“ಸುಧರ್ಮಾ” ಪತ್ರಿಕೆ ಸಂಪಾದಕ ಸಂಪತ್ ಕುಮಾರ್ ನಿಧನಕ್ಕೆ ಪ್ರಧಾನಿ ಕಡೆಯಿಂದ ಸಂಸ್ಕೃತದಲ್ಲಿ ಶೋಕ ಸಂದೇಶ
ನವದೆಹಲಿ, ಜುಲೈ 03 : ವಿಶ್ವದ ಏಕೈಕ ಸಂಸ್ಕೃತ ದೈನಿಕ ಎಂಬ ಹೆಗ್ಗಳಿಕೆ ಪಡೆದಿರುವ “ಸುಧರ್ಮಾ” ಪತ್ರಿಕೆ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂಸ್ಕೃತ ಭಾಷೆಯಲ್ಲಿ ಶೋಕ ಸಂದೇಶ ಕಳುಹಿಸಿದ್ದಾರೆ. ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ ಅವರು ಜೂ.30 ರಂದು ವಿಧಿವಶರಾಗಿದ್ದರು. ಇವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಸಂಸ್ಕೃತ ಸಂದೇಶದಲ್ಲಿ ಶ್ರೀಮತಿ ಜಯಲಕ್ಷ್ಮಿ ಮಹೋದಯೇ ಎಂದು ಪತ್ರ ಆರಂಭಿಸಿದ್ದಾರೆ.
ಸ್ನೇಹಶೀಲ ವ್ಯಕ್ತಿತ್ವದ ಸಂಪತ್ ಕುಮಾರ್ ಅವರು ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸಂಸ್ಕೃತ ಎಲ್ಲರಿಗೂ ತಲುಪುವಂತಾಗಬೇಕೆಂಬ ಉದ್ದೇಶದಿಂದ ಅವರು ಪಟ್ಟ ಶ್ರಮ ಎಲ್ಲರಿಗೂ ಪ್ರೇರಣೆಯಾಗಬೇಕು.
ಸಂಪತ್ ಕುಮಾರ್ ಅವರ ನಿಧನದ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಸರಳ, ಸ್ನೇಹಶೀಲ ವ್ಯಕ್ತಿತ್ವದ ಶ್ರೀಮಂತ ಹೃದಯ ಅವರದ್ದು. ಸಂಸ್ಕೃತ ಸುದ್ದಿಪತ್ರಿಕೆ “ಸುಧರ್ಮಾ”ಗಾಗಿ ಅವರು ಶ್ರಮಿಸಿದರು. ಸಂಸ್ಕೃತ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿಗೆ ಇದು ಸಾಕ್ಷಿ ಎಂದಿದ್ದಾರೆ. ಹೊಸ ತಲೆಮಾರಿನಲ್ಲಿ ಸಂಸ್ಕೃತ ಪ್ರೀತಿ ಬೆಳೆಯಬೇಕು ಎಂದು ಅವರು ಶ್ರಮಿಸಿದರು. ಅವರ ಈ ಮರಣ ಸಂಸ್ಕೃತ ಜಗತ್ತಿಗೆ ಆದ ಬಹು ದೊಡ್ಡ ನಷ್ಟ .
“ಸಂಪತ್ ಕುಮಾರ್ ಅವರು ನಮ್ಮ ಜೊತೆ ಇಲ್ಲ. ಆದರೆ ಅವರಿಂದ ನಮಗೆಲ್ಲಾ ದೊರೆತಿರುವ ಸಂಸ್ಕಾರ ಹಾಗೂ ಜೀವನ ಮೌಲ್ಯಗಳು ಎಲ್ಲರೊಂದಿಗೆ ಇರುತ್ತವೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಆಪ್ತರಿಗೆ ಈ ದುಃಖ ಸಹಿಸುವ ಶಕ್ತಿ ಬರಲಿ” ಎಂದು ಬರೆದಿದ್ದಾರೆ. ಮೈಸೂರಿನಲ್ಲಿ ಅವರು ನೆಲೆಸಿದ್ದ ಇವರು, ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಪತ್ರಿಕೆ ಮುನ್ನಡೆಸುತ್ತಿದ್ದರು, 2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದರು. ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದ ಇವರ ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು. ಜೂನ್ 30ರ ಮಧ್ಯಾಹ್ನ ಸಂಸ್ಕೃತ ಪತ್ರಿಕೆಯ ಕೆಲಸದಲ್ಲಿರುವಾಗಲೇ ತೀವ್ರ ಹೃದಯಾಘಾತದಿಂದ ಸಂಪತ್ ಕುಮಾರ್ ಸಾವನ್ನಪ್ಪಿದ್ದರು.