ಪ್ರಕೃತಿಯಲ್ಲಿ ದೇವರನ್ನು ಕಾಣುವ ಕಲಾವಿದ ದಿನೇಶ್ ಹೊಳ್ಳ
ಸಂದರ್ಶನ ಹಾಗೂ ಲೇಖನ: ದಿವ್ಯ ಮಂಚಿ
ಉಡುಪಿ ಸೆ.8 ( ಉಡುಪಿ ಟೈಮ್ಸ್ ವರದಿ) : ಪ್ರಕೃತಿ ಅಂದಾಕ್ಷಣ ತಕ್ಷಣಕ್ಕೆ ನೆನಪಿಗೆ ಬರೋದೆ ಆಕಾಶದೆತ್ತರಕ್ಕೆ ಮುಖಮಾಡಿರುವ ಕಾಂಕ್ರೀಟ್ ಕಾಡುಗಳು, ಟ್ರಾಫಿಕ್ ಜಾಮ್ ಆಗಿರುವ ರಸ್ತೆಗಳು, ಕಟ್ಟಡಗಳು, ಇತ್ಯಾದಿ.
ಅರೇ ಇದೇನು ಪ್ರಕೃತಿ ಎಂದರೆ ಹಚ್ಚ ಹಸಿರ ಕಾಡು, ಬೆಟ್ಟ, ಗುಡ್ಡಗಳು, ನದಿ, ಝರಿ, ತೊರೆ, ಹಕ್ಕಿಗಳ ಕಲರವ ಅಂತಾರೆ ಅಂದುಕೊಂಡರೆ ಕಾಂಕ್ರೀಟ್ ಕಾಡು ಅದು ಇದು ಅಂತಿದ್ದಾರೆ ಅಂತ ಅನ್ಕೋತ್ತಿದ್ದೀರಾ. ಇದಕ್ಕೆ ಒಂದು ಕಾರಣ ಇದೆ. ಇತ್ತೀಚೆಗೆ ಕೆಲಸವೊಂದರ ನಿಮಿತ್ತ ಕಾರ್ಕಳಕ್ಕೆ ತೆರಳಿದ್ದೆ, ಹಾಗೇ ಬಸ್ಸಿನಲ್ಲಿ ಕುಳಿತುಕೊಂಡು ಈ ವಾರದ ವ್ಯಕ್ತಿಗೆ ಯಾರನ್ನು ಸಂದರ್ಶನ ಮಾಡುವ ಅಂತ ಯೋಚನೆಯಲ್ಲೇ ಮಗ್ನಳಾಗಿದ್ದೆ. ಆಗಲೇ ದಾರಿ ಅಕ್ಕ ಪಕ್ಕ ಹಚ್ಚ ಹಸಿರ ಕಾಡುಗಳ ಮಧ್ಯೆ ಬಸ್ಸು ಚಲಿಸುತ್ತಿದ್ದರೆ ಪಕೃತಿ ಸೌಂದರ್ಯವನ್ನು ಸವಿಯುತ್ತಾ ಖುಷಿ ಪಡುತ್ತಿದೆ. ಈ ಖುಷಿಯ ನಡುವೆ ಮತ್ತೊಂದೆಡೆ ಉಸಿರು ನೀಡುತ್ತಿರುವ ಈ ಹಸಿರು ಯಾವಾಗ ಮಾನವನ ಲಾಲಸೆಗೆ ನೆಲಸಮವಾಗುತ್ತೋ ಎಂಬುದನ್ನು ನೆನೆದು ಆತಂಕ ಶುರುವಾಯಿತು.
ಮಾನವನ ದುರಾಸೆಗೆ ಪ್ರಕೃತಿ ಹೀಗೆ ಬರಿದಾಗುತ್ತಿದ್ದರೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿ ಅಂದೆ ಏನು ಎಂದು ಕೇಳಿದರೆ ಇವೇ ಕಾಂಕ್ರೀಟ್ ಕಾಡುಗಳು, ಮಾನವ ನಿರ್ಮಿತ ಕೆರೆ, ಆರ್ಟಿಫಿಶಲ್ ಹಚ್ಚ ಹಸಿರ ಪರಿಸರದ ಬಗ್ಗೆನೇ ಹೇಳುವಂತಹ ಪರಿಸ್ಥಿತಿ ನಿರ್ಮಾಣ ಆಗಬಹುದೇನೊ…? ಎಂದು ಅನ್ನಿಸುತ್ತದೆ. ಇದು ನಂಬಲಸಾಧ್ಯವಾದರೂ ಸಂಭವಿಸಬಹುದಾದ ಕಹಿ ಸತ್ಯ ಎಂದರೆ ತಪ್ಪಾಗಲಾರದು.
ಮಾನವನ ಲಾಲಸೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲಾಗುತ್ತಿರುವ ದೌರ್ಜನ್ಯದಿಂದ ಅರಣ್ಯ ಸಂಪತ್ತು ವಿನಾಶದತ್ತ ತಲುಪಿದೆ. ಇಂತಹ ಸಂದರ್ಭದಲ್ಲಿ ಪ್ರಕೃತಿಯ ರಕ್ಷಣೆ ಬಗ್ಗೆ ಯೋಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗೆ ಆಲೋಚನೆಮಾಡುತ್ತಾ ಇದ್ದಾಗ ಈ ವಾರದ ವ್ಯಕ್ತಿಗೆ ಸೂಕ್ತ ಅನ್ನಿಸಿದ್ದೆ ಕರಾವಳಿಯ ಪ್ರಕೃತಿ ಪ್ರೇಮಿ ದಿನೇಶ್ ಹೊಳ್ಳ ಅವರು. ಇವರು ಬಹುಮುಖ ಪ್ರತಿಭಾವಂತ. ಇವರು ಪರಿಸರ ಪ್ರೇಮಿ ಆಗಿರುವ ಜೊತೆಗೆ ಓರ್ವ ಅದ್ಭುತ ಗಾಳಿಪಟ ರಚನಾಕಾರ, ಸಾಹಿತಿ, ರೇಖಾಚಿತ್ರಕಾರ, ವಿಮರ್ಶಕ, ಛಯಾಚಿತ್ರಕಾರ… ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಈ ಪರಿಸರ ಪುತ್ರ ದಿನೇಶ್ ಹೊಳ್ಳ ಅವರು ಜನಿಸಿದ್ದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ. ತಂದೆ ಶಂಕರನಾರಾಯಣ ಹೊಳ್ಳ ಶಾಲಾ ಶಿಕ್ಷಕರು. ತಾಯಿ ಯಮುನಾ ಹೊಳ್ಳ ಗೃಹಿಣಿಯಾಗಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಸ್ಕೂಲ್ ನಲ್ಲಿ ಹಾಗೂ ದೀಪಿಕಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಪಿಯುಸಿ ಶಿಕ್ಷಣದ ಬಳಿಕ ಸುಂಕದ ಕಟ್ಟೆಯ ಎಸ್ಎಂಎಸ್ ಪಾಲಿಟೆಕ್ನಿಕ್ ನಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ. ಬಳಿಕ 1989 ರಲ್ಲಿ “ಮೇಷಾ ಗ್ರಾಫಿಕ್ಸ್” ಸಂಸ್ಥೆನ್ನು ಆರಂಬಿಸಿ 32 ವರ್ಷಗಳಿಂದ ಯಶಸ್ವಿಯಾಗಿ ತಮ್ಮ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ನಮ್ಮ ” ವಾರದ ವ್ಯಕ್ತಿ” ಯಲ್ಲಿ ಇವರ ಪರಿಸರ ಹೋರಾಟಗಳು, ಚಿತ್ರಕಲೆ, ಚಾರಣ, ಹೀಗೆ ವಿಭಿನ್ನ ಕ್ಷೇತ್ರದ ಸಾಧನೆಯ ಅನುಭವವನ್ನು ಅವರ ಮಾತಿನಲ್ಲೇ ತಿಳಿಯೋಣ
1) ಉ.ಟೈಮ್ಸ್: ದಿನೇಶ್ ಹೊಳ್ಳ ಅವರಿಗೆ ಪ್ರಕೃತಿ ಜೊತೆಗಿನ ನಂಟು ಆರಂಭವಾದದ್ದು ಹೇಗೆ ಈ ಬಗ್ಗೆ ತಿಳಿಸಿ.
ಅತಿಥಿ: ಚಿತ್ರ ಕಲೆಯಲ್ಲಿ ಆಸಕ್ತಿ ಇದ್ದೂದರಿಂದ ಆಗಾಗ ಚಾರಣ (ಟ್ರೆಕ್ಕಿಂಗ್)ಕ್ಕೆ ಹೋಗುತ್ತಿದ್ದೆ. ಹೀಗೆ ಟ್ರೆಕ್ಕಿಂಗ್ ಹೋದಾಗೆಲ್ಲಾ ಛಾಯಾ ಚಿತ್ರ ತೆಗೆಯುವುದು, ಪೈಂಟಿಂಗ್ ಮಾಡುವುದು ಹೀಗೆ ಮಾಡುತ್ತಾ ಇದ್ದೆ. ಈ ಅವಧಿಯಲ್ಲಿ ನಾನು ಒಬ್ಬ ಸಾಮಾನ್ಯ ಚಾರಣಿಗನಾಗಿದ್ದೆ. ಸಮಯ ಕಳೆದಂತೆ ಪಶ್ಚಿಮ ಘಟ್ಟದ ಅಗೋಚರ ಪರಿಸರ ವಿನಾಶಕ ಯೋಜನೆಗಳು, ಕಾಡ್ಗಿಚ್ಚು, ,ಬೇಟೆ, ರೆಸಾರ್ಟ್ಗಳು ,ಅಸಂಬದ್ದ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕಾಗುವ ಹಾನಿಗಳ ಬಗ್ಗೆ ನನ್ನಷ್ಟಕ್ಕೆ ಚಿಂತನೆ ಮಾಡುತ್ತಿದ್ದೆ. ಆಗೆಲ್ಲಾ ಪ್ರಕೃತಿ ಮೇಲಿನ ಮಾನವರ ದಬ್ಬಾಳಿಕೆ ಬಗ್ಗೆ ಯಾರೂ ಕೇಳುವವರಿಲ್ಲವೇ. ಯಾಕೆ ಹೀಗಾಗುತ್ತಿದೆ ಎಂದು ಆಲೋಚಿಸುತ್ತಿದ್ದೆ.
ಪರಿಸರಕ್ಕೆ ಮಾರಕವಾಗುವ ಯೋಜನೆಗಳು ರೂಪುಗೊಳ್ಳುತ್ತಿದ್ದೂದರಿಂದ ಇವುಗಳಿಗೆ ನಾವು ಏನು ಮಾಡಬಹುದು…. ನಮ್ಮಿಂದ ಏನು ಮಾಡಲು ಸಾಧ್ಯ. ಇದರಿಂದ ಪ್ರಕೃತಿಗಾಗುವ ಲಾಭ ನಷ್ಟಗಳೇನು ಎಂಬ ಬಗ್ಗೆ ವಿಮರ್ಶೆ ಮಾಡಲು ಆರಂಭಿಸಿದೆ. ಆ ಸಮಯದಲ್ಲಿ 2001 ರಲ್ಲಿ ರಾಜ್ಯ ಸರಕಾರದಿಂದ ನೇತ್ರಾವತಿ ನದಿ ತಿರುವು ಯೋಜನೆಯ ಪ್ರಸ್ತಾಪ ಬಂದಿತ್ತು. ಇದು ಕೆಳಮುಖವಾಗಿ ಹರಿಯುವ ನದಿಯನ್ನು ಅದರ ವಿರುದ್ಧ ದಿಕ್ಕಿನಲ್ಲಿ ಮೇಲ್ಮುಖವಾಗಿ ಹರಿಸುವ ಯೋಜನೆಯಾಗಿದ್ದರಿಂದ ಇಲ್ಲಿ ಹೇಗೆ ನದಿಯನ್ನು ತಿರುಗಿಸುತ್ತಾರೆ. ಯಾವ ತಂತ್ರಜ್ಞಾನ ಬಳಸುತ್ತಾರೆ, ಎಲ್ಲಿ ತಿರುಗಿಸುತ್ತಾರೆ. ಎಂಬ ಬಗ್ಗೆ ಮಾಹಿತಿಯ ಹುಡುಕಾಟದಲ್ಲಿ ಇದ್ದಾಗ ಎಲ್ಲಿಯೂ ನನಗೆ ಬೇಕಾದ ಮಾಹಿತಿ ಸಿಕ್ಕಿರಲಿಲ್ಲ. ಆದ್ದರಿಂದ ಈ ಯೋಜನೆ ವಿಚಾರವಾಗಿ ನದಿ ಹರಿಯುವ ದಿಕ್ಕು, ಉಪನದಿಗಳು, ಹೀಗೆ ಎಲ್ಲಾ ಆಯಾಮಗಳಲ್ಲಿ ಮಾಹಿತಿ ಸಂಗ್ರಹಮಾಡಲು ಆರಂಭಿಸಿದೆ. 8 ತಿಂಗಳುಗಳ ಕಾಲ ವಾರಕ್ಕೊಮ್ಮೆ ನದಿ ಮೂಲಗಳಿಗೆ ಹೋಗುವುದು ಅಧ್ಯಯನ ಮಾಡುವುದು ಮಾಡಿದಾಗ ಇಲ್ಲಿ ಏನು ನಡೆಯುತ್ತಿದ್ದೆ ಎಂಬ ಸ್ಪಷ್ಟ ಚಿತ್ರಣ ಸಿಗಲಾರಂಭಿಸಿತ್ತು. ಸರಕಾರದ ಯೋಜನೆಗಳು ಇದೇ ರೀತಿ ಮುಂದುವರೆದರೆ ಭವಿಷ್ಯ ದಲ್ಲಿ ಪಶ್ಚಿಮ ಘಟ್ಟಕ್ಕೆ ಯಾವ ರೀತಿ ಹೊಡೆತ ಬೀಳುತ್ತದೆ ಎಂಬೆಲ್ಲಾ ವಿಚಾರವನ್ನು ಒಟ್ಟುಗೂಡಿಸಿ ಚಾರಣದ ಮೂಲಕ ಪರಿಸರ ಪ್ರೇಮಿಯಾದೆ. ಬಳಿಕ ಒಂದು ತಂಡ ಕಟ್ಟಿಕೊಂಡು ಎತ್ತಿನ ಹೊಳೆ ಯೋಜನೆ ವಿರುದ್ಧದ ಹೋರಾಟ, ಪರಿಸರ ವಿನಾಶಕ ಯೋಜನೆಗಳು ವಿರುದ್ಧ ಹೋರಾಟ, ಪಶ್ಚಿಮ ಘಟ್ಟ ಸಂರಕ್ಷಣೆ, ಕಾಡ್ಗಿಚ್ಚಿನ ಬಗ್ಗೆ ಜನಜಾಗೃತಿ ಹಾಗೂ ವಿದ್ಯಾರ್ಥಿಗಳಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಜನಜಾಗೃತಿ ಮೂಡಿಸುತ್ತಾ 25 ವರ್ಷಗಳಿಂದ ಬರುತ್ತಿದ್ದೇವೆ.
2) ಉ.ಟೈಮ್ಸ್: ನಿಮ್ಮ ಪರಿಸರ ಹೋರಾಟದ ಅನುಭವ ತಿಳಿಸಿ?
ಅತಿಥಿ: ಪಶ್ಚಿಮ ಘಟ್ಟದ ಬಗ್ಗೆ ಜನರಿಗೆ ಸಮರ್ಪಕವಾದ ಮಾಹಿತಿ ಕೊರತೆ ಇದೆ. ನಗರ ವಾಸಿಗಳಿಗೆ ಕಾಡು ಬೆಟ್ಟ ಎನ್ನುವುದು ಮೋಜು ಮಸ್ತಿಗೆ ಸೀಮಿತವಾದ ವಿಚಾರ. ಪಶ್ಚಿಮ ಘಟ್ಟಗಳು ಇರುವುದರಿಂದ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ದ.ಕ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ ಅಂದರೆ ಅದು ಪಶ್ಚಿಮ ಘಟ್ಟ. ಅಲ್ಲಿ ಸಮಸ್ಯೆಯಾದರೆ ಅದರು ದಕ್ಷಿಣ ಭಾರತದ ಮೇಲೆ ಪ್ರಭಾವ ಬೀರುತ್ತವೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಎತ್ತಿನ ಹೊಳೆ ಯೋಜನೆ ಹೇಗಿದೆ ಎಂದರೆ ಇಂದಿಗೂ ದ.ಕ ಜಿಲ್ಲೆಯ ಜನರಿಗೆ ನಮ್ಮ ನದಿಯನ್ನು ತಿರುಗಿಸುತ್ತಾರೆ. ಭವಿಷ್ಯ ದಲ್ಲಿ ಸಮಸ್ಯೆ ಆಗುತ್ತದೆ. ಎಂಬ ಬಗ್ಗೆ ಮಾಹಿತಿ ಇಲ್ಲ. ಏನೋ ಸರಕಾರ ಯಾವುದೋ ನೀರಾವರಿ ಯೋಜನೆ ಮಾಡುತ್ತಿದೆ ಎಂದು ಸುಮ್ಮನಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ. ಮನೆ ಮನೆಗೆ , ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಅಲ್ಲಲ್ಲಿ ಚರ್ಚೆ, ಸಭೆ, ಸಂವಾದ ಕಾರ್ಯಕ್ರಮಗಳನ್ನು ಮಾಡಿದಾಗ ಅದು ಜನ ಜಾಗೃತಿಯಾಗಿ ಬೆಳೆಯಿತು. 2014 ರಲ್ಲಿ ಎತ್ತಿನ ಹೊಳೆ ಯೋಜನೆ ಆರಂಭ ವಾಗಿ 1017 ರ ವೇಳೆಗೆ 12,000 ಮಂದಿ ಸೇರಿ ರಸ್ತೆ ರೋಖೋ ನಡೆಸಿ ಪ್ರತಿಭಟನೆ ನಡೆಸಿದಾಗ ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿತ್ತು. ಯಾವುದೇ ವಿಚಾರವನ್ನು ಜನರಿಗೆ ಮನದಟ್ಟು ಮಾಡದಿದ್ದಾಗ ಅವರು ಹೋರಾಟಕ್ಕೆ ಇಳಿಯುವುದಿಲ್ಲ. ಹಾಗಾಗಿ ಜನಸಾಮಾನ್ಯರಿಗೆ ಅದರ ಅರಿವು ಮೂಡಿಸಿದ್ದರಿಂದ ಹೋರಾಟ ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಿತು.
3) ಉ.ಟೈಮ್ಸ್: ಪಶ್ಚಿಮ ಘಟ್ಟಗಳ ಬಗ್ಗೆ ಮಾಹಿತಿ ತಿಳಿಸಿ?
ಅತಿಥಿ: ಪಶ್ಚಿಮ ಘಟ್ಟಗಳು ತಮಿಳುನಾಡಿನ ಕನ್ಯಾ ಕುಮಾರಿ ಯಿಂದ ಹಿಡಿದು ಗುಜರಾತಿನ ತಪತಿ ನದಿಯ ವರೆಗೆ ಅಂದರೆ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ,ಮಹಾರಾಷ್ಟ್ರ, ಗುಜರಾತ್ 6 ರಾಜ್ಯಗಳಿಗೂ 1600 ಕಿ.ಮಿ ವರೆಗೆ ವ್ಯಾಪ್ತಿ ಹರಡಿದೆ. ಈ ವ್ಯಾಪ್ತಿಯಲ್ಲಿ ಬೆಟ್ಟಗಳು, ಕಾಡುಗಳು,ಕಣಿವೆಗಳು ,ಕಂದರಗಳು. ಪಶ್ಚಿಮ ಘಟ್ಟ ಜೀವ ವೈವಿಧ್ಯತೆ ಯ ವೈಶಿಷ್ಟ್ಯತೆ. ಬೆಟ್ಟದ ಮೇಲಿನ ಹುಲ್ಲು ಗಾವಲುಗಳು, ಪಶ್ಚಿಮ ಘಟ್ಟಗಳ ಎರಡು ಬೆಟ್ಟಗಳ ಕಣಿವೆ ಪ್ರಪಾತದಲ್ಲಿ ಇರುವುದು ಶೋಲಾ ಅರಣ್ಯ ಕಾಡುಗಳು. ಈ ಹುಲ್ಲು ಗಾವಲಿಗೂ ಮಳೆ ಕಾಡಿಗೂ ಅವಿನಾಭಾವ ಸಂಬಂಧವಿದೆ. ನಮಗೆ ವರ್ಷದಲ್ಲಿ 4 ತಿಂಗಳು ಮಳೆಯಾದರೆ ಪಶ್ಚಿಮ ಘಟ್ಟದಲ್ಲಿ 6 ತಿಂಗಳು ಮಳೆಯಾಗುತ್ತದೆ. ಈ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ಮೇಲ್ಬಾಗದಲ್ಲಿ ಹರಿದು ಹೋಗುವ ನೀರು ನದಿಯಾಗಿ ಹರಿಯುತ್ತದೆ. ಒಳಭಾಗದ ಜಲನಾಡಿಗಳು(ವಾಟರ್ ಲೇಯರ್ಸ್) ಜಲಪಾತ ಇರುವ ಕಡೆ ಮಾತ್ರ ತೆರೆದುಕೊಳ್ಳುತ್ತದೆ. ಈ ಜಲನಾಡಿಗಳಲ್ಲಿ ಮಳೆನೀರು ಹರಿದು ಬಂದು ಪಶ್ಚಿಮ ಘಟ್ಟದ ಶೋಲಾ ಕಾಡುಗಳಲ್ಲಿ ಶೇಖರಣೆಯಾಗುತ್ತದೆ. ಹೀಗೆ ಶೇಖರಣೆಯಾದ ನೀರು ಒಂದು ಮಳೆಗಾಲದ ನಂತರ ಮತ್ತೊಂದು ಮಲೆಗಾಲ ಬರುವವರೆಗೆ ಹಂತಹಂತವಾಗಿ ಹೊಳೆಗೆ ಸರಬರಾಜು ಮಾಡಿ ಹೊಳೆಯನ್ನು ಜೀವಂತವಾಗಿಸುವ ಶಕ್ತಿ ಸಾಮಥ್ರ್ಯ ಹೊಂದಿದೆ. ಇಲ್ಲಿನ ಜೀವ ವೈವಿಧ್ಯತೆ ಒಂದಕ್ಕೊಂದು ಸಂಬಂಧ ಹೊಂದಿದೆ. ಪಶ್ಚಿಮ ಘಟ್ಟದಲ್ಲಿ 123 ಜಾತಿಯ ಇರುವೆಗಳು ಇವೆ. ಪಶ್ಚಿಮ ಘಟ್ಟದಲ್ಲಿ ಇರುವೆಗಳ ಸಂತತಿ ಕಡಿಮೆಯಾದರೆ ಅರಬ್ಬಿ ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತದೆ. ಅಲ್ಲಿಯ ಪಾಚಿ, ಶಿಲೀಂಧ್ರ, ಗೆದ್ದಲು, ಜೇನು ಹುಳ ಕಣ್ಣಿಗೆ ಕಾಣದ ಜೀವಿಗಳು ಅಗೋಚರವಾಗಿ ನಮ್ಮ ದಿನನಿತ್ಯದ ಬದುಕಿಗೆ ಸಹಕಾರಿಯಾಗಿದೆ. ಪಶ್ಚಿಮ ಘಟ್ಟದ ಪ್ರತೀ ವನ್ಯ ಜೀವಿಗಳು ಇಂದು ಅಳಿವಿನ ಅಂಚಿನಲ್ಲಿದೆ. ಬೇಟೆ, ಕಾಡ್ಗಿಚ್ಚು, ಬೇರೆ ಬೇರೆ ಯೋಜನೆಗಳಿಂದಾಗಿ ವನ್ಯ ಜೀವನಗಳ ಸಂತತಿ ನಾಶವಾಗುತ್ತಿದೆ. ಇದರಿಂದ ಇಕೋ ಸಿಸ್ಟಮ್ ಹಾಳಾಗುತ್ತಿದೆ. ನಗರ ಬೆಳವಣಿಗೆ ಆಗಬೇಕಾದರೆ ಪಶ್ಚಿಮ ಘಟ್ಟ ಉಳಿವು ತುಂಬಾ ಅಗತ್ಯ ಆದರೆ ನಾವು ನಗರ ಅಭಿವೃದ್ಧಿ ಬಗ್ಗೆ ಮಾತ್ರ ಯೋಚಿಸಿ ಪಶ್ಚಿಮ ಘಟ್ಟವನ್ನು ಜೀವಂತ ಉಳಿಸುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಇದರಿಂದ ಭೂ ಕುಸಿತ, ಜಲ ಸ್ಪೋಟ, ಸುನಾಮಿ ಮೊದಲಾದ ವಿಕೋಪಗಳು ಸಂಭವಿಸುತ್ತಿದೆ. ಇದು ನಾವು ಪ್ರಕೃತಿ ಮೇಲೆ ಮಾಡಿದ ದಾಳಿಯ ಪ್ರತಿಕಾರವೇ ಆಗಿದೆ.
4) ಉ.ಟೈಮ್ಸ್ : ನಿಮ್ಮ ಚಾರಣದ ಅನುಭವ ತಿಳಿಸಿ
ಅತಿಥಿ : ಪಶ್ಚಿಮ ಘಟ್ಟದಲ್ಲಿ ನಿರಂತರ 24 ವರ್ಷಗಳಿಂದ ಕರ್ನಾಟಕ ಕೇರಳ, ತಮಿಳುನಾಡಿನ ಹಲವೆಡೆ ಚಾರಣ ಕೈಗೊಂಡಿದ್ದೇವೆ. ಹಿಮಾಲಯ ಬೆಟ್ಟಗಳಿಗೂ ಚಾರಣ ಕೈಗೊಂಡಿದ್ದೇವೆ. ನಾವು ಮಾಡಿದ ಚಾರಣದ ಸಂಖ್ಯೆ ಎಷ್ಟು ಎನ್ನುವುದಕ್ಕಿಂತ ಅವುಗಳಿಂದ ಇತರ ಜನರಿಗೆ ಏನು ಅನುಕೂಲ ವಾಗಿದೆ ಎನ್ನುವುದು ಮುಖ್ಯ. “ವನ್ಯ ಚಾರಣ ಬಳಗ” ಎಂಬ ತಂಡ ಕಟ್ಟಿಕೊಂಡು ಚಾರಣ ಕೈಗೊಳ್ಳುವ ಪ್ರದೇಶದ ಜೀವ ವೈವಿಧ್ಯತೆ ಛಾಯಾಚಿತ್ರ ತೆಗೆಯುವುದು ಮಾಡುತ್ತಿದ್ದೇವು ಆಗ ನನಗೆ ನಾವು ಹೀಗೆ ಮೋಜು ಮಸ್ತಿಗಾಗಿ ಚಾರಣ ಮಾಡಿದರೆ ಏನೂ ಪ್ರಯೋಜನವಿಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ “ಪಶ್ಚಿಮ ಘಟ್ಟಗಳ ಅಧ್ಯಯನ ಚಾರಣ” ಕೈಗೊಂಡೆವು. ಆರಂಭದಲ್ಲಿ ಕಾಲೇಜುಗಳಿಗೆ ತೆರಳಿ ಪಶ್ಚಿಮ ಘಟ್ಟಗಳ ವಿಶೇಷತೆ ಬಗ್ಗೆ ಮಾಹಿತಿ ನೀಡಿ, ಬಳಿಕ ಚಾರಣದಲ್ಲಿಯೂ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ, ಅಲ್ಲಿನ ಕಾಡುಗಳು ಬೆಟ್ಟಗಳು, ಬುಡಕಟ್ಟು ಜನಾಂಗದ ವಿಶೇಷತೆ ಇವುಗಳ ಬಗ್ಗೆ ಮಾಹಿತಿ ನೀಡುವ ಮೂಲಕ ವರ್ಷಕ್ಕೊಂದು 15 ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಾರಣಕ್ಕೆ ಕರೆದುಕೊಂಡು ಹೋಗುತ್ತಿದ್ದೆವು. ಇವರಲ್ಲಿ 8 ಮಂದಿ ವಿದ್ಯಾರ್ಥಿ ಗಳು ಬದಲಾದರೂ ನಮ್ಮ ಚಾರಣಕ್ಕೆ ಅರ್ಥ ಸಿಗುತ್ತದೆ. ಕಾಡ್ಗಿಚ್ಚು ಅಂದರೆ ಮರಕ್ಕೆ ಮರತಾಗಿ ಬೆಂಕಿ ಸೃಷ್ಟಿಯಾಗಿ ಕಾಡ್ಗಿಚ್ಚು ಉಂಟಾಗುತ್ತದೆ ಎಂಬುದು ಕಪೋಲಕಲ್ಪಿತ ವಿಷಯ. ಕಾಡ್ಗಿಚ್ಚು ಉಂಟಾದರೆ ಅಲ್ಲಿ ಮಾನವನ ಚಟುವಟಿಕೆ ಇದೆ ಎಂದೇ ಅರ್ಥ ಹಾಗಾಗಿ ಈ ಬಗ್ಗೆ ಜನರಲ್ಲಿ ಮನವರಿಕೆ ಮಾಡಿದಾಗ ಆತನ ಚಾರಣ ಸಾರ್ಥಕ ಆಗುತ್ತದೆ.
5)ಉ.ಟೈಮ್ಸ್ : ಕೆಲವರು ಅಧ್ಯಯನಕ್ಕಾಗಿ ಚಾರಣ ನಡೆಸಿದರೆ ಮತ್ತೆ ಕೆಲವರು ಮೋಜಿಗಾಗಿ ಕೈಗೊಳ್ಳುತ್ತಾರೆ. ಹೀಗಿರುವಾಗ ಚಾರಣ ಕೈಗೊಳ್ಳುವವರಿಗೆ ನಿಮ್ಮ ಸಲಹೆ ಏನು..?
ಅತಿಥಿ : ಮೊಜಿಗಾಗಿ ಚಾರಣ ಕೈಗೊಳ್ಳುವವರರು ಮೋಜು ಮಸ್ತಿ ಮಾಡಿ ತಾವು ಬಳಸಿದ ಪ್ಲಾಸ್ಟಿಕ್ಗಳನ್ನು ಅಲ್ಲಲ್ಲಿ ಎಸೆಯುತ್ತಾರೆ. ಆದರೆ ಇವರ ಎಸೆದ ತ್ಯಾಜ್ಯಗಳು ಇವರ ಮನೆ ಬಾಗಿಲಿಗೆ ಬರುತ್ತದೆ. ಚಾರ್ಮಾಡಿ ಘಾಟಿಯಲ್ಲಿ ಎಸೆಯುವ ತ್ಯಾಜ್ಯಗಳು ಅಲ್ಲಿಂದ ಅಣಿಯೂರು ಹೊಳೆ ಸೇರಿ, ಸುನಾಳ ಹೊಳೆ ಹಾಗೂ ಅಲ್ಲಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇರುತ್ತದೆ. ಅಲ್ಲಿಂದ ನೀರಿನ ಸಂಗ್ರಹವನ್ನು ಸೇರಿ ಮನೆ ಮನೆ ಸೇರುತ್ತದೆ. ಹಾಗಾಗಿ ಪ್ರತಿಯೊಬ್ಬ ಚಾರಣಿಗನೂ ತಾನು ಎಸೆಯುವ ತ್ಯಾಜ್ಯ ನಮ್ಮ ಭವಿಷ್ಯಕ್ಕೆ ದಕ್ಕೆಯಾಗುತ್ತದೆ. ಆದ್ದರಿಂದ ಚಾರಣದ ವೇಳೆ ತ್ಯಾಜ್ಯ ಸೃಷ್ಟಿಗೆ ಕಾರಣವಾಗಿ ಜೀವ ವೈವಿದ್ಯತೆಗೆ ಹಾನಿ ಉಂಟು ಮಾಡದೆ ನಮ್ಮ ಚಾರಣ ಆ ಜಾಗಕ್ಕೆ ಏನಾದರೂ ಸಹಕಾರ ಆಗಬೇಕು ಎಂಬ ಮನೋಭಾವ ಹೊಂದಿರಬೇಕು. ಮಾನವನ ಅಹಂಕಾರ ದಿಂದ ಪಕೃತಿ ನಾಶವಾಗುತ್ತಿದೆ ಒಮ್ಮೆ ಪ್ರಕೃತಿಯೇ ಅಹಂಕಾರದಿಂದ ನಡೆದುಕೊಂಡರೆ ಇಡೀ ಮನುಕುಲವೇ ನಾಶವಾಗುತ್ತದೆ ಎಂಬುದನ್ನು ಮರೆಯಬಾರದು.
6)ಉ.ಟೈಮ್ಸ್ : ಗಾಳಿಪಟ ಜೊತೆಗಿನ ನಂಟು ಹೇಗೆ ಬೇಳೆಯಿತು ?.
ಅತಿಥಿ : ಗಾಳಿಪಟ ಹವ್ಯಾಸಕ್ಕೂ ಚಾರಣವೇ ಕಾರಣ. ಚಾರಣದ ವೇಳೆ ಒಮ್ಮೆ ಸರ್ವೇಶ್ ರಾವ್ ಎಂಬವರು ಬಂದಿದ್ದರು. ಅವರು ಬೆಟ್ಟದ ಮೇಲೆ ಬಹಳ ಅಂದವಾದ ಗಾಳಿಪಟ ಹಾರಿಸುತ್ತಿದ್ದರು. ನಾನು ಕಲಾವಿದನಾಗಿದ್ದರಿಂದ ಆ ಗಾಳಿಪಟದ ಬಗ್ಗೆ ಆಕರ್ಷಿತನಾಗಿ ಅವರ ಬಳಿ ಮಾತನಾಡಿದೆ. ಬಳಿಕ ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡ ರಚಿಸಿ ಆರಂಭದಲ್ಲಿ ತನ್ನೀರು ಬಾವಿ ಬೀಚ್, ಪಣಂಬೂರು ಬೀಚ್ಗಳಲ್ಲಿ ಹವ್ಯಾಸಕ್ಕಾಗಿ ಸಣ್ಣ ಸಣ್ಣ ಗಾಳಿಪಟ ಹಾರಿಸುತ್ತಿದ್ದೇವು. ಹೀಗೆ ಇರುವಾಗ ದೊಡ್ಡದೊಂದು ಗಾಳಿಪಟ ರಚಿಸಬೇಕು ಎಂಬ ಆಲೋಚನೆ ಹೊಳೆದಿತ್ತು. ಆದರೆ ಹಾಳೆಯಿಂದ ಮಾಡಿದರೆ ಅದಕ್ಕೆ ಹಾನಿಯಾಗುವ ಸಮಸ್ಯೆ ಇರುತ್ತದೆ. ಈ ಬಗ್ಗೆ ಆಲೋಚನೆ ಮಾಡುವಾಗ ರಿಕ್ಸ್ಟಾಪ್ ನೈಲನ್ ಎಂಬ ಬಟ್ಟೆ ಇಂಗ್ಲಾಂಡ್ನಲ್ಲಿ ಇರುವ ಬಗ್ಗೆ ತಿಳಿಯಿತು. ಬಳಿಕ ಆ ಬಟ್ಟೆಯನ್ನು ಇಂಗ್ಲಾಂಡ್ನಿಂದ ತರಿಸಿ ನಿರಂತರ ಒಂದುವರೆ ತಿಂಗಳ ಪರಿಶ್ರಮದ ಬಳಿಕ 36 ಅಡಿ ಎತ್ತರದ ಕಥಕಳಿ ಗಾಳಿಪಟ ರಚಿಸಿದೆವು. ಬಳಿಕ ಅದು ಭಾರತದಲ್ಲಿಯೇ ಅತೀ ದೊಡ್ಡ ಗಾಳಿಪಟ ಎಂದು ಲಿಮ್ಕಾ ರೆಕಾರ್ಡ್ ನಲ್ಲಿ ದಾಖಲಾಯಿತು. ಆ ಬಳಿಕ, ಗುಜರಾತ್, ರಾಜಸ್ಥಾನ, ಬಾಂಬೆಯಲ್ಲಿನ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತದೆ. ಅದೇ ರೀತಿ ಗುಜರಾತ್ ಮತ್ತು ರಾಜಸ್ಥಾನ ಈ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ಆಮಂತ್ರಣ ಸಿಕ್ಕಿತ್ತು. ಅಲ್ಲಿ ಡಾಮಿನಟ್ ಮಾರ್ಟಿನ್ ಕಾಲಾರ್ಂಗ್ ಬಾಟಮ್ ಎಂಬ ಇಂಗ್ಲಾಂಡ್ ಮತ್ತು ಫ್ರಾನ್ಸ್ ನ ಅವರಿಗೆ ಈ ಗಾಳಿಪಟ ಬಹಳ ಇಷ್ಟವಾಗಿತ್ತು. ಆಂಪ್ಲಿಟ್ ವರ್ಕ್ನಲ್ಲಿ ಮಾಡಿದ ಗಾಳಿಪಟ ಆಗಿದ್ದರಿಂದ ಅವರಿಗೆ ಇಷ್ಟವಾಗಿತ್ತು. ಅವರು ಫ್ರಾನ್ಸ್ ವಲ್ರ್ಡ್ನ ಅತೀದೊಡ್ಡ ಡಿ.ಪಿ ಕೈಟ್ ಫೆಸ್ಟಿವಲ್ಗೆ ಈ ಗಾಳಿಪಟ ತರುವಂತೆ ಕೇಳಿಕೊಂಡರು. ಬಳಿಕ 2006 ರಲ್ಲಿ ಫ್ರಾನ್ಸ್ಗೆ ಹೋದೆವು. ಬಳಿಕ ಇಂಗ್ಲಾಂಡ್, ಕೆನಡಾ, ಸೌತ್ ಕೊರಿಯಾ ಸೇರಿ ಬೇರೆ ಬೇರೆ ಹತ್ತು ಹನ್ನೆರಡು ದೇಶಗಳಿಗೆ ತೆರಳಿದೆವು. ಅಲ್ಲಿ ಭಾರತವನ್ನು ಪ್ರತಿನಿದಿಸಿದ್ದೆವು. ಬಲಿಷ್ಠ ರಾಷ್ಟ್ರಗಳ ದೊಡ್ಡ ದೊಡ್ಡ ಗಾಳಿಪಟಗಳ ನಡುವೆ ನಮ್ಮ ಗಾಳಿಪಟ ಯಾಕೆ ಅವರಿಗೆ ಇಷ್ಟವಾಗಿತ್ತು ಎಂದರೆ, ನಮ್ಮ ಗಾಳಿಪಟದಲ್ಲಿ ಕಲೆಯನ್ನು ಪ್ರಸ್ತುತ ಪಡಿಸಿದ್ದು ಜೊತೆಗೆ ನಾವು ಗಾಳಿಪಟ ತಯಾರಿಗೆ ಮಾಡುತ್ತಿದ್ದ ಪರಿಶ್ರಮ ಕಾರಣ. ತುಳುನಾಡು, ಭಾರತದ ಸಂಸ್ಕೃತಿ ಪ್ರಚಾರ ಪಡಿಸಿದ ಕಾರಣ “ಟೀಮ್ ಮಂಗಳೂರು” ಬಗ್ಗೆ ವಿದೇಶದಲ್ಲಿ ಗೌರವ ಪಡೆದುಕೊಂಡಿದೆ.
7) ಉ.ಟೈಮ್ಸ್ : 2018ರ ಡೀಪೀ ಕೈಟ್ ಉತ್ಸವಕ್ಕೆ ನಿಮ್ಮ ಕಲಾಕೃತಿ ಆಯ್ಕೆಯಾಗಿತ್ತು ಈ ಬಗ್ಗೆ ಮಾಹಿತಿ ತಿಳಿಸಿ.
ಅತಿಥಿ : ಫ್ರಾನ್ಸ್ ಗೆ ಅದಾಗಲೇ 7 ಭಾರಿ ಹೋಗಿದ್ದೆವು. 2012 ರಲ್ಲಿ ಗಾಳಿಪಟ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಸಮಯದಲ್ಲಿ 10 ದಿನಗಳ ಉತ್ಸವ ಅದಾಗಿತ್ತು. ಅಲ್ಲದೆ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಜನರು ಬರುತ್ತಾರೆ. ಮಳೆಯ ಕಾರಣ ದಿಂದ 2 ನೇ ದಿನ ಗಾಳಿಪಟ ಹಾರಿಸಲು ಸಾಧ್ಯವಾಗದೆ ಎಲ್ಲರೂ ತಮ್ಮ ತಮ್ಮ ಸ್ಟಾಲ್ನಲ್ಲಿ ಕುಳಿತಿದ್ದರು. ಆಗ ನಾನು ನನ್ನ ಸ್ಟಾಲ್ನಲ್ಲಿ ಕುಳಿತು ಆರ್ಟ್ಗಳನ್ನು ಬಿಡಿಸುತ್ತಿದ್ದೆ. ಆಗ ಐಫೆಲ್ ಟವರ್ನ ಆರ್ಟ್ ನ್ನು 2 ನಿಮಿಷ ದಲ್ಲಿ ಮಾಡಿದೆ. ಅದು ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ತುಂಬಾ ಇಷ್ಟವಾಗಿತ್ತು. ಸ್ಪಾಟ್ ನಲ್ಲಿ ಮಾಡುವ ಕಲೆಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚು. ಅಲ್ಲಿನ ಕಾರ್ಯಕ್ರಮದ ಅರ್ಗನೈಸರ್ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ 2014 ರಲ್ಲಿ ಅಲ್ಲಿನ ಮೇಯರ್ ಮತ್ತು ಆರ್ಗನೈಸರ್ ಮೈಲ್ ಮಾಡಿ ತಮ್ಮ ಕಾರ್ಯಕ್ರಮ ಪ್ರಚಾರಕ್ಕೆ ಪೋಸ್ಟರ್ ಗೆ ಡಿಸೈನ್ ಮಾಡಿ ಕೊಡಬಹುದೇ ಎಂದು ಕೇಳಿದರು. ಆಗ ನಾನು ಮಾಡಿದ 3 ಪೋಸ್ಟರ್ ಗಳ ಪೈಕಿ ಒಂದು ಆಯ್ಕೆ ಯಾಗಿತ್ತು. ಅಲ್ಲದೆ ಅಲ್ಲಿನ ಕಾರ್ಯಕ್ರಮ ದಲ್ಲಿ ನನ್ನನ್ನು ಮೈನ್ ಕೌಂಟರ್ ನಲ್ಲಿ ಕೂರಿಸಿ ಪೋಸ್ಟರ್ ಗಳನ್ನು ಇಟ್ಟಿದ್ದರು. ಅಲ್ಲಿ ನಾನು ಪ್ರಿಂಟೆಡ್ ಪೋಸ್ಟರ್ ಗೆ ಸಹಿ ಹಾಕಿ ನೀಡಬೇಕಿತ್ತು. ಅದನ್ನು ಅವರು ಮಾರಾಟ ಮಾಡುತ್ತಿದ್ದರು. ಇದರಿಂದ ಅವರಿಗೆ ತುಂಬಾ ಮೊತ್ತ ಸಂಗ್ರಹವಾಗಿತ್ತು. ಆ ನಂತರ ಅವರು 2018 ರ ವರೆಗೆ ನನ್ನಿಂದಲೇ ಗಾಳಿಪಟ ಮಾಡಿಸಿದರು.
8)ಉ.ಟೈಮ್ಸ್: ಚಿತ್ರಕಲೆ ಮನುಷ್ಯರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.
ಅತಿಥಿ: ಚಿತ್ರ ಕಲೆ ಒಬ್ಬ ಕಲೆಗಾರನಿಗೆ ಸಮಯ ಕಳೆಯುವ ಹವ್ಯಾಸ ವಲ್ಲ. ಒಬ್ಬರ ಚಿತ್ರಕಲೆ ನೋಡುವವರೊಂದಿಗೆ ಸಂವಹನ ನಡೆಸುವ ಶಕ್ತಿ ಹೊಂದಿರಬೇಕು. ಅದು ಸಂದೇಶ ನೀಡುವಂತಿರಬೇಕು. ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ, ಕೌಟುಂಬಿಕ ಮೌಲ್ಯಗಳು, ಸಮಾಜದ ಮೌಲ್ಯಗಳ ಬಗ್ಗೆ ಜನರಿಗೆ ಉತ್ತಮ ಸಂದೇಶ ಕೊಡುವ ಕಲಾಕೃತಿಗಳು ಎಂದಿಗೂ ಜನಜಾಗೃತಿಯಾಗಿ ಉಳಿಯುತ್ತದೆ. ಕಲಾವಿದನಿಗೆ ಸಮಾಜವನ್ನು ತಿದ್ದುವ ಶಕ್ತಿ ಇರುತ್ತದೆ ಆತ ಅದನ್ನು ತನ್ನ ಕಲಾಕೃತಿ ಗಳ ಮೂಲಕ ತೋರಿಸಬೇಕು. ಪೈಂಟಿಂಗ್ ಬರೀಗೋಡೆಗೆ ಸೀಮಿತವಾಗಿಲ್ಲ ಅವುಗಳಿಂದ ಬದಲಾವಣೆ ತರಲು ಸಾಧ್ಯವಿದೆ. ಚಿತ್ರ ಕಲೆ ಮೂಲಕ ಕೋಮುಗಲಬೆ, ಜಾತಿ ವ್ಯವಸ್ಥೆ ಬಗ್ಗೆ ಇರುವಂತಹ ಕೆಟ್ಟ ಆಲೋಚನೆಗಳನ್ನು ಹೊಂದಿರುವ ಮನೋಭಾವವನ್ನು ತಿದ್ದುವ ಕೆಲಸ ಮಾಡಬೇಕು. ಉತ್ತಮ ಸಂದೇಶ ಹೊಂದಿರುವ ಚಿತ್ರಕಲೆ ಯಾವತ್ತೂ ಮಣ್ಣನೆ ಪಡೆದುಕೊಳ್ಳುತ್ತದೆ.
9) ಉ.ಟೈಮ್ಸ್ : ರೇಖಾ ಚಿತ್ರ, ಸಾಹಿತ್ಯದ ಬಗ್ಗೆ ಒಲವು ಹೇಗೆ ಬೇಳೆಯಿತು ಹಾಗೂ ವರ್ಲೀ ಆರ್ಟ್ ಬಗ್ಗೆ ಹೇಳಿ ?
ಅತಿಥಿ: ಒಂದು ಸಲ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರೊಂದಿಗೆ ಕಾಡಿನಲ್ಲಿ ಉಳಿದುಕೊಂಡಿದ್ದೆವು. ಆಗ ನಾವು ಒಂದು ಟ್ರೈಬಲ್ ಡ್ಯಾನ್ಸ್ ನೋಡಬೇಕು ಎಂದು ಕೇಳಿಕೊಂಡಾಗ, ಸೋಲಿಗ ಸಮುದಾಯದ ಕೆಲವು ಮಂದಿ ಬಂದು ಒಂದು ವಿಶೇಷ ನೃತ್ಯ ಮಾಡಿದ್ದರು. ಕತ್ತಲೆಯಲ್ಲಿ ಸ್ತ್ರೀಯೊಬ್ಬರು ನೃತ್ಯಮಾಡುವಾಗ ಬೆಂಕಿಯ ಬೆಳಕು ಆಕೆಯ ಶರೀರದ ಮೇಲೆ ಬಿದ್ದಾಗ ಅದು ಒಂದು ರೇಖೆ ನರ್ತನ ಮಾಡಿತ್ತಿದ್ದಂತೆ ನನಗೆ ಕಂಡಿತ್ತು. ಬಳಿಕ ಅದರ ಬಗ್ಗೆ ನಾನೊಂದು ರೇಖಾ ಚಿತ್ರ ಮಾಡಿ ,ಅದಕ್ಕೊಂದು ಕವಿತೆ ಬರೆದೆ ಈ ಕವಿತೆ 2006 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಗೆ ಆಯ್ಕೆ ಆಗಿತ್ತು ಹೀಗೆ ಚಾರಣ, ಸೋಲಿಗ ಬುಡಕಟ್ಟು ಸಮುದಾಯದಿಂದ ಸಾಹಿತ್ಯ ಮತ್ತು ರೇಖಾ ಚಿತ್ರ ಬೆಳೆಯಿತು. 2018 ರಲ್ಲಿ ಟ್ರೈಬಲ್ ಆಂಡ್ ಆರ್ಟ್ ಎಂಬ ಶೀರ್ಶಿಕೆಯಲ್ಲಿ ನಡೆದ 36 ನೇ ವರ್ಷದ ಡಿಪಿ ಗಾಳಿಪಟ ಉತ್ಸವ ಕ್ಕೆ ಭೇಟಿ ನೀಡಿದ್ದೆ. ಆ ಉತ್ಸವದಲ್ಲಿ 36 ಮೀ. ಉದ್ದದ ಇಂಡಿಯನ್ ಟ್ರೈಬಲ್ ಆರ್ಟ್ ಮಾಡಿ ಕೊಟ್ಟಿದ್ದೆ. ಅದು ಈಗಲೂ ಫ್ರಾನ್ಸ್ ನ ಮೇಯರ್ ಭವನದಲ್ಲಿ ಫ್ರೇಮ್ ಹಾಕಿ ಇಟ್ಟಿದ್ದಾರೆ ಎನ್ನುವುದು ಖುಷಿಯ ವಿಚಾರ.
ಉತ್ತರ ಭಾರತದಿಂದ ಬಂದಂತಹ ವರ್ಲಿ ಕಲೆ ಬುಡಕಟ್ಟು ಸಮುದಾಯದಿಂದ ಆರಂಭವಾದದ್ದು. ಹಳ್ಳಿ, ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯಗಳು ತಮ್ಮ ಸುತ್ತ ನಡೆಯುವ ನಿತ್ಯದ ಸಂಗತಿಯನ್ನು ತಮ್ಮದೇ ಪರಿಕಲ್ಪನೆಯಲ್ಲಿ ರಚಿಸುತ್ತಿದ್ದರು. ಅದರು ನಂತರ ವರ್ಲಿ ಆರ್ಟ್ ಆಗಿ ಬೆಳೆದಿದೆ. ಮಂಗಳೂರಿನಲ್ಲಿ ವರ್ಲಿ ಕಲೆ ಪ್ರಚಾರಕ್ಕೆ ಬಂದದ್ದು 2006 ರ ನಂತರ. ನಗರದ ಗೋಡೆಗಳು ವಿವಿಧ ಪೋಸ್ಟರ್ ಗಳಿಂದ ತುಂಬಿ ಹೋಗುತ್ತಿತ್ತು. ಆಗ ಸಾರಾನಾಥ ಕೈರಂಗಳ, ಗೋಪಾಡ್ಕರ್ ರಂತ ಕಲಾವಿದರು ಸೇರಿ ಗೋಡೆಗಳಲ್ಲಿ ಚಿತ್ರ ಬಿಡಿಸಿ ವರ್ಲಿ ಚಿತ್ರವನ್ನು ಬರೆದಿದ್ದರು. ಆಗ ಅದು ತುಂಬಾ ಜನಪ್ರಿಯತೆ ಪಡೆಯಿತು. ನಂತರ ಆಗಿನ ಜಿಲ್ಲಾಧಿಕಾರಿಯಾಗಿದ್ದ ಪೊನ್ನು ರಾಜ್ ಅವರು, ಸರಕಾರಿ ಕಾಲೇಜಿನ ಗೋಡೆ ಮೇಲೆ ಶಿಕ್ಷಣಕ್ಕೆ ಸಂಬಂಧಿಸಿ, ಆಸ್ಪತ್ರೆಯ ಎದುರು ಆರೋಗ್ಯಕ್ಕೆ ಸಂಬಂಧಿಸಿ ಹಾಗೂ ಇತರ ಕಡೆಗಳ ಗೋಡೆಗಳ ಮೇಲೆ ವರ್ಲಿಚಿತ್ರ ಮಾಡಿಸಿದ್ದರು. ಹೀಗೆ ವರ್ಲಿ ಕಲೆ ಪ್ರಸಿದ್ದಿ ಪಡೆಯಿತು.
10) ಉ. ಟೈಮ್ಸ್: ನಿಮ್ಮ ಮುಂದಿನ ಕನಸು ಏನು
ಅತಿಥಿ : ಎಲ್ಲರೂ ಸ್ವಾ ಇಚ್ಛೆಯಿಂದ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯದ ಭದ್ರತೆಗಾಗಿ ಪಶ್ಚಿಮ ಘಟ್ಟ, ನದಿಗಳನ್ನು, ನೇತ್ರಾವತಿ ನದಿ ಉಳಿಸುವ ಪ್ರಯತ್ನ ಮಾಡಬೇಕು ಎಂಬ ಚಿಂತನೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನುತ್ತಿದ್ದೇನೆ. ಉತ್ತರ ಕನ್ನಡದ ಬುಡಕಟ್ಟು ಸಮುದಾಯದ ಕಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ವನ ಬೆಳಕು, ವನ ಚೇತನ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ಈಗಾಗಲೇ ವನ ಬೆಳಕು 36 ಶಿಬಿರ ಆಗಿದ್ದು, ಸೆಪ್ಟೆಂಬರ್ ಒಂದು ತಿಂಗಳು ವನ ಚೇತನಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಕಾಡಿನ ಮಕ್ಕಳ ಶಿಕ್ಷಣಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸುವುದು. ಇದರೊಂದಿಗೆ ಉತ್ತರ ಕನ್ನಡದಲ್ಲಿರುವ ಬುಡಕಟ್ಟು ಸಮುದಾಯದ ಕಾಡು ಮಕ್ಕಳಿಗೆ ಶಿಕ್ಷಣ ಲಭಿಸಬೇಕು. ಅವರು ಉನ್ನತ ಸರಕಾರಿ ಹುದ್ದೆಗೆ ಬರುವಂತಾಗಬೇಕು ಎಂಬುದು ಒಂದು ಕನಸು.
11) ಉ.ಟೈಮ್ಸ್ : ಅರಣ್ಯ ವಾಸಿಗಳ ಬಗ್ಗೆ(ಬುಡಕಟ್ಟು ಸಮುದಾಯ) ಮಾಹಿತಿ ನೀಡಿ.
ಅತಿಥಿ : ಪಶ್ಚಿಮ ಘಟ್ಟದ ಬಳಹ ಸೂಕ್ಷ್ಮ ವಿಷಯಗಳನ್ನು ಕಲಿತದ್ದೆ ಬುಡಕಟ್ಟು ಸಮುದಾಯದಿಂದ. ಯಾವುದೇ ಮಾಹಿತಿ ಅಂರ್ತಜಾಲದಿಂದ ಕಲಿಯುವುದಕ್ಕಿಂತ ಭಿನ್ನವಾಗಿ ಪ್ರಾಯೋಗಿಕವಾಗಿ ಸ್ವ ಅನುಭವದಿಂದ ಕಲಿಯುವುದು ಉತ್ತಮವಾದ್ದು. ಯಾಕೆಂದರೆ ಬುಡಕಟ್ಟು ಸಮುದಾಯದವರು ಕಾಡಿನಲ್ಲೇ ಬೆಳೆದವರು ಕಾಡಿನ ಸಕಲವನ್ನೂ ಬಲ್ಲವರು. ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ದಿ ಸಮುದಾಯದ ಬಹುದೊಡ್ಡ ಹೋರಾಟಗಾರ ದಿಯಾಗೋ ಬಸ್ತ್ಯಾಂ ಸಿದ್ದಿ ಅವರಿಂದ ಸಿಗುವ ಮಾಹಿತಿ ತುಂಬಾ ಮಹತ್ವವಾದದ್ದು. ಕಾಡಿಗೆ ಬುಡಕಟ್ಟು ಸಮುದಾಯದವರಿಂದ ಯಾವುದೇ ತೊಂದರೆ ಆಗಿಲ್ಲ. ಬುಡಕಟ್ಟು ಸಮುದಾಯದವರು ಕಾಡಿನ ಆಸ್ತಿ. ಕಾಡು ಉಳಿಯಬೇಕಾದರೆ ಬುಡಕಟ್ಟು ಸಮುದಾಯದ ವರು ಉಳಿಯಲೇಬೇಕು.
12)ಉ.ಟೈಮ್ಸ್ : ಪ್ರಕೃತಿ ಬಗೆಗೆ ಯುವ ಜನತೆ ಯಾವ ರೀತಿ ಎಚ್ಚರಿಕೆ ವಹಿಸಬೇಕು.
ಅತಿಥಿ : ಶಾಲಾ ಕಾಲೇಜಿನಲ್ಲಿ ಪರಿಸರ ಪಾಠ ಕಡ್ಡಾಯವಾಗಿ ಇರಬೇಕು ಎಂದು 8 ವರ್ಷಗಳ ಹಿಂದೆ ಸೈಹ್ಯಾದ್ರಿ ಸಂಚಲನದ ವತಿಯಿಂದ ಸರಕಾರಕ್ಕೆ ಮನವಿ ಕೊಡಲಾಗಿತ್ತು. ಕೇವಲ ಜು.1 ರಂದು ವನಮಹೋತ್ಸವ ಮಾಡುವುದಲ್ಲ. ಗಿಡ ಮರ ಪರಿಸರದ ಮಹತ್ವ ಪಾಠದಲ್ಲಿ ಬರಬೇಕು. ಆಗ ನನ್ನ ಸುತ್ತಮುತ್ತಲಿನ ಪರಿಸರ ನನ್ನ ಬದುಕಿಗೆ ಶ್ರೇಷ್ಠವಾದ ಉಡುಗೊರೆ ಕೊಟ್ಟಿದೆ ನಾನು ಅದನ್ನು ಉಳಿಸಬೇಕು ಎಂಬ ಮನೋಭಾವ ಬೆಳೆಯುತ್ತದೆ.
ಒಬ್ಬ ಮಗನಿಗೆ ಪೋಷಕರು ಆತನಿಗೆ ಬೇಕಾದ ವಿದ್ಯೆ, ಕಾರು, ಹಣ ಕೂಡಿಬೇಕು ಅಂತಾರೆ. ಆದರೆ ಅದೇ ಮಗ ಅಪ್ಪನ ಬಳಿ ಕೇಳುತ್ತಾನೆ” ನನಗೆ ನೀನು ಕಾರು, ಬಂಗಲೆ, ಜಾಗ ಎಲ್ಲಾ ಕೊಟ್ಟೆ ನೀರು ಎಲ್ಲಿ ಇಟ್ಟಿದೀಯ ಅಪ್ಪಾ ಅಂತ”. ಆಗ ಅಪ್ಪನಾದವ ಕಣ್ಣೀರು ಕೊಡಬೇಕಾದಂತಹ ಬರಗಾಲ ಮುಂದಿನ ಹತ್ತು ವರ್ಷಗಳಲ್ಲಿ ಬರಬಹುದು.
ಜಗತ್ತಿನಾದ್ಯಂತ ನೀರಿನ ಸಮಸ್ಯೆ ಆಗುತ್ತದೆ ಎಂದು ಯುನೆಸ್ಕೋ ವರದಿ ಹೇಳುತ್ತದೆ. ನಾವು ಈ ಸೂಚನೆಯನ್ನು ಕಡೆಗಣಿಸುತ್ತಿದ್ದೇವೆ. ಭವಿಷ್ಯದ ಭದ್ರತೆಗಾಗಿ ಮನೆ ಮನೆಯಲ್ಲಿ ಪೆÇೀಷಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಕಾಳಜಿ, ಮಹತ್ವ ಅಗತ್ಯವನ್ನು ತಿಳಿಸಿಕೊಡುವ ಕೆಲಸ ಮಾಡಬೇಕು. ಹಾಗೂ ಪ್ರಕೃತಿ ಯಿಂದ ನಾವೆಷ್ಟು ಉಪಯೋಗ ಪಡೆದಿದ್ದೇವೆ ಪ್ರಕೃತಿಗೆ ತೊಂದರೆ ಆದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಮನದಟ್ಟು ಮಾಡಬೇಕು. ಸುತ್ತ ಮುತ್ತಲಿನ ಪರಿಸರ ಉಳಿಸುವ ಮನೋಭಾವ ಬೆಳೆಯಬಹುದು. ನಮ್ಮ ತಪ್ಪುಗಳಿಂದಲೇ ಪರಿಸರಕ್ಕೆ ಹಾನಿಯಾಗುತ್ತದೆ. ಇದು ನಾವೇ ಆಪತ್ತನ್ನು ಆಮಂತ್ರಣ ನೀಡಿ ಆಹ್ವಾನಿಸುವಂತಾಗಿದೆ. ಇಂತಹ ಪರಿಸರದ ಬಗ್ಗೆ ಯುವ ಜನತೆ ಕಾಳಜಿ ತೋರಲೇ ಬೇಕು.
13) ಉ.ಟೈಮ್ಸ್ : ಡಿಜಿಟಲೈಸ್ಡ್ ಮತ್ತು ಸಾಂಪ್ರದಾಯಿಕ ಚಿತ್ರಕಲೆ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಕಲೆಗೆ ವಿಮರ್ಶೆ ಎಷ್ಟು ಮುಖ್ಯ
ಅತಿಥಿ: ಕಲೆಗಾರ ಬಿಡಿಸಿದ ನೈಜ ಕಲಾಕೃತಿಗೂ ಡಿಜಿಟಲೈಸ್ಡ್ ಚಿತ್ರಕ್ಕೂ ಬಹಳಾ ವ್ಯತ್ಯಾಸವಿದೆ. ಕಲಾ ಕ್ಷೇತ್ರ ಆರಂಭದಿಂದಲೂ ಬದಲಾಗುತ್ತಾ ಬರುತ್ತಿದೆ. ಈಗಿನ ವ್ಯಾವಹಾರಿಕ ಕ್ಷೇತ್ರಕ್ಕೆ ಬದಲಾವಣೆ ಅನಿವಾರ್ಯ. ಆದರೆ ಮಾರುಕಟ್ಟೆಯಲ್ಲಿ ಈಗ ಡಿಜಿಟಲ್ ತಂತ್ರಜ್ಞಾನ ಏನೇ ಇದ್ದರೂ ಕಲಾ ಪೋಷಕ ನೇರವಾಗಿ ಗ್ಯಾಲರಿಗೆ ಬಂದು ಕುಂಚದಲ್ಲಿ ಬಿಡಿಸಿದ ಚಿತ್ರದಲ್ಲಿ ಪ್ರಭುತ್ವತೆ ಇರುತ್ತದೆ ಹಾಗಾಗಿ ಇವುಗಳಿಗೆ ಸಮಾಜದಲ್ಲಿ ಪ್ರಧಾನ್ಯತೆ ಹೆಚ್ಚು. ಇವುಗಳ ಪ್ರಾಮುಖ್ಯತೆ ತಲೆ ತಲಾಂತರಗಳಿಂದ ಶಾಸ್ವತವಾಗಿ ಉಳಿಸಿಕೊಂಡು ಬಂದಿದೆ.
ಒಬ್ಬ ಕಲಾವಿದ ಚಿತ್ರ ಕಲೆಗೆ ವಿಮರ್ಶೆ ಬರೆದಾಗ ಮಾತ್ರ ಅದು ಮಹತ್ವ ಪಡೆದುಕೊಳ್ಳುತ್ತದೆ. ಯಾವುದೇ ವಿಚಾರಕ್ಕೆ ಚರ್ಚೆ,ಪ್ರಶ್ನೆ, ಸಂವಾದ ಇಲ್ಲದೇ ಹೋದರೆ ಅದು ಮಹತ್ವ ಪಡೆಯುವುದಿಲ್ಲ. ರಿಯಲಿಸ್ಟಿಕ್ ಪೇಯಿಂಟಿಂಗ್ ನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ ಅಬ್ಸ್ಸ್ಟ್ರಾಕ್ಟ್ ಪೈಟಿಂಗ್ ಹೆಚ್ಚಿನವರಿಗೆ ಅರ್ಥವಾಗುವುದಿಲ್ಲ. ಚಿತ್ರಕಲೆಯಲ್ಲಿ ಪ್ರತಿಯೊಂದು ಬಣ್ಣಕ್ಕೂ ಅರ್ಥ ವಿರುತ್ತದೆ. ವಿಮರ್ಶೇಮಾಡಿದಾಗ ಇದರ ನೈಜ್ಯತೆ ತಿರುಳು ಹೊರ ಬರುತ್ತದೆ. ಇದನ್ನು ವೀಕ್ಷಕರಿಗೆ ತಿಳಿಯಪಡಿಸಿದಾಗ ಅಬ್ಸ್ಸ್ಟ್ರಾಕ್ಟ್ ಪೈಟಿಂಗಳ ಬಗ್ಗೆ ಒಲವು ಹೆಚ್ಚಾಗುತ್ತದೆ. ಅವುಗಳ ಪ್ರಾಮುಖ್ಯತೆ ಹೆಚ್ಚಾಗುತ್ತದೆ.
14) ಉ.ಟೈಮ್ಸ್: ಇತರರಿಗೆ ಮಾದರಿಯಾದ ನಿಮ್ಮ ಪುಸ್ತಕ ಬಿಡುಗಡೆಯ ವಿಭಿನ್ನ ಆಲೋಚನೆ ಬಗ್ಗೆ ತಿಳಿಸಿ
ಅತಿಥಿ: ಈ ವರೆಗೆ 5 ಪುಸ್ತಕ ಬಿಡುಗಡೆ ಮಾಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ಸಭಾಂಗಣದಲ್ಲಿ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಿಂದ ಜನರು ರೋಸಿ ಹೋಗಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೇಲವ ಒಂದು ಔಪಚಾರಿಕ ಕಾರ್ಯಕ್ರಮ ಆಗಿರದೆ ಅದು ಪ್ರಯೋಜನಾತ್ಮಕ ಕಾರ್ಯಕ್ರಮ ಆಗಿರಬೇಕು ಎಂಬ ಯೋಚನೆಯಲ್ಲಿ ನನ್ನ “ಅಡವಿ ನಡುವೆ” ಪುಸ್ತಕವನ್ನು ಬಿಸಿಲೆ ಘಾಟಿಯ ಹಸಿರು ವ್ಯೂವ್ ಪಾಯಿಂಟ್ ನಡುವೆ ಮಾಡಿದೆವು. ಈ ವೇಳೆ ಒಂದಷ್ಟು ಕಾಡಿನಲ್ಲಿ ಬೆಳೆಯುವ ಸಸ್ಯ ಗಳ ಬೀಜಗಳನ್ನು ಬಂದ ಪ್ರೇಕ್ಷಕರು ಒಂದೊಂದು ಮುಷ್ಟಿ ಬೀಜವನ್ನು ಇಷ್ಟ ಬಂದ ಕಡೆ ಎಸೆಯುವ ಮೂಲಕ ಉಸ್ತಕ ಬಿಡುಗಡೆಗೊಳಿಸಲಾಯಿತು. ಈ ವೇಳೆ ಎಸೆದ ಸಾವಿರಾರು ಬೀಜಗಳಲ್ಲಿ 200 ಬೀಜ ಮೊಳಕೆ ಬಂದರೂ ನಮ್ಮ ಕಾರ್ಯಕ್ರಮ ಸಾರ್ಥಕ ವಾಗುತ್ತದೆ. ಜೊತೆಗೆ ಕಲಾವಿದರಿಗೆ ಕ್ಯಾನ್ವಾಸ್ ಮತ್ತು ಬಣ್ಣ ನೀಡಿ ಅವರಿಗೆ ಚಿತ್ರಬಿಡಿಸಲು ಅವಕಾಶ ನೀಡಿದೆವು. ಈ ರೀತಿ ಮಾಡಿದಾಗ ಕಾರ್ಯಕ್ರಮಕ್ಕೆ ಬರುವವರು ಕಾರ್ಯಕ್ರಮದಲ್ಲಿ ಸಕ್ರಿಯವ ವಾಗಿ ಭಾಗವಹಿಸಲು ಸಹಕಾರಿಯಾಗುತ್ತದೆ. ಪ್ರಕೃತಿಯ ದೃಶ್ಯಗಳು ಚಿತ್ರಕಾರ ಸೆರೆ ಹಿಡಿದರೆ, ಮತ್ತೊಬ್ಬ ಬರಹಗಾರ ಪ್ರಕೃತಿಯ ಬಗೆಗೆ ಕಥೆ,ಕನವ,ಕವಿತೆಗಳನ್ನು ಬರೆಯುತ್ತಾನೆ. ಹೀಗೆ ಇದು ಹೊಸತನಕ್ಕೆ , ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.
ಇದರೊಂದಿಗೆ “ಕಡಲ ತಟದ ಸೂರ್ಯಕಾಂತಿ” ಪುಸ್ತಕವನ್ನು ತಣ್ಣೀರುಬಾವಿ ಬೀಚ್ ನಲ್ಲಿ. “ಬೆಟ್ಟದ ಹೆಜ್ಜೆಗಳು” ಪುಸ್ತಕವನ್ನು ಚಾರ್ಮಾಡಿ ಘಾಟಿಯ ದೊಡ್ಡೇರಿ ಬೆಟ್ಟದಲ್ಲಿ, “ಹೊಳೆಯ ಬೆಳದಿಂಗಳು” ಪುಸ್ತಕವನ್ನು ಫಲ್ಗುಣಿ ನದಿಯಲ್ಲಿ ಬೆಳದಿಂಗಳ ರಾತ್ರಿಯಲ್ಲಿ ದೀವಟಿಕೆಯ ಬೆಳಕಿನಲ್ಲಿ ದೋಣಿಯಲ್ಲಿ ವೇದಿಕೆ ಮಾಡಿಕೊಂಡು ಪುಸ್ತಕ ಬಿಡುಗಡೆ ಮಾಡಿದ್ದೆವು.
15) ಉ.ಟೈಮ್ಸ್ : ಕಾಡು ಬೆಳೆಸಿ ನಾಡು ಉಳಿಸಿ ಎಂಬ ಪರಿಕಲ್ಪನೆ ಬಗ್ಗೆ ನೀವು ಏನು ಹೇಳುತ್ತೀರಾ.
ಅತಿಥಿ: ಜನರಿಗೆ ಗಿಡಗಳ ನೆನಪಾಗುವುದು ವಿಶ್ವ ಪರಿಸರ ದಿನಾದಂದು ಮಾತ್ರ. ಆದಿನ ಎಲ್ಲರೂ ಮುಂದೆ ಬಂದು ಗಿಡ ನಡುತ್ತಾರೆ ಹಾಗೂ ನಾವು ಸಾವಿರ ಗಿಡ ನೆಟ್ಟಿದ್ದೇವೆ ಲಕ್ಷ ಗಿಡ ನೆಟ್ಟಿದ್ದೇವೆ ಎನ್ನುತ್ತಾರೆ. ಆದರೆ ಬಳಿಕ ಆ ಗಿಡ ಏನಾಯಿತು ಎಂದು ಯಾರೂ ಕೇಳುವುದಿಲ್ಲ. ಗಿಡ ನೆಡುವ ಉತ್ಸಾಹ ಆ ಒಂದು ದಿನಕ್ಕೆ ಮಾತ್ರ ಸೀಮಿತ ವಾಗುತ್ತದೆ. ತಾವು ಗಿಡ ನೆಟ್ಟ ಬಗ್ಗೆ ಪತ್ರಿಕೆ, ಸಾಮಾಜಿಕ ಜಾಲ ತಾಣಗಳಲ್ಲಿ ಬಂದರೆ ವನಮಹೋತ್ಸವ ಮುಗಿಯುತ್ತದೆ. ಮರುದಿನ ಆ ಗಿಡ ಸತ್ತರೂ ಕೇಳುವವರಿಲ್ಲ. ಈ ಬಗ್ಗೆ ” ಎಷ್ಟು ಲಕ್ಷ ಗಿಡ ನೆಡುತ್ತೀರ ಎನ್ನುವುದು ಮುಖ್ಯವಲ್ಲಿ ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೀರಾ ಎನ್ನುವುದು ಮುಖ್ಯ” ಎನ್ನುವ ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸಿ ಗೌಡ ಅವರು ಹೇಳುವ ಅವರಮಾತಿನಲ್ಲಿ ಬಹಳ ಅರ್ಥಪೂರ್ಣವಾದ ಪಾಠವಿದೆ.
ಕೋಟಿ ಕೋಟಿ ಗಿಡ ನೆಟ್ಟಿದ್ದಾರೆ ಎನ್ನುತ್ತಾರೆ ಹಾಗಾದರೆ ನಮ್ಮ ಕರ್ನಾಟಕದಲ್ಲಿ ಕಾಡುಗಳು ಎಲ್ಲಿದೆ. ಸಹಜ ಕಾಡುಗಳು ಹೊರತು ಪಡಿಸಿ ಮಾನವ ನಿರ್ಮಿತ ಕಾಡುಗಳು ಎಲ್ಲಿದೆ. ಈ ನಿಟ್ಟಿನಲ್ಲಿ ನಾನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳುತ್ತೇನೆ ವನಮಹೋತ್ಸವ ಎಂದರೆ ಕಳೆದ ವರ್ಷ ನೆಟ್ಟ ಗಿಡ ಈ ವರ್ಷ ಎಷ್ಟು ಬೆಳೆದಿದೆ ಎನ್ನುವ ರೀತಿ ಆಚರಣೆ ಆಗಬೇಕು. ನರ್ಸರಿ, ಅರಣ್ಯ ಇಲಾಖೆಯಲ್ಲಿ ಬೆಳೆಸಿರುವ ಗಿಡಗಳನ್ನು ತಂದು ನೆಟ್ಟು ಅವುಗಳ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಅವುಗಳನ್ನು ಕೊಂದು ನೀವು ಅಪರಾಧಿಗಳಾಗುತ್ತೀರಾ. ಇಂತಹ ವನಮಹೋತ್ಸವ ಆಚರಿಸಬಾರದು. ಗಿಡ ನೆಡುವುದು ಮಾತ್ರವಲ್ಲ ಅವುಗಳೊಂದಿಗೆ ಮಾತನಾಡುವ ಮನೋಭಾವ ಬೆಳೆಸಿಕೊಳ್ಳಿ. ನಾವು ಗಿಡಕ್ಕೆ ನೀರೆರೆಯುವುದು, ಅವುಗಳ ಎಲೆಗಳನ್ನು ಸ್ಪರ್ಶಿಸುವುದು ಹೀಗೆ ಅವುಗಳೊಂದಿಗೆ ಸಂವಹನ ಮಾಡಿದಾಗ ಅವುಗಳೂ ಸೊಂಪಾಗಿ ಬೆಳೆಯುತ್ತದೆ.
ಎಲ್ಲರೂ ಹುಟ್ಟು ಹಬ್ಬದಂದು ಪಾರ್ಟಿ ಮಾಡಲು ತುಂಬಾ ಖರ್ಚು ಮಾಡುತ್ತಾರೆ. ಇದರ ಜೊತೆಗೆ ಹುಟ್ಟಿದ ದಿನದಂದು ಒಂದು ಗಿಡ ನೆಡಿ, ನೀವು ಪಾರ್ಟಿ ನೀಡಿದವರು ನಿಮ್ಮೊಂದಿಗೆ ಜೀವನ ಪೂರ್ತಿ ಇರದೇ ಇರಬಹುದು ಆದರೆ ನೀವು ನೆಟ್ಟ ಗಿಡ ಮರವಾಗಿ ನೀವು ಇರುವಷ್ಟು ದಿನ ನಿಮ್ಮೊಂದಿಗೆ ,ನಿಮಗೆ ಸಹಕಾರಿಯಾಗಿ ಇರುತ್ತದೆ. ವರ್ಷವಿಡೀ ವನಮಹೋತ್ಸವ ಮಾಡುವ ಗಿಡಗಳನ್ನು ನೆಡುವ ಜೊತೆಗೆ ಅವುಗಳನ್ನು ಬೆಳೆಸುವ ಮನೋಭಾವವೂ ಬರಬೇಕು.
ಇದು ಪರಿಸರ ಪ್ರೇಮಿ ದಿಶೇಶ್ ಹೊಳ್ಳ ಅವರು ಮನದಾಳದ ಮಾತುಗಳು. ಇವರ ಅನುಭವದ ಮಾತುಗಳು ಕೇಳಿದಷ್ಟು ಮತ್ತಷ್ಟು ತಿಳಿದುಕೊಳ್ಳಬೇಕು ಅನಿಸುತ್ತದೆ. ಇವರು ಪರಿಸರದ ಜೊತೆಗೆ ಬುಡಕಟ್ಟು ಜನರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ ಎನ್ನುವುದಕ್ಕೆ ಫ್ರಾನ್ಸ್ ನ ಡೀಪೀ ನಗರದಲ್ಲಿ 4 ಸಲ ಚಿತ್ರ ಕಲಾ ಪ್ರದರ್ಶನ ಮಾಡಿದ್ದರಲ್ಲಿ ಸೇಲ್ ಆದ ಆರ್ಟ್ಗಳಿಂದ ಬಂದ ಹಣದಲ್ಲಿ ಶೇ. 35 ರಷ್ಟು ಹಣವನ್ನು ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎನ್ನುವುದೇ ಸಾಕ್ಷಿ. ಇವರ ಪರಿಸರ ಸೇವೆ, ಕಲಾ ಸೇವೆ ಹೀಗೆ ಮುಂದು ವರಿಯಲಿ ಇವರ ಪರಿಸರ ಹೋರಾಟಗಳಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂಬುದು ಉಡುಪಿ ಟೈಮ್ಸ್ ನ ಆಶಯ.
ಸಂದರ್ಶನ ಹಾಗೂ ಲೇಖನ: ದಿವ್ಯ ಮಂಚಿ