ಪ್ರಧಾನಿ ಮನ್ ಕಿ ಬಾತ್ ಗೆ ರಾಹುಲ್ ತಿರುಗೇಟು
ನವದೆಹಲಿ, ಜೂನ್ 27: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಕೋವಿಡ್ ಲಸಿಕೆಗಳ ಕುರಿತು ಹರಡುತ್ತಿರುವ ಊಹಾಪೋಹ ಮತ್ತು ನಕಾರಾತ್ಮಕ ವದಂತಿಗಳಿಗೆ ಕಿವಿಗೊಡದೇ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟು ಪ್ರತಿಯೊಬ್ಬರು ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಿರಿ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಟ್ವಿಟ್ ನಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಭಾನುವಾರ ಮನ್ ಕೀ ಬಾತ್ 78ನೇ ರೇಡಿಯೋ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊವಿಡ್-19 ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ “ದೇಶದಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವ ಸಂದೇಶ ಸಾರುವುದಕ್ಕೂ ಮೊದಲು, ಲಸಿಕೆ ಕೊರತೆಯನ್ನು ಕೊನೆಗಾಣಿಸಿರಿ,” ಎಂದು ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಭಾರತದಾದ್ಯಂತ ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸುತ್ತಿದೆ ಎಂದು ವಿರೋಧ ಪಕ್ಷ ಮೊದಲಿನಿಂದಲೂ ಆರೋಪಿಸುತ್ತಿವೆ. ಕೊವಿಡ್-19 ಲಸಿಕೆ ಹಂಚಿಕೆ ಮತ್ತು ವಿತರಣೆ ಪ್ರಮಾಣದ ಬಗ್ಗೆ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.