ಭಾರತದ ಅಮೃತ ಮಹೋತ್ಸವದ ಸುದೀರ್ಘ ಪಯಣದಲ್ಲಿ ಎದುರಿಗಿದೆ ಬೆಟ್ಟದಷ್ಟು ಸವಾಲುಗಳು
ವಿಶೇಷ ಲೇಖನ : ದಿವ್ಯ ಮಂಚಿ
ಸಮಾಜದ ಯಾವುದೇ ನಿರ್ಬಂಧಗಳಿಗೆ ಒಳಗಾಗದೇ ಇದ್ದಾಗ, ಅವಲಂಬಣೆ ಮತ್ತು ಇತರರ ಹಸ್ತಕ್ಷೇಪದಿಂದ ಮುಕ್ತವಾದಾಗ ಅದು ಸ್ವಾತಂತ್ರ್ಯ ಎನಿಸಿಕೊಳ್ಳುತ್ತದೆ. ಅದೇ ರೀತಿ ಆಂಗ್ಲರ ಆಳ್ವಿಕೆಯ ಕಪಿಮುಷ್ಠಿಯಿಂದ ಭಾರತ ಮುಕ್ತವಾದ ದಿನವೇ ಸ್ವಾತಂತ್ರ್ಯ ಪಡೆದ ದಿನ. ಈ ದಿನ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ, ದೇಶ ಪ್ರೇಮಿಗಳ ತ್ಯಾಗ ಬಲಿದಾನಕ್ಕೆ ತಕ್ಕ ಪ್ರತಿಫಲ ಸಿಕ್ಕಂತಹ ದಿನ. ಅದುವೆ 1947ರ ಆ.15 ರಂದು ಬ್ರಿಟೀಷರ ಆಳ್ವಿಕೆಯಿಂದ ದೇಶ ಬಿಡುಗಡೆಗೊಂಡು ಬಂಧಮುಕ್ತವಾದ ದಿನವೇ ಸ್ವಾತಂತ್ರ್ಯ ದಿನಾಚರಣೆ.
ಸದ್ಯ ದೇಶ 75 ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿದೆ. 1947 ರಿಂದ 2021 ರ ವರೆಗೆ ದೇಶ ನಡೆದುಬಂದ ಹಾದಿ ಬಲು ರೋಚಕ. ಅದೆಷ್ಟೋ ಜಟಿಲ ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ದೇಶದ ಸಾಧನೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತದ್ದು.
ಆರ್ಥಿಕತೆ, ಶಿಕ್ಷಣ, ರಕ್ಷಣೆ, ಆರೋಗ್ಯ, ಮಹಿಳಾ ಸಬಲೀಕರಣ ಹೀಗೆ ಅನೇಕ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ಕೋವಿಡ್ ಪರಿಸ್ಥಿತಿಯಿಂದ ದೇಶದ ಅರ್ಥ ವ್ಯವಸ್ಥೆ ಜೊತೆಗೆ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದ್ದರೂ ಸಾದನೆಯ ಹಾದಿಯಲ್ಲಿ ಭಾರತ ಎಂದೂ ಹಿಂದೆ ಸರಿದಿಲ್ಲ. ರಕ್ಷಣಾ ಕ್ಷೇತ್ರವನ್ನು ಬಲ ಪಡಿಸುವ ನಿಟ್ಟಿನಲ್ಲಿ ದೇಶ ಸದಾ ಮುಂಚೂಣಿಯಲ್ಲಿದೆ.
ಇವತ್ತು ನಾವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಈ ಶುಭ ಸಮಾರಂಭದಲ್ಲಿ ದೇಶದ ಅಭಿವೃದ್ಧಿ, ಸಾಧನೆಯ ನಡುವೆ ಬೆಲ್ಲದ ಸವಿಗಿಂತ ಬೇವಿನ ಕಹಿಯೇ ತುಂಬಾ ಕಾಡುತ್ತಿದೆ. ಒಂದು ಹನಿ ಬಣ್ಣ ಇಡೀ ಬಿಳಿಯ ಹಾಲಿನ ಸ್ವರೂಪವನ್ನೇ ಬದಲಾಯಿಸುವಂತೆ ಕಳೆದ ಒಂದುವರೆ ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ ಎಂಬ ಪೀಡೆ ಇಡೀ ಪ್ರಪಂಚದ ದೃಷ್ಟಿಕೋನ ಆಲೋಚನೆಯನ್ನೇ ಬುಡಮೇಲು ಮಾಡಿದೆ. ಎಂತೆಂಥಹ ಬಲಿಷ್ಟ ರಾಷ್ಟ್ರಗಳೇ ಕೋವಿಡ್ ಪ್ರಭಾವಕ್ಕೆ ನಲುಗಿ ಹೋಗಿದೆ. ಇದರಲ್ಲಿ ನಮ್ಮ ಭಾರತವೂ ಹೊರತಾಗಿಲ್ಲ.
