ಶಾಲಾ ಶುಲ್ಕ ಬಗ್ಗೆ ಪ್ರಶ್ನಿಸಿದ ಪೋಷಕರಿಗೆ ಹೋಗಿ ಸಾಯಿರಿ ಎಂದ ಸಚಿವ
ಭೋಪಾಲ್, ಜು.1: ಖಾಸಗಿ ಶಾಲೆಗಳು ಪೋಷಕರಿಗೆ ಹೆಚ್ಚು ಶುಲ್ಕ ಕಟ್ಟಲು ಒತ್ತಾಯಿಸುತ್ತಿವೆ ಎಂದು ದೂರಲು ಬಂದ ಪೋಷಕರಿಗೆ, ಸಚಿವರೊಬ್ಬರು “ಹೋಗಿ ಸಾಯಿರಿ” ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ವ್ಯಾಪಕ ಆಕ್ತೋಶಕ್ಕೆ ಕಾರಣವಾಗಿದೆ. ಈ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದವು. ಇದನ್ನು ವಿರೋಧಿಸಿ ಹಲವು ಮಂದಿ ಪೋಷಕರು ಭೋಪಾಲ್ನಲ್ಲಿ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ಅವರು ದೂರು ನೀಡಲು ಅವರ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಪೋಷಕರು ಸಚಿವರ ಬಳಿ, ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್ ಹೆಚ್ಚು ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶವನ್ನೂ ಮೀರಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ನಾವು ಮುಂದೆ ಏನು ಮಾಡಬೇಕು? ಶಾಲೆಗಳು ಹೀಗೆ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ನಾವು ಬದುಕಬೇಕಾ, ಸಾಯಬೇಕಾ? ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಂದ ಕೋಪಗೊಂಡ ಸಚಿವ “ಹೋಗಿ ಸಾಯಿರಿ, ಏನಾದರೂ ಮಾಡಿಕೊಳ್ಳಿ” ಎಂದಿದ್ದಾರೆ.
ಇದೀಗ ಶಾಸಕರ ಈ ವರ್ತನೆಯ ವಿಡಿಯೋ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಸಚಿವರ ವರ್ತನೆಯಿಂದ ಆಕ್ರೋಶಗೊಂಡ ಪೋಷಕರು, ಶಿಕ್ಷಣ ಸಚಿವರಾದವರು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ, ಈ ರೀತಿ ಉಡಾಫೆಯಾಗಿ ಮಾತನಾಡಿದ್ದು ಸರಿಯಲ್ಲ ಎಂದು ಪೋಷಕರು ಅವರ ಮನೆ ಮುಂದೆಯೇ ಧರಣಿ ನಡೆಸಿದ್ದಾರೆ. ಅಲ್ಲದೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.