ಸಾಸ್ತಾನ ಚರ್ಚಿನ ಧರ್ಮಗುರು ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಅವರಿಗೆ ಬೀಳ್ಕೊಡುಗೆ

ಕೋಟ(ಉಡುಪಿ ಟೈಮ್ಸ್ ವರದಿ): ಸಾಸ್ತಾನ ಸಂತ ಅಂತೋನಿ ಧರ್ಮಕೇಂದ್ರದಲ್ಲಿ ಆರು ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಹಿರ್ಗಾನ ಧರ್ಮಕೇಂದ್ರಕ್ಕೆ ವರ್ಗಾವಣೆಗೆಗೊಂಡ ವಂ|ಜಾನ್ ವಾಲ್ಟರ್ ಮೆಂಡೋನ್ಸಾ ಅವರಿಗೆ ಚರ್ಚಿನ ಆಡಳಿತ ಮಂಡಳಿಯ ಪರವಾಗಿ ಸೋಮವಾರ ಬೀಳ್ಕೊಡುಗೆ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಈ ಧರ್ಮಕೇಂದ್ರಕ್ಕೆ ಬರುವಾಗ ಯಾವುದೇ ದೊಡ್ಡ ಯೋಜನೆಗಳ ಕನಸನ್ನು ಕಟ್ಟಿಕೊಂಡು ಬಂದಿರಲಿಲ್ಲ. ನನ್ನ ಉದ್ದೇಶ ಈ ಧರ್ಮಕೇಂದ್ರದ ಜನರನ್ನು ಆಧ್ಯಾತ್ಮಿಕವಾಗಿ ಅಭಿವೃದ್ಧಿಗೊಳಿಸುವುದಾಗಿತ್ತು ಇಂದು ನಾನು ನನ್ನ ಉದ್ದೇಶದಲ್ಲಿ ಸಫಲನಾಗಿದ್ದೇನೆ ಎಂಬ ತೃಪ್ತಿ ಇದೆ. ಇಲ್ಲಿನ ಭಕ್ತವೃಂದ ಆಧ್ಯಾತ್ಮಿಕವಾಗಿ ಸದೃಢರಾಗಿದ್ದು ಸಾಮಾಜಿಕ ಚಟುವಟಿಕೆಗಳಲ್ಲೂ ಕೂಡ ತಮ್ಮ ಸಹಕಾರವನ್ನು ನೀಡಿದ್ದಾರೆ, ಕಳೆದ 6 ವರ್ಷಗಳಲ್ಲಿ ಚರ್ಚಿನ ಸರ್ವತೋಮುಕ ಅಭಿವೃದ್ದಿಗೆ ಜನರ ಸಹಕಾರದಿಂದ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂಬ ಸಮಾಧಾನ ಇದೆ ಎಂದರು.

ಚರ್ಚಿನ ಪಾಲನಾ ಸಮಿತಿಯ ವತಿಯಿಂದ ನಿರ್ಗಮನ ಧರ್ಮಗುರುಗಳಿಗೆ ಸನ್ಮಾನ ಪತ್ರವನ್ನು ವಾಚಿಸಿ ಫಲಪುಷ್ಪ ಹಾಗೂ ಶಾಲು ಹೊದಿಸಿ ಗೌರವ ಕಾಣಿಕೆಯನ್ನು ನೀಡಿ ಅಭಿನಂಧಿಸಲಾಯಿತು. ಪಾಲನ ಸಮಿತಿ ಹಾಗೂ ಚರ್ಚಿನ ಪರವಾಗಿ ಮೈಕಲ್ ಲೂವಿಸ್ ಮತ್ತು ಜಸಿಂತಾ ಪಿಂಟೊ ಧರ್ಮಗುರುಗಳ ಸೇವೆಯ ಪರಿಚಯ ಮಾಡಿ ಅಭಿನಂಧಿಸಿದರು.
ಪಾಲನಾ ಸಮಿತಿಯ ಕಾರ್ಯದರ್ಶಿ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು, ಪಾಲನಾ ಸಮಿತಿಯ ಐವನ್ ಡಿ.ಆಲ್ಮೇಡಾ ಸ್ವಾಗತಿಸಿ, ಆರ್ಥಿಕ ಸಮಿತಿಯ ಡೆರಿಕ್ ಡಿಸೋಜಾ ವಂದಿಸಿದರು. 14 ಆಯೋಗಗಳ ಸದಸ್ಯರಾದ ಜಾನೆಟ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಾಳೆಗಳ ಗುರಿಕಾರರು ಉಪಸ್ಥೀತರಿದ್ದರು
ಸಾಸ್ತಾನ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದ ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಅವರನ್ನು ಕಾರ್ಕಳ ತಾಲೂಕಿನ ಹಿರ್ಗಾನ ಮರಿಯಾ ಗೊರೆಟ್ಟಿ ಚರ್ಚಿನ ಧರ್ಮಗುರುಗಳಾಗಿ ವರ್ಗಾವಣೆಗೊಂಡಿದ್ದು ಅಜೆಕಾರು ಚರ್ಚಿನ ಧರ್ಮಗುರುಗಳಾದ ವಂ|ಸುನೀಲ್ ಡಿಸಿಲ್ವಾ ಅವರನ್ನು ಸಾಸ್ತಾನ ಚರ್ಚಿನ ನೂತನ ಧರ್ಮಗುರುಗಳಾಗಿ ನೇಮಿಸಿ ಉಡುಪಿ ಧರ್ಮಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!