ಕಾಂಗ್ರೆಸ್’ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ
ಉಡುಪಿ ಸೆ.14(ಉಡುಪಿ ಟೈಮ್ಸ್ ವರದಿ): ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರ ಉಡುಪಿಗೆ ತರಲಾಗಿದೆ.
ಇಂದು ಬೆಳಿಗ್ಗೆ ಪಾರ್ಥಿವ ಶರೀರವನ್ನು ಉಡುಪಿಯ ಶೋಕಮಾತಾ ಚರ್ಚ್ ಗೆ ತರಲಾಗಿದ್ದು, ಚರ್ಚ್ ನಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಉಡುಪಿ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್ ಲೋಬೋ ಅವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ಈ ವೇಳೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮ ರಾವ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಂಗ್ರೆಸ್ ನ ಮುಖಂಡರಾದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಐವನ್ ಡಿಸೋಜಾ ಹಾಗೂ ಇತರ ಕಾಂಗ್ರೆಸ್ ಮುಖಂಡರು ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಪಡೆದರು.
ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯಲ್ಲಿ ಇರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ತಂದು ಅಲ್ಲಿ 10 ಗಂಟೆಯಿಂದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಇಂದು ಸಂಜೆ 3 ಗಂಟೆ ವೇಳೆ ಮಂಗಳೂರಿನಲ್ಲಿ ಇರುವ ದ.ಕ ಜಿಲ್ಲಾ ಕಾಂಗ್ರೆಸ್ ಕಮಿಟಿ ಕಚೇರಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುವುದು.