂದ ಕೇಳುತ್ತಲೇ ಬಂದಿದ್ದಾರೆ. ತಿದ್ದುಪಡಿಗೂ ಸಿದ್ಧ ಎಂದಿದ್ದೇವೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಅಡ್ಡಗಾಲು ಕೆಲವರು ವಿರೋಧಿಸುತ್ತಿದ್ದಾರೆಯೇ ಹೊರತು ರೈತರು ಇದನ್ನು ವಿರೋಧಿಸುತ್ತಿಲ್ಲ” ಎಂದು ಸಿಟಿ ರವಿ ಹೇಳಿದರು.