ಕೇಂದ್ರ ಸಚಿವ ಸಂಪುಟದಲ್ಲಿ ಪಶುಪತಿ ಕುಮಾರ್ ಸೇರ್ಪಡೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಚಿರಾಗ್ ಪಾಸ್ವಾನ್
ನವದೆಹಲಿ, ಜುಲೈ 8 : ಕೇಂದ್ರ ಸಚಿವ ಸಂಪುಟದಲ್ಲಿ ಬಿಹಾರದ ಹಾಜಿಪುರ್ ಸಂಸದ ಪಶುಪತಿ ಕುಮಾರ್ ಪಾರಸ್ ರನ್ನು ಸೇರ್ಪಡೆ ಮಾಡಿಕೊಂಡಿರುವುದನ್ನು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ, ಲೋಕಸಭೆಯ ಸ್ಪೀಕರ್ ತೀರ್ಪಿನ ವಿರುದ್ಧ ಲೋಕ ಜನಶಕ್ತಿ ಪಕ್ಷವು ಇಂದು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ, ಇದರಲ್ಲಿ ಉಚ್ಚಾಟಿತ ಸಂಸದ ಪಶುಪತಿ ಪರಸ್ ಜಿ ಅನ್ನು ಸದನದಲ್ಲಿ ಎಲ್ ಜೆಪಿ ನಾಯಕರಾಗಿ ಪರಿಗಣಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದಿದ್ದಕ್ಕಾಗಿ ಪಶುಪತಿಯನ್ನು ಈಗಾಗಲೇ ಲೋಕ ಜನಶಕ್ತಿ ಪಕ್ಷದಿಂದ ಹೊರಹಾಕಲಾಗಿದೆ. ಈಗ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಲು ಪಕ್ಷ ಬಲವಾಗಿ ಆಕ್ಷೇಪಿಸಿದೆ,” ಎಂದು ಬರೆದುಕೊಂಡಿದ್ದಾರೆ.
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷದಿಂದ ಆರು ಸಂಸದರು ಆಯ್ಕೆ ಆಗಿದ್ದರು. ಲೋಕ ಜನಶಕ್ತಿ ಪಕ್ಷದ ಆರು ಸಂಸದರ ಪೈಕಿ ಐದು ಸಂಸದರು ಚಿರಾಗ್ ಪಾಸ್ವಾನ್ ಚಿಕ್ಕಪ್ಪ( ರಾಮ್ ವಿಲಾಸ್ ಪಾಸ್ವಾನ್ ಸಹೋದರ) ಪಶುಪತಿ ಕುಮಾರ್ ಪಾರಸ್ ಅನ್ನು ಬೆಂಬಲಿಸಿದ್ದರು. ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದಿದ್ದ ಐದು ಸಂಸದರನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ಪಕ್ಷದಿಂದಲೇ ಉಚ್ಛಾಟಿಸಲಾಗಿತ್ತು. ಈ ಪೈಕಿ ಪಶುಪತಿ ಕುಮಾರ್ ಪಾರಸ್, ಬೀನಾ ದೇವಿ, ಚೌಧರಿ ಮೆಹಬೂಬ್ ಅಲಿ ಕೈಸೆರ್, ಚಂದನ್ ಸಿಂಗ್, ಪ್ರಿನ್ಸ್ ರಾಜ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಉಚ್ಛಾಟಿಸಲಾಗಿತ್ತು.