ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ? :ಸಿದ್ದು ಟಾಂಗ್, ಮುಗಿಯದ ಮಾಜಿ ಸಿ ಎಂ ವಾಕ್ ಸಮರ
ದಾವಣಗೆರೆ ಜು.2: ಮಾಜಿ ಸಿಎಂ ಗಳಾದ ಎಚ್ ಡಿ ಕುಮಾರ ಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ವಾಕ್ ಸಮರ ಮುಂದುವರೆದಿದೆ.
ಇದೀಗ ಕುಮಾರ ಸ್ವಾಮಿ ವಿರುದ್ದ ಗುಡುಗಿರುವ ಸಿದ್ದರಾಮಯ್ಯ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ. ಅವ್ರೇನೂ ನಮ್ಮ ಪಕ್ಷದವ್ರಾ. ಅವ್ರಿಗೂ ನಮಗೂ ಏನ್ ಸಂಬಂಧ. ಬೇಕು ಅಂತಾನೇ ಸುಳ್ಳು ಹೇಳ್ತಾರೆ. ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲಿ ಹೊಡೆದಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ತಮ್ಮ ವಾಗ್ದಾಳಿ ಮುಂದುವರೆಸಿರುವ ಅವರು, ಯಾವ ಪಾಪದ ಕೊಡ ತುಂಬಿದೆಯಂತೆ. ಪದೇ ಪದೇ ಉತ್ತರ ಕೊಡಲು ಆಗದು. ಬೇಕು ಬೇಕು ಅಂತಾನೇ ಸುಳ್ಳನ್ನೇ ಹೇಳುತ್ತಿದ್ದಾರೆ. ಶಾಸಕರನ್ನು ನಾನು ಕಳುಹಿಸಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಎಲ್ಲವನ್ನೂ ಸುಮಾರು ಬಾರಿ ಹೇಳಿ ಆಗಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಲ್ಲಿ ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು, ಮುಂದಿನ ಮುಖ್ಯಮಂತ್ರಿ ನಾನಾಗಬೇಕು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ. ಈಗಲೇ ನಾವು ಏನು ಹೇಳಲು ಆಗದು. ಚುನಾವಣೆ ನಡೆಯಬೇಕು. ಶಾಸಕರು ಆಯ್ಕೆಯಾಗಿ ಬಹುಮತ ಬರಬೇಕು. ಬಳಿಕ ಶಾಸಕಾಂಗ ಸಭೆಯಾಗಬೇಕು. ಆಗ ಎಲ್ಲದೂ ನಿರ್ಧಾರ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಯಾವುದೇ ಜಗಳ ಇಲ್ಲ. ಗುಂಪುಗಾರಿಕೆ ಇಲ್ಲ. ಹೊಡೆದಾಟವೂ ಇಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು.