ವಿದ್ಯೋದಯ ಶಾಲೆಗೆ ಹುಸಿ ಬಾಂಬ್ ಬೆದರಿಕೆ: ಚೆನ್ನೈ ಮೂಲದ ಯುವತಿ ಅರೆಸ್ಟ್
ಉಡುಪಿ: ಶಾಲೆ, ಆಸ್ಪತ್ರೆ ಹಾಗೂ ಕ್ರೀಡಾಂಗಣಗಳಿಗೆ ಹುಸಿ ಬಾಂಬ್ ಬೆದರಿಕೆ ಇ ಮೇಲ್ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಪೊಲೀಸರು ಯುವತಿಯೋರ್ವಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಉಡುಪಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯಲು ಮುಂದಾಗಿದ್ದು, ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ಬಳಿಕ ಆರೋಪಿಯನ್ನು ಉಡುಪಿ ಪೊಲೀಸರ ವಶಕ್ಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೆನ್ನೈ ಮೂಲದ ಇಂಜಿನಿಯರಿಂಗ್ ಯುವತಿ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಕಳುಹಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದು, ಉಡುಪಿಯಲ್ಲಿಯೂ ಇಂತಹುದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವತಿಯನ್ನು ತನಿಖೆ ನಡೆಸಲು ಪೊಲೀಸರು ಮುಂದಾಗಿದೆ. ಜೂನ್ 16 ರಂದು ಉಡುಪಿ ಬೈಲಕೆರೆಯಲ್ಲಿರುವ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ್ದು, ಆ ಮೇಲ್ ನಲ್ಲಿ, ʼನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಲೂ ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿತ್ತು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ ಆರೋಪಿಯನ್ನು ಹೆಚ್ಚಿನ ತನಿಖೆಗೆ ನಮ್ಮ ಕಸ್ಟಡಿಗೆ ನೀಡುವಂತೆ ಅಹಮದಾಬಾದ್ ಪೊಲೀಸರಿಗೆ ಪತ್ರ ಬರೆಯುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇನ್ನು, ಅಹಮದಾಬಾದ್‌ನ ಜಂಟಿ ಪೊಲೀಸ್ ಕಮಿಷನರ್ ಶರದ್ ಸಿಂಘಲ್, ಡಿಸಿಪಿ ಲವಿನಾ ಸಿನ್ಹಾ ಹಾಗೂ ಎಸಿಪಿ ಹಾರ್ದಿಕ್ ಮಕಾಡಿಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಯುವತಿಯನ್ನು ಬಂಧಿಸಲಾಗಿದೆ. ಆರೋಪಿ ಯುವತಿ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಚೆನ್ನೈನ ಎಂಎನ್‌ಸಿ ಕಂಪೆನಿಯೊಂದರಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ.





