ಕಾರ್ಯಕರ್ತನಿಗೆ ಡಿಕೆಶಿ ಹಲ್ಲೆ: ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರಿಸಬೇಡಿ ಬಿಜೆಪಿ

ಬೆಂಗಳೂರು: ಹೆಗಲ ಮೇಲೆ ಕೈ ಇರಿಸಲು ಬಂದ ಪಕ್ಷದ ಕಾರ್ಯಕರ್ತರೊಬ್ಬರ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಲೆಗೆ ಹೊಡೆದಿರುವ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಬಿಜೆಪಿ ರಾಜ್ಯ ಘಟಕ ತೀವ್ರ ಟೀಕಾಪ್ರಹಾರ ನಡೆಸಿದೆ , ‘ರೌಡಿ ಕೊತ್ವಾಲನೊಂದಿಗೆ ಇದ್ದ ಗತಕಾಲದ ನೆನಪು ಕಾಡಿತೆ’ ಎಂದು ಪ್ರಶ್ನಿಸಿದೆ.

‘ನೀವು ಕೊತ್ವಾಲನ ಶಿಷ್ಯ ಆಗಿರಬಹುದು. ಜೈಲಿಗೂ ಹೋಗಿ ಬಂದಿರಬಹುದು. ಆದರೆ, ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರಿಸಬೇಡಿ. ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ. ಕೆಪಿಸಿಸಿ ಅಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ’ ಎಂದು ಬಿಜೆಪಿ ಹೇಳಿದೆ.

ಶಿವಕುಮಾರ್‌ ಅವರ ದರ್ಪದ ವರ್ತನೆ ಹಲವಾರು ಬಾರಿ ಬಹಿರಂಗವಾಗಿದೆ. ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆ ಹೇಳಿಕೊಂಡ ವ್ಯಕ್ತಿಯ ಬಂಧನಕ್ಕೆ ಪೊಲೀಸರನ್ನು ಕಳಿಸಿದ್ದರು. ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವಿದ್ಯಾರ್ಥಿ ಮೇಲೂ ಹಲ್ಲೆ ನಡೆಸಿದ್ದರು. ತಾವು ಮಾತನಾಡುವಾಗ ಮಾತನಾಡಿದರೆ ಒದ್ದು ಹೊರ ಹಾಕುವುದಾಗಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದರು ಎಂದು ಟ್ವೀಟ್‌ನಲ್ಲಿ ದೂರಲಾಗಿದೆ.

‘ಸಾರ್ವಜನಿಕವಾಗಿ ಹೊಡೆಯುವುದು, ಒದೆಯುವುದು, ಮೊಬೈಲ್‌ ಕಿತ್ತೆಸೆಯುವುದು ರೌಡಿ ಲಕ್ಷಣ ಅಲ್ಲವೆ? ನೀವು ಹೊಡಿ, ಬಡಿ ರಾಜಕಾರಣದ ರಾಯಭಾರಿ ಆಗಲು ಹೊರಟಿದ್ದೀರಾ? ಭೂಗತ ಜಗತ್ತಿನ ರೀತಿಯ ವರ್ತನೆಗಳೇ ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ’ ಎಂದು ಶಿವಕುಮಾರ್‌ ಅವರನ್ನು ಬಿಜೆಪಿ ಒತ್ತಾಯಿಸಿದೆ.

Leave a Reply

Your email address will not be published. Required fields are marked *

error: Content is protected !!