ಹೆಬ್ರಿ ವ್ಯವಸಾಯ ಸೇವಾ ಸ.ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಹೆಬ್ರಿ ಜು.10: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಅಮಾನತಾದ ಸಿಬ್ಬಂದಿಯಿಂದ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಅಡಳಿತ ಮಂಡಳಿ ವಿರುದ್ಧವೇ ದಲಿತ ದೌರ್ಜನ್ಯ ದೂರು ದಾಖಲಾಗಿದೆ.

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಹಣ ದುರುಪಯೋಗ ಪ್ರಕರಣದಲ್ಲಿ ಅಮಾನತುಗೊಂಡ ಸಿಬ್ಬಂದಿ ಶಂಕರ ನಾಯ್ಕ ಅವರು ಸಂಘದ ಕಾರ್ಯನಿರ್ವಹಣಾಧಿಕಾರಿ,ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದ್ದಾರೆ.

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಾಗಿರುವ ಶಿವಪುರ ಗ್ರಾಮದ ಶಂಕರ ನಾಯ್ಕ ಎಂಬವರು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ಕೆಲ ತಿಂಗಳ ಹಿಂದೆ ಸಂಘದ 88,000 ಹಣ ದುರುಪಯೋಗ ಆರೋಪದ ಮೇಲೆ ಅವರನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಅಮಾನತು ಗೊಳಿಸಲಾಗಿತ್ತು. ಬಳಿಕ ಮಾನವೀಯ ನೆಲೆಯಲ್ಲಿ 88,000 ದ ಪೈಕಿ 60,000 ಹಣವನ್ನು ಮನ್ನಾ ಮಾಡಿ ಕೇವಲ 28,000 ಹಣ ಪಾವತಿಸುವಂತೆ ಸಂಘದ ಆಡಳಿತ ಮಂಡಳಿ ನಿರ್ಣಯಿಸಿತ್ತು.

ಆದರೆ ಶಂಕರ ನಾಯ್ಕ ಅವರು ಸಂಘದ ನಿರ್ಣಯದ ವಿರುದ್ಧವೇ ತಿರುಗಿಬಿದ್ದು ಹಣ ಪಾವತಿಸಲು ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಜೂನ್ 13 ರಂದು ಅಮಾನತು ಮಾಡಲಾಗಿತ್ತು.

ಅಮಾನತುಗೊಂಡ ಶಂಕರ ನಾಯ್ಕ ಅವರ ವೇತನದಿಂದ ತಿಂಗಳಿಗೆ 5 ಸಾವಿರ ಹಣವನ್ನು ಸಂಘದ ಖಾತೆಗೆ ಜಮಾ ಮಾಡುವ ನಿರ್ಧಾರಕ್ಕೆ ಶಂಕರ ನಾಯ್ಕ ಒಪ್ಪದೇ ಸಂಘದ ವಿರುದ್ಧವೇ ಸುಳ್ಳು ದೂರು ನೀಡಲು ಮುಂದಾಗಿದ್ದಾರೆ ಎನ್ನುವುದು ಸಂಘದ ಆಡಳಿತ ಮಂಡಳಿಯ ಆರೋಪವಾಗಿದೆ.

ಆದರೆ ಈಗಾಗಲೇ ಅಮಾನತುಗೊಂಡಿರುವ ಶಂಕರ ನಾಯ್ಕ ಅವರು,ಸಂಘದ ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ ಅಧ್ಯಕ್ಷ ನವೀನ್‌ ಅಡ್ಯಂತಾಯ ಸಂಘದ 12 ಜನ ನಿರ್ದೇಶಕರು ಹಾಗೂ ನಾಷ್ಪಾಲು ಗ್ರಾಮದ ಕಾಸನಮಕ್ಕಿಯ ಸುಂದರ ಎಂಬವರು ತನ್ನ ವಿರುದ್ಧ ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ತನ್ನನ್ನು ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿರುತ್ತಾರೆ ಅಲ್ಲದೇ ತನ್ನ ವಿರುದ್ದ ಮಾನಸಿಕ ಕಿರುಕುಳ,ದ್ವೇಷಪೂರಿತ ಸುಳ್ಳು ಮೊಕದ್ದಮೆ ಹಾಗೂ ಕಾನೂನು ವ್ಯವಹಾರ ಮಾಡಿ ಮಾನಸಿಕ ಹಿಂಸೆ ನೀಡಿ ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!