ಕಾಲ್ತುಳಿತದಲ್ಲಿ ಮೃತಪಟ್ಟ ಚಿನ್ಮಯಿ ಶೆಟ್ಟಿ ಕಟುಂಬಕ್ಕೆ ಪರಿಹಾರ ಚೆಕ್ ವಿತರಣೆ
ಹೆಬ್ರಿ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಬಲಿಯಾದ ಹೆಬ್ರಿ ಮೂಲದ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಮಂಗಳವಾರ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಹೆಬ್ರಿ ಇಂದಿರಾ ನಗರದಲ್ಲಿರುವ ಮೃತ ಚಿನ್ಮಯಿ ಶೆಟ್ಟಿ ಮನೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ನ್ನು ತಂದೆ ಕರುಣಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಆಕೆಯ ತಂದೆ ತಾಯಿ ಮತ್ತು ಸಹೋದರನಿಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ, ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಸೂಚನೆ ಮೇರೆಗೆ ಈ ದಿನ ಅವರ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ನ್ನು ಹಸ್ತಾಂತರಿಸಿದ್ದೇವೆ. ಮನೆಯವರ ದುಃಖದಲ್ಲಿ ಸದಾ ಜಿಲ್ಲಾಡಳಿತ ಅವರೊಂದಿಗಿದೆ. ಏನೇ ಸಮಸ್ಯೆಯಾದರೂ ನಮ್ಮನ್ನು ಸಂಪರ್ಕಿಸಬಹುದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ.ಸಿ.ರಶ್ಮಿ , ಹೆಬ್ರಿ ತಹಸೀಲ್ದಾರ್ ಪ್ರಸಾದ್ ಎಸ್.ಎ, ಹೆಬ್ರಿ ಠಾಣಾಧಿಕಾರಿ ಮಹೇಶ ಟಿ, ಹೆಬ್ರಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್, ಚಿನ್ಮಯಿ ತಾಯಿ ಶಾಂತ ಶೆಟ್ಟಿ, ಸಹೋದರ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.





