ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ: ಯು.ಟಿ.ಖಾದರ್

ಮಂಗಳೂರು: ದ್ವೇಷವನ್ನು ಹರಡುವ ಅಥವಾ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳು ಯಾರೇ ಆಗಿರಲಿ. ಅವರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನಲೆಯನ್ನು ಲೆಕ್ಕಿಸದೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವಂತಹ ಕೆಲವು ಘಟನೆಗಳು ಪ್ರತಿಯೊಬ್ಬರಿಗೂ ನೋವನ್ನುಂಟು ಮಾಡಿದೆ. ಹಿಂಸಾಚಾರ, ದ್ವೇಷ ಭಾಷಣ ಮತ್ತು ಸಮುದಾಯಗಳ ನಡುವಿನ ಉದ್ವಿಗ್ನತೆ ಇವೆಲ್ಲವೂ ನಮಗೆ ಆಂತರಿಕವಾಗಿ ತೀವ್ರ ಅಶಾಂತಿ ಆತಂಕವನ್ನುಂಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿನ ಜನರ ಪರಸ್ಪರ ನಂಬಿಕೆಯ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ನಿರ್ಮಿತವಾಗಿದೆ. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು-ಎಲ್ಲರೂ ತಲೆಮಾರುಗಳಿಂದ ಪ್ರೀತಿ ವಿಶ್ವಾಸದೊಂದಿಗೆ ಜೊತೆಯಾಗಿ ಬದುಕುತ್ತಾ ಬಂದಿದ್ದೇವೆ. ಇಂತಹ ಸಾಮರಸ್ಯದ ಜಿಲ್ಲೆಯನ್ನು ನೋಡಿ ಬೆಳೆದು ಬಂದಿರುವ ನಮಗೆ, ಅದು ನಮ್ಮ ಕೈ ತಪ್ಪುತ್ತಿರುವುದು ಸಹಿಸಲಾಧ್ಯವಾದ ಸಂಗತಿಯಾಗಿದೆ.ಇದಕ್ಕೆ ನಾವು ಯಾವುದೇ ಅವಕಾಶ ನೀಡಬಾರದು ಎಂದಿದ್ದಾರೆ.
ಈಗ ನಾವು ಒಂದು ಅತ್ಯಂತ ಸೂಕ್ಷ್ಮವಾದ ಕಾಲಘಟ್ಟದಲ್ಲಿದ್ದೇವೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳು, ವದಂತಿಗಳನ್ನು, ದ್ವೇಷಭರಿತ ಹೇಳಿಕೆಗಳನ್ನು ಅತ್ಯಂತ ವೇಗದಲ್ಲಿ ಹರಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುತ್ತವೆ. ಇದು ಕೋಪದಿಂದ, ಭಯದಿಂದ ಅಥವಾ ದ್ವೇಷದಿಂದ ಪ್ರತಿಕ್ರಿಯಿಸುವ ಸಮಯವಲ್ಲ. ಇದು ಶಾಂತಿ, ಘನತೆ ಮತ್ತು ಪ್ರತಿಯೊಂದು ಧರ್ಮಕ್ಕೆ ಗೌರವ ನೀಡುವ ನಮ್ಮ ನೈತಿಕ ಮೌಲ್ಯಗಳೊಂದಿಗೆ ದೃಢವಾಗಿ ನಿಲ್ಲುವ ಹಾಗೂ ಜವಾಬ್ದಾರಿಯುತವಾಗಿ ಪ್ರತಿಸ್ಪಂದಿಸುವ ಸಮಯವಾಗಿದೆ ಎಂದು ಹೇಳಿದ್ದಾರೆ.
ನಾನು ಎಲ್ಲ ಧರ್ಮಗಳ ಧಾರ್ಮಿಕ ನಾಯಕರೊಂದಿಗೆ ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅರ್ಥಪೂರ್ಣ ಮಾತುಕತೆಯ ಮೂಲಕ ಸಮಾಜದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುವ ಬದಲು, ಶಾಂತಿಯತ್ತ ಮುನ್ನಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಳ್ಮೆಯಿಂದ, ಜವಾಬ್ದಾರಿಯುತವಾಗಿ ಭವಿಷ್ಯದ, ಸಾಮರಸ್ಯ ಸಮಾಜದ ಉಳಿವಿಗಾಗಿ ಗಂಭೀರ ಚಿಂತನೆ, ವಿಶ್ಲೇಷಣೆ ಮಾಡಬೇಕಿದೆ.
ಮಾನವೀಯತೆಯ ಎದುರು ದ್ವೇಷವು ವಿಜೃಂಭಿಸಲು ನಾವು ಅವಕಾಶ ನೀಡಬಾರದು. ಹಿಂಸೆಯು ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸಲು, ನಿರ್ಧರಿಸಲು ನಾವು ಬಿಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಈ ಸಂಕಲ್ಪದಲ್ಲಿ ನಾವೆಲ್ಲರೂ ಜೊತೆಯಾಗಿದ್ದೇವೆ. ಒಗ್ಗಟ್ಟು ನಮ್ಮ ಶಕ್ತಿ, ಸಹಿಷ್ಣುತೆ ನಮ್ಮ ಮೌಲ್ಯ, ಮತ್ತು ಶಾಂತಿ ನಮ್ಮ ಗುರಿ, ಈ ಮೌಲ್ಯಗಳ ಜೊತೆಗೆ ನಾವು ಧೈರ್ಯದಿಂದ ಮುಂದೆ ಸಾಗೋಣ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!