ಬೆಂಗಳೂರು-ಕಾರವಾರ ಬೆಳಗಿನ ರೈಲು ಆ.16 ರಿಂದ ಪುನರಾರಂಭ : ಶೋಭಾ ಕರಂದ್ಲಾಜೆ
ಬೆಂಗಳೂರು ಆ.13( ಉಡುಪಿ ಟೈಮ್ಸ್ ವರದಿ): ಕೋವಿಡ್ ಕಾರಣದಿಂದ ಭಾಗಶಃ ಸಂಚಾರವನ್ನು ಮೊಟಕುಗೊಳಿಸಿದ್ದ ಬೆಂಗಳೂರು-ಕಾರವಾರ (YPR-KAWR-06211/12) ಬೆಳಗಿನ ರೈಲು ಆ.16 ರಿಂದ ಮತ್ತೆ ಸಂಚಾರ ಆರಂಭಿಸಲಿದೆ.
ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ. ಅದರಂತೆ ಈ ರೈಲು ಆ.16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನರಾರಂಭಗೊಳ್ಳಲಿದೆ.
ಕೋವಿಡ್ ಕಾರಣದಿಂದ ಬೆಂಗಳೂರು-ಕಾರವಾರ (YPR-KAWR-06211/12) ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು. ಈ ಸಂಬಂಧ ಆಯಾ ಭಾಗದ ಪ್ರಯಾಣಿಕರು, ಸಾರ್ವಜನಿಕರು ಈ ರೈಲನ್ನು ಪುನರಾರಂಭಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಒತ್ತಾಯಿಸಿದ್ದರು.
ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ-ಬೆಂಗಳೂರು ಹಗಲು ರೈಲನ್ನು ಪುರಾರಾರಂಭಿಸುವಂತೆ ಮನವಿ ಮಾಡಿದರು. ಸಚಿವರ ಮನವಿಯನ್ನು ಪುರಸ್ಕರಿಸಿದ ರೈಲ್ವೆ ಇಲಾಖೆ ಕಾರವಾರ-ಬೆಂಗಳೂರು ಬೆಳಗಿನ ರೈಲನ್ನು ಪುನರಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿತ್ತು.
ಇದೀಗ ನೈರುತ್ಯ ರೈಲ್ವೆ ಬೆಂಗಳೂರು-ಕಾರವಾರ ರೈಲನ್ನು ಆ. 16 ರಿಂದ ಪುನರಾರಂಭಿಸುತ್ತಿದೆ ಹಾಗೂ ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಜೊತೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಇನ್ನು ಮುಂದೆ ಪ್ರಕೃತಿ ರಮಣೀಯ ಪಶ್ಚಿಮ ಘಟ್ಟಗಳ ಹಾಗೂ ನಮ್ಮ ಕರಾವಳಿಯ ಅರಬೀ ಸಮುದ್ರದ ವಿಹಂಗಮ ನೋಟಗಳನ್ನು ರೈಲ್ವೆ ಪ್ರಯಾಣದ ನಡುವೆಯೇ ಕಣ್ಣುಂಬಿಕೊಳ್ಳಬಹುದು ಎಂದೂ ತಿಳಿಸಿದ್ದಾರೆ.