ಕೇಂದ್ರ ಸಂಪುಟಕ್ಕೆ ಬಡ್ತಿ: ಸಚಿವೆ ಟ್ವಿಟ್ಟರ್ ಕ್ಲೀನ್
ಬೆಂಗಳೂರು ಜು.8: ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಅತ್ತ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ತಮ್ಮ ಟ್ವೀಟ್ ಖಾತೆಯಲ್ಲಿನ ಹಳೇ ಪೋಸ್ಟ್ ಗಳನ್ನು ಅಳಿಸಿ ಹಾಕಿದ್ದಾರೆ.
ನಿರಂತರ 11 ವರ್ಷಗಳಿಂದ ಟ್ವಿಟರ್ನಲ್ಲಿ ಸಕ್ರಿಯರಾಗಿರುವ ಅವರ ಖಾತೆಯಲ್ಲಿ ಈಗ ಎರಡೇ ಟ್ವೀಟ್ಗಳು ಗೋಚರಿಸುತ್ತಿವೆ. ಈವರೆಗೆ ಇದ್ದಂತಹ ಅವರಿವರ ಬಗೆಗಿನ ವಿರೋಧಗಳು, ಸರ್ಕಾರದ ಸಮರ್ಥನೆಗಳು, ಘಟನೆಗಳ ವಿಶ್ಲೇಷಣೆಗಳು, ಕೋಮು–ಸೌಹಾರ್ದದ ವಿವರಗಳು ಹೀಗೆ ಯಾವೊಂದರ ಬಗೆಯ ಹಳೆಯ ಟ್ವೀಟ್ಗಳು ಈಗ ಅವರ ಖಾತೆಯಲ್ಲಿ ಕಾಣುತ್ತಿಲ್ಲ.
ಸಾಮಾಜಿಕ ಜಾಲತಾಣಗಳು ಪರಿಣಾಮ ಕಾರಿಯಾಗಿ ಪ್ರಭಾವ ಬೀರುತ್ತಿರುವ ಈ ಸಂದರ್ಭದಲ್ಲಿ ಹಿಂದು ಮುಂದು ಯೋಚಿಸದೇ ಮನಬಂದಂತೆ ಬರಹಗಳನ್ನು ಪೋಸ್ಟ್ ಮಾಡಿ ರಾಜಕೀಯ ನಾಯಕರು ಪೇಚಿಗೆ ಸಿಲುಕಿರುವ ಘಟನೆಗಳು ನಡೆದಿರುವುದು ಹೊಸದೇನಲ್ಲ. ಹೀಗಿರುವಾಗ ಸಮಾಜಿಕ ಮಾಧ್ಯಮಗಳ ಚೌಕಟ್ಟಿನಲ್ಲಿ ಇಂಥ ಯಾವುದೇ ಗೋಜುಗಳಿಲ್ಲದೆ, ಎಲ್ಲವನ್ನೂ ಹೊಸದಾಗಿ ಆರಂಭಿಸುವ ಯೋಚನೆಯನ್ನು ಅವರು ತೆಗೆದುಕೊಂಡಂತಿದೆ.
ಟ್ವಿಟರ್ನಲ್ಲಿ ಶೋಭಾ ಅವರ ಖಾತೆಯನ್ನು ಪ್ರಸ್ತುತ 2.79 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಅವರ ಟ್ವಿಟರ್ ಖಾತೆಯಲ್ಲಿ ಹಳೆಯ ಟ್ವೀಟ್ಗಳು ಅಳಿಸುತ್ತಿದ್ದಂತೆ, ಹಲವು ಟ್ವೀಟಿಗರು ಟೀಕೆ ಮಾಡಲಾರಂಭಿಸಿದ್ದಾರೆ.