ಕೋವಿಡ್ ಲಸಿಕೆ ನೋಂದಣಿಗೆ ಸುಲಭ ಆಪ್: ಗ್ರಾಮೀಣ ಭಾಗದ ಯುವಕರ ಆವಿಷ್ಕಾರ
ಸಾಲಿಗ್ರಾಮ (ಉಡುಪಿ ಟೈಮ್ಸ್ ವರದಿ):ಕೋವಿಡ್ ಲಸಿಕೆಗಾಗಿ ದಿನನಿತ್ಯ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಅಲೆದಾಡುವ ಮತ್ತು ಲಸಿಕೆ ಪಡೆಯುವ ವ್ಯವಸ್ಥೆಯಲ್ಲಿರುವ ಹಲವಾರು ಸಮಸ್ಯೆ, ಗೊಂದಲಗಳಿಗೆ ಪರಿಹಾರವೆಂಬಂತೆ ಸಾಲಿಗ್ರಾಮ ಕಾರ್ಕಡದ ಇಬ್ಬರು ಯುವಕರು ಲಸಿಕೆ ನೋಂದಣಿಗೆ ಸರಳ ರೀತಿಯ ಆಪ್ವೊಂದನ್ನು ಆವಿಷ್ಕರಿಸಿದ್ದು, ಹಲವಾರು ಜನರು ಈಗಾಗಲೇ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಕೋವಿನ್, ಪೇಟಿ ಎಂ, ಆರೋಗ್ಯ ಸೇತು ಆಪ್ಗಳ ಮೂಲಕ ಈಗಾಗಲೇ ಲಸಿಕೆ ಪಡೆಯಲು ನೋಂದಣಿಗೆ ಅವಕಾಶವಿದ್ದು, ನೋಂದಣಿ ಆದ ಮೇಲೆ ಲಸಿಕೆ ಲಭ್ಯತೆಯ ಬಗ್ಗೆ ಮೆಸೇಜ್ ಹಾಗೂ ನೋಟಿಫೀಕೇಶನ್ ,ಆಲರಾಂ ಮೂಲಕ ನಮಗೆ ಸಂದೇಶ ಎಚ್ಚರಿಸುವ ವ್ಯವಸ್ಥೆ ಈ ಆಪ್ನಿಂದ ಆಗುತ್ತಿದೆ. ನಮ್ಮ ಕೆಲಸದ ಒತ್ತಡದ ಸಂದರ್ಭದಲ್ಲಿ ಈ ಸಂದೇಶಗಳನ್ನು ನೋಡುವುದೇ ಕಷ್ಟವಾಗಿರುತ್ತದೆ. ಆದರೆ ಇದೆಲ್ಲ ಸಮಸ್ಯೆಗೆ ಪರಿಹಾರವೆಂಬಂತೆ ಲಸಿಕೆ ಲಭ್ಯತೆಯ ಸಮಯದಲ್ಲಿ ಅಲರಾಮ್ ಮೂಲಕ ನಮ್ಮನ್ನು ಎಚ್ಚರಿಸುವ ನೂತನ ಆಪ್ ವ್ಯಾಕ್ಟ್ರ್ಯಾಕ್ನ್ನು (VACTRACK) ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಸಾಲಿಗ್ರಾಮ ಕಾರ್ಕಡದ ಸಾಫ್ಟ್ವೇರ್ ಎಂಜಿನಿಯರ್ ರಾಮದಾಸ್ ನಾಯಕ್ ಮತ್ತು ಕಾರ್ತಿಕ್ ಕಾಮತ್ ಕೊಂಚಾಡಿ ಇವರುಗಳು ಕಂಡು ಹಿಡಿದು ಲಸಿಕೆ ಪಡೆಯಲು ಸರಳ ವ್ಯವಸ್ಥೆಯನ್ನು ಜನರಿಗೆ ಪರಿಚಯಿಸಿದ್ದಾರೆ.
ಹೇಗೆ ಕೆಲಸ ಮಾಡುತ್ತೆ ?:ಗೂಗಲ್ ಪ್ಲೇ ಸ್ಟೋರ್ ನಲ್ಲಿ ವ್ಯಾಕ್ಟ್ರ್ಯಾಕ್ ಆಪ್ನ್ನು ಡೌನ್ಲೋಡ್ ಮಾಡಿಕೊಂಡು ವ್ಯಕ್ತಿ ಇರುವ ಸ್ಥಳದ ಪಿನ್ಕೋಡ್ನ್ನು ನಮೂದಿಸಿ ಸಬ್ಮಿಟ್ ನೀಡಿದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಯ ಬಗ್ಗೆ ಮಾಹಿತಿ ನೀಡುತ್ತದೆ. ನಂತರ ನೋಂದಣಿಗಾಗಿ ನೇರವಾಗಿ ಕೋವಿನ್ ಆಪ್ಗೆ ಲಿಂಕ್ ಒದಗಿಸುತ್ತದೆ. ನೋಂದಣಿಯ ನಂತರ ಲಸಿಕೆ ಲಭ್ಯತೆಯ ಆಗುವ ದಿನದಂದು ಸಂದೇಶಗಳನ್ನು ಅಲರಾಂ ಹೊಡೆಯುವ ಮೂಲಕ ವ್ಯಕ್ತಿಯನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ. ಯಾವ ಭಾಗದ ಪಿನ್ಕೋಡ್ಗಳನ್ನು ಈ ಆಪ್ನಲ್ಲಿ ನಾವು ನಮೂದಿಸುತ್ತೇವೆ, ಆ ಪಿನ್ಕೋಡ್ನ ಸುತ್ತಮುತ್ತ ಇರುವ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಪ್ರಮಾಣದ ಬಗ್ಗೆ ಮಾಹಿತಿ ನೀಡುತ್ತದೆ.
ಇದೇ ಆಪ್ ಮೂಲಕ ವ್ಯಕ್ತಿಗೆ ಬೇಕಾಗುವ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಮತ್ತು ಆಸ್ಪತ್ರೆಯನ್ನು ಆಯ್ಕೆ ಮಾಡಿ ಕೋವಿನ್ ಆಪ್ ಮೂಲಕ ನೇರವಾಗಿ ನೋಂದಣಿ ಮಾಡುವ ವ್ಯವಸ್ಥೆ ಬಗ್ಗೆ ಆವಿಷ್ಕಾರ ಮಾಡುತ್ತಿದ್ದಾರೆ ರಾಮದಾಸ್ ನಾಯಕ್. ಒಟ್ಟಾರೆ ಈ ಯುವ ಸಾಫ್ಟ್ವೇರ್ ಇಂಜಿನಿಯರ್ ಗಳ ಮೂಲಕ ಮುಂದೆ ಲಸಿಕೆ ಪಡೆಯುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಪ್ರಯೋಜನವಾಗಲಿದೆ ಎನ್ನುವುದು ಎಲ್ಲರ ಆಶಯ.
ಜನಸಾಮಾನ್ಯರಿಗೆ ಇಂದಿನ ಸ್ಥಿತಿಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಸುಲಭ ರೀತಿಯ ಆವಿಷ್ಕಾರಕ್ಕೆ ಕೈಹಾಕಿದ್ದೇವೆ.ಯಶಸ್ವಿ ಆಗಿದ್ದೇವೆ ಎಂಬ ಆಶಯ ಕೂಡಾ ನಮ್ಮಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಆವಿಷ್ಕಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುವುದು. ಎಂದು ರಾಮದಾಸ್ ನಾಯಕ್ ತಿಳಿಸಿದರು