ತಾಳಿ ಕಟ್ಟುವ ವೇಳೆ ಮದುವೆ ಕ್ಯಾನ್ಸಲ್: ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿ
ಹಾಸನ: ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡ ಡಂದು ಹಸೆಮಣೆ ಮೇಲಿಂದ ಎದ್ದು ಬಂದಿದ್ದ ಯುವತಿ ಅದೇ ಮಂಟಪದ ಆವರಣದಲ್ಲಿದ್ದ ದೇವಾಲಯದಲ್ಲಿ ಅದೇ ದಿನ ಸಂಜೆ ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಹಾಸನದ ಆದಿಚುಂಚನಗಿರಿಯಲ್ಲಿ ನಡೆದಿದೆ.
ಹಾಸನದ ಬೂವನಹಳ್ಳಿಯ ಸ್ನಾತಕೋತ್ತರ ಪದವೀಧರೆ ಪಲ್ಲವಿ ಮತ್ತು ಆಲೂರು ತಾಲೂಕು ಈಶ್ವರ ಹಳ್ಳಿ ಕೊಡುಗೆ ಗ್ರಾಮದ ಶಿಕ್ಷಕ ವೇಣುಗೋಪಾಲ್ ಎನ್ನುವವರಿಗೆ ಶುಕ್ರವಾರ ಮದುವೆ ನಿಗದಿಯಾಗಿತ್ತು. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮುನ್ನ ವಧುವಿಗೆ ಆಕೆ ಪ್ರೀತಿಸುತ್ತಿದ್ದ ಹುಡುಗನಿಂದ ಕರೆ ಬಂದ ಹಿನ್ನೆಲೆ ತಕ್ಷಣವೇ ತನಗೆ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಳು. ಪೋಷಕರು ಎಷ್ಟೇ ಮನವೊಲಿಸಿದರೂ ಯುವತಿ ಮದುವೆಗೆ ಒಪ್ಪದ ಕಾರಣ ಮದುವೆಯನ್ನು ರದ್ದುಪಡಿಸಲಾಗಿತ್ತು.
ಇನ್ನು, ಸಂಜೆ ವೇಳೆಗೆ ಪ್ರೀತಿಸಿದ ಯುವಕ ರಘುವಿನ ಜೊತೆಗೆ ಗಣಪತಿ ದೇವಾಲಯದಲ್ಲಿ ಪಲ್ಲವಿಯ ಪೋಷಕರು ಮದುವೆ ಮಾಡಿಕೊಟ್ಟಿದ್ದಾರೆ. ