ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್: ತೆಂಡೂಲ್ಕರ್ ಪ್ರಶಂಸೆ
ನಾರ್ಥಾಂಪ್ಟನ್ ಜು.10 : ಸಾಮಾಜಿಕ ಜಾಲತಾಣದಲ್ಲಿ ಈಗ ಭಾರತದ ಬ್ಯಾಟಿಂಗ್ ಆಲ್ ರೌಂಡರ್ ಹರ್ಲೀನ್ ಡಿಯೋಲ್ ಅವರ ಅದ್ಭುತ ಕ್ಯಾಚ್ ನದ್ದೆ ಸುದ್ದಿಯಾಗಿದೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲನೇ ಟಿ20 ಐ ಪಂದ್ಯದಲ್ಲಿ ಡಿಯೋಲ್ ಈ ಕ್ಯಾಚ್ ಪಡೆದಿದ್ದರು.
ಇದೀಗ ಇವರ ಕ್ಯಾಚ್ ನ ವಿಡಿಯೋ ವೈರಲ್ ಆಗಿದ್ದು, ಡಿಯೋಲ್ ಅವರ ಕ್ಯಾಚ್ ಗೆ ಭಾರತದ ಕ್ರಿಕೆಟ್ ಲೋಕದ ದಂತ ಕತೆ ಸಚಿನ್ ತೆಂಡೂಲ್ಕರ್ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಿಯೋಲ್ ಕ್ಯಾಚ್ನ ವಿಡಿಯೋವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿರುವ ,ಸಚಿನ್ ತೆಂಡೂಲ್ಕರ್ ಅವರು, ‘ಅದು ಅದ್ಭುತ ಕ್ಯಾಚ್ ಹರ್ಲೀನ್ ಡಿಯೋಲ್, ಖಂಡಿತವಾಗಿಯೂ ಇದು ನನ್ನ ಪಾಲಿಗೆ ವರ್ಷದ ಕ್ಯಾಚ್ ಆಗಿದೆ’ ಎಂದು ಬರೆದುಕೊಂಡಿದ್ದಾರೆ.
ನಾರ್ಥಾಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಟಿ20 ಪಂದ್ಯದಲ್ಲಿ ಹರ್ಲೀನ್ ಡಿಯೋಲ್ 18.5ನೇ ಓವರ್ನಲ್ಲಿ ಶಿಖಾ ಪಾಂಡೆ ಎಸೆತಕ್ಕೆ ಆಮಿ ಎಲ್ಲೆನ್ ಜೋನ್ಸ್ ಅವರ ಕ್ಯಾಚ್ ಪಡೆದು ಜೋನ್ಸ್ ಅವರನ್ನು 43 ಓವರ್ಗೆ ಪೆವಿಲಿಯನ್ ಕಡೆಗೆ ನಡೆಯುವಂತೆ ಮಾಡಿದರು.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 20 ಓವರ್ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತ್ತು. ಭಾರತದ ಇನ್ನಿಂಗ್ಸ್ ವೇಳೆ ಮಳೆ ಬಂದ ಕಾರಣ ಭಾರತಕ್ಕೆ 8.4 ಓವರ್ಗೆ 73 ರನ್ ಗುರಿ ನೀಡಲಾಗಿತ್ತು. ಆದರೆ ಭಾರತ 8.4 ಓವರ್ಗೆ 3 ವಿಕೆಟ್ ಕಳೆದು 54 ರನ್ ಬಾರಿಸಿ 18 ರನ್ನಿಂದ ಪಂದ್ಯ ಸೋತಿದೆ.