ದೇಶದ ಮುಂದಿನ ಭವಿಷ್ಯ ಸಹಕಾರಿ ಕ್ಷೇತ್ರದ ಕೈಯಲ್ಲಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಹಕಾರಿ ಸಂಸ್ಥೆಗಳಿಗೆ ಪೆಟ್ರೊಲ್ ಬಂಕ್ ಹಾಗೂ ಗ್ಯಾಸ್ ಏಜೆನ್ಸಿಯಲ್ಲಿ ಪ್ರಥಮ ಪ್ರಶಸ್ತ್ಯ ನೀಡುವ ಯೋಚನೆ ಕೇಂದ್ರ ಸರ್ಕಾರದ ಮುಂದಿದೆ. ಸಹಕಾರಿ ಸಂಸ್ಥೆಗಳ ಮೂಲಕ ವೋಲ್ವೋ ಸಹಿತ ಸಾರಿಗೆ ವ್ಯವಸ್ಥೆ ಮುನ್ನಡೆಸಲು ಯೋಜಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯ ಹೊಟೇಲ್ ಡಯಾನ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ರಾಜ್ಯದ ಸೌಹಾರ್ದ ಸಹಕಾರಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಭಾರತದಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿದ್ದು, ಮುಂದೆ ಇಡೀ ಆಡಳಿತ ವ್ಯವಸ್ಥೆಯೇ ಸಹಕಾರಿ ಕ್ಷೇತ್ರದ ಮೂಲಕ ನಡೆಯುವ ಸಾಧ್ಯತೆ ಇದೆ. ನಮ್ಮ ದೇಶದ ಒಟ್ಟು ಜನ ಸಂಖ್ಯೆ ಶೇ.50ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದ್ದರಿಂದ ದೇಶದ ಮುಂದಿನ ಭವಿಷ್ಯ ಸಹಕಾರಿ ಕ್ಷೇತ್ರದ ಕೈಯಲ್ಲಿದೆ ಎಂದು ಹೇಳಿದರು.

ಇನ್ನು ಮುಂದೆ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಗಳು ಜನ ಸೇವೆಗೆ ತೆರೆದುಕೊಳ್ಳಲಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 25 ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದ ಮೂಲಕ ಬಡವರ ಕಲ್ಯಾಣ ಯೋಜನೆಗಳು ಅನುಷ್ಠಾನಗೊಳಿಸಲಾಗುವುದು. ಈ ಹಿಂದೆ ಜನರು ವಿವಿಧ ಯೋಜನೆಗಳಿಗಾಗಿ ನಾಡ ಕಚೇರಿ, ತಾಲೂಕು, ಡಿಸಿ ಕಚೇರಿಗೆ ಅಲೆದಾಡುತ್ತಿದ್ದರು. ಇನ್ನು ಮುಂದೆ ಈ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಇಲ್ಲಿಯೇ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಮಹತ್ವ ಹಾಗೂ ಅಧಿಕಾರ ವಿಕೇಂದ್ರಿಕರಣದ ಅಪರೂಪದ ವ್ಯವಸ್ಥೆ ಆಗಿದೆ. ಆ ಮೂಲಕಸಹಕಾರಿ ಕ್ಷೇತ್ರಕ್ಕೆ ಬಹಳ ದೊಡ್ಡ ಶಕ್ತಿ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಸಿಎ ಜಿ.ನಂಜನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸೌಹಾರ್ದ ಸಹಕಾರಿಯ ರಾಜ್ಯ ನಿರ್ದೇಶಕ ಮಂಜುನಾಥ್ ಎಸ್.ಕೆ, ಭಾರತಿ ಜಿ..ಭಟ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಸಂಯುಕ್ತ ಸಹಕಾರಿ ಮೈಸೂರು ಪ್ರಾಂತಿಯ ಅಧಿಕಾರಿ ಗುರುಪ್ರಸಾದ್ ಬಂಗೇರ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಟಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಉಡುಪಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್.ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.





