ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ ಚಿತ್ರದ ನಟಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ

ಬೆಂಗಳೂರು ಜು.7: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ ಚಿತ್ರದ ನಟನೆಗಾಗಿ ನಟಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. 

ಅಮೃತಮತಿ ಚಿತ್ರಕ್ಕೆ ಈ ಮೊದಲು ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಗಳಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು. ಇಲ್ಲಿವರಗೆ ಈ ಚಿತ್ರವು ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿರೋದು ವಿಶೇಷವಾಗಿದೆ. 

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಇದು ಕನ್ನಡದ ಪ್ರಾಚೀನ ಕೃತಿಯಾದ ಯಶೋಧರ ಚರಿತೆಯ ಪ್ರಸಂಗವನ್ನು ಆಧರಿಸಿದ ಕತೆಯಾಗಿದೆ.ಈ ಚಿತ್ರಕ್ಕೆ ಬರಗೂರು ಅವರು ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಸಂಕಲನಕಾರರಾಗಿ ಸುರೇಶ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಅವರೊಂದಿಗೆ ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾರಾವ್, ವತ್ಸಲಾಮೋಹನ್, ಅಂಬರೀಷ್ ಸಾರಂಗಿ ಮೊದಲಾದವರು ನಟಿಸಿದ್ದಾರೆ. ಶೀಘ್ರವೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!