ಸ್ಯಾಮ್ ಸಂಗ್ ಡಿಸ್ ಪ್ಲೇ ತಯಾರಿಕಾ ಘಟಕ ಚೀನಾದಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರ
ಲಕ್ನೋ ಜೂ.22:ಚೀನಾದಲ್ಲಿದ್ದ ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಂಸ್ಥೆ ಸ್ಯಾಮ್ಸಂಗ್ ನ ಡಿಸ್ಪ್ಲೇ ತಯಾರಿಕಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾಗೆ ಸ್ಥಳಾಂತರಿಸಿದೆ ಎಂಬ ಸುದ್ದಿಯೊಂದು ವರದಿಯಾಗಿದೆ.
ಉತ್ತಮ ಕೈಗಾರಿಕಾ ವಾತಾವರಣ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ಚೀನಾದಲ್ಲಿದ್ದ ಡಿಸ್ಪ್ಲೇ ಘಟಕವನ್ನು ನೋಯ್ಡಾಗೆ ಸ್ಥಳಾಂತರಿಸಿದ್ದೇವೆ ಎಂದು ಕಂಪನಿ ಹೇಳಿದೆ. ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸಿಗೆ ಸ್ಯಾಮ್ಸಂಗ್ನ ನೋಯ್ಡಾ ಕಾರ್ಖಾನೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಸಿಎಂ ಯೋಗಿ ಅದಿತ್ಯನಾಥ್ ಹೇಳಿದ್ದು, ಇದರಿಂದಾಗಿ ರಾಜ್ಯದ ಯುವಕರಿಗೆ ರಾಜ್ಯದಲ್ಲಿ ಉದ್ಯೋಗ ಪಡೆಯಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಮುಂದಿನ 5 ವರ್ಷದಲ್ಲಿ 11 ಲಕ್ಷ ಕೋಟಿ ಹಣವನ್ನು ಭಾರತ ಮತ್ತು ವಿದೇಶದ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿಸಿದ್ದರು.
ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ)ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.
ಪ್ರಪಂಚದಲ್ಲಿಯೇ ಅತಿದೊಡ್ಡ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದಕ ಘಟಕವಾಗಿದ್ದು, ನೋಯ್ಡಾದ ಸುಮಾರು 35 ಎಕರೆ ಪ್ರದೇಶದಲ್ಲಿ ತಯಾರಿಕಾ ಘಟಕ ನಿರ್ಮಾಣವಾಗಿದೆ. ಈ ಘಟಕದಲ್ಲಿ ಉತ್ಪನ್ನಗಳಾದ, ಸ್ಮಾರ್ಟ್ ಫೋನ್, ಏರ್ ಕಂಡೀಷನರ್, ರೆಫ್ರಿಜರೇಟರ್, ಫ್ಲ್ಯಾಟ್ ಪ್ಯಾನೆಲ್ ಟಿವಿ, ವಾಷಿಂಗ್ ಮಷಿನ್ ಹಾಗೂ ಅನೇಕ ಉತ್ಪನ್ನಗಳು ತಯಾರಾಗಲಿದೆ.
ಪ್ರತಿ ತಿಂಗಳಿಗೆ ಸುಮಾರು 1.2 ಕೋಟಿ ಮೊಬೈಲ್ ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಪ್ರಸ್ತುತವಾಗಿ ಸ್ಯಾಮ್ಸಂಗ್ ಕಂಪನಿಯು ಭಾರತದಲ್ಲಿ 67 ಲಕ್ಷ ಸ್ಮಾರ್ಟ್ ಫೋನ್ಗಳನ್ನು ತಯಾರಿಸುತ್ತಿದೆ.