ದೇಶ ಕೋವಿಡ್ ಹಾವಳಿಯಿಂದ ಇನ್ನಿಲ್ಲದಂತೆ ತತ್ತರಿಸಿ ಹೋಗಿದೆ ಎಂದರೆ ತಪ್ಪಾಗಲ್ಲ. ಕೋವಿಡ್ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಗೊಳಿಸಲು ಸರಕಾರ ಶತಾಯಗತಾಯ ಪ್ರಯತ್ನ ಮಾಡುತ್ತೆಯಾದರೂ ಕೋವಿಡ್ ಪ್ರಕರಣಗಳು ರಕ್ತಬೀಜಾಸುರನಂತೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಲೇ ಇದೆ.
ಈ ಕೋವಿಡ್ ಸಂಕಷ್ಟದ ಸುಳಿಯಲ್ಲಿ ಒದ್ದಾಡಿದ ಇಡೀ ದೇಶ ಅನುಭವಿಸಿದ ಕಷ್ಟ, ನಷ್ಟಗಳು ಒಂದಾ ಎರಡಾ… ಇತ್ತ ಕೆಲಸ ಕಳೆದುಕೊಂಡ ಜನತೆ. ನೆಲಕಚ್ಚಿದ ಉದ್ಯಮಗಳು, ಆರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಮತ್ತೊಂದೆಡೆ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊದಲೇ ಕೆಲಸವಿಲ್ಲದೆ ಕಂಗಾಲಾಗಿದ್ದ ಜನರಿಗೆ ಬೆಲೆ ಏರಿಕೆಯ ತಾಪ ನಾಳೆಯ ದಿನ ಹೇಗೆ? ಎನ್ನುವುದಕ್ಕಿಂತ ಇಂದಿನ ದಿನ ಕಳೆಯುವುದು ಹೇಗೆ? ಎಂಬ ಚಿಂತೆ ಕಾಡಿದ್ದು ಸುಳ್ಳಲ್ಲ. ಬಡತನದ ಬೇಗೆಯಲ್ಲಿ ಬೆಂದಿದ್ದ ಅದೆಷ್ಟೋ ಮಂದಿ, ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಿಂದ ಬೇಸತ್ತ ಅನೇಕರು ಹಾಗೂ ಹೊಸ ಉದ್ಯಮ, ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸು ಕಂಡಿದ್ದ ಅದೆಷ್ಟೋ ಮಂದಿ ಆರ್ಥಿಕ ನಷ್ಟಕ್ಕೆ ನಲುಗಿ ತಮ್ಮ ಜೀವ ಕಳೆದುಕೊಂಡದ್ದು ದುರಾದೃಷ್ಟಕರ.
ಇನ್ನು ಕೋವಿಡ್ ಮಕ್ಕಳ ಭವಿಸ್ಯದ ಜೊತೆಗೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಇತ್ತ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಅಗತ್ಯವಿರುವ ಸೂಕ್ತ ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದಾರೆ. ಸರಿಯಾದ ಪಾಠವಿಲ್ಲದೆ ಪರೀಕ್ಷೆ ಬರೆಯುವ ಪರಿಸ್ಥಿತಿ ಮಕ್ಕಳ ಮೇಲೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಾಂತಾಗಿದೆ. ಮತ್ತೊಂದೆಡೆ ಮಕ್ಕಳನ್ನು ಶ್ರೇಯಾಂಕದ ಆದಾರದಲ್ಲಿ ತೇರ್ಗಡೆ ಮಾಡಲಾಗುತ್ತಿದೆಯಾದರೂ ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಒಂದು ದೊಡ್ಡ ಯಕ್ಷ ಪ್ರಶ್ನೆ.
ಇನ್ನು ದೇಶದಲ್ಲಿ ಸ್ತ್ರೀಯರು ವಿವಿಧ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ ಎಂಬೂದು ಖುಷಿಯ ವಿಚಾರ ಅದರಲ್ಲೂ ಪುರುಷ ಪ್ರಧಾನ್ಯತೆ ಹೊಂದಿರುವ ಕ್ಷೇತ್ರಗಳಲ್ಲೂ ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ದೇಶದ ಗರಿಮೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಆದರೆ ಎಲ್ಲೋ ಒಂದು ಕಡೆ ಸ್ತ್ರೀಯರ ರಕ್ಷಣೆ ಹಾಗೂ ಸುರಕ್ಷತೆ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದರೆ ಖಂಡಿತಾ ತಪ್ಪಾಗಲಾರದು.
ಪ್ರಸ್ತುತ ಪರಿಸ್ಥಿತಿ ಜೊತೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಇರುವ ನಾವುಗಳು ಸ್ತ್ರೀ ಸುರಕ್ಷತೆ ಬಗ್ಗೆ ಯೋಚಿಸುವಾಗ ಸ್ವಾತಂತ್ರ್ಯ ಎಲ್ಲಿದೆ ಎಂಬ ಆಲೋಚನೆ ಯಾರಿಗಾದರೂ ಬರದೇ ಇರಲಾರದು. ಈ ಬಗ್ಗೆ ಆಲೋಚನೆ ಮಾಡಿದಾಗೆಲ್ಲ. ನಿಜವಾಗಿಯೂ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇ ಎಂಬ ಆಲೋಚನೆ ಕಾಡೋದು ಸಾಮಾನ್ಯ. ಯಾಕೆಂದರೆ ಇಲ್ಲಿ ಸ್ತ್ರೀಯರ ಮಹತ್ತರವಾದ ಸಾಧನೆಯ ಒಂದೆಡೆಯಾದರೆ, ಮತ್ತೊಂದೆಡೆ ಸ್ತ್ರೀಯರು ಮೋಸ, ವಂಚನೆ, ಅತ್ಯಾಚಾರ, ಕೊಲೆ, ವರದಕ್ಷಿಣೆ ಕಿರುಕುಳ, ಅಪಹರಣ ಹೀಗೆ ಮಾನಸಿಕ , ದೈಹಿಕ ಹಿಂಸೆಗಳಿಗೆ ಈಗಲೂ ಒಳಗಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ದುರಂತವೇ. ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಅತ್ಯಾಚಾರ, ವರದಕ್ಷಿಣೆ ಕಿರುಕುಳದ ಸುದ್ದಿಗಳು ಇಲ್ಲದೆ ಪತ್ರಿಕೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದೆ. ಇದೆಲ್ಲದರ ನಡುವೆಯೂ ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವಾದ ಅನೇಕ ಸಂಘ ಸಂಸ್ಥೆಗಳನ್ನು ನೆನೆಯುವುದೂ ನಮ್ಮ ಜವಬ್ದಾರಿ. ದೇಶದಾದ್ಯಂತ ಕೋವಿಡ್ ಸಂಕಷ್ಟ ನೆರೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲಿಕಿದ್ದ ಅನೇಕರ ನೆರವಿಗೆ ಬಂದು ಮಾನವೀಯತೆಯ ಕೆಲಸ ಮಾಡಿದ ಸಂಘ ಸಂಸ್ಥೆಗಳ ಪಾತ್ರವೂ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಮಹತ್ತರವಾದದ್ದು ಎನ್ನುವುದು ಸುಳ್ಳಲ್ಲ.
ಸಮಸ್ಯೆಗಳು ಎಂದಿಗೂ ಶಾಸ್ವತ ಅಲ್ಲ. ಕತ್ತಲು ಕವಿದ ಮುಚ್ಚಿದ ಕೋಣೆಯಲ್ಲಿ ಎಲ್ಲೋ ಒಂದು ಕಿಂಡಿಯಿಂದ ಬೆಳಕಿನ ಕಿರಣ ನುಸುಳಿ ಬರುವಂತೆ ದೇಶವನ್ನು ಆವರಿಸಿರುವ ಕೋವಿಡ್ ಎಂಬ ಕರ್ಮೋಡ ಸರಿದು ಮತ್ತೆ ಉತ್ತಮ ಜೀವನದ ಭರವಸೆಯ ಬೆಳಕಿನ ಹೊಂಗಿರಣ ದೇಶದೆಲ್ಲೆಡೆ ಪಸರಿಸಲಿ. ದೇಶ ಎದುರಿಸುತ್ತಿರುವ ಸಂಕಷ್ಟದ ದಿನಗಳು ದೂರವಾಗಿ ದೇಶ ಮತ್ತೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುವಂತಾಗಲಿ ಎನ್ನುವುದೇ ಉಡುಪಿ ಟೈಮ್ಸ್ ನ ಆಶಯ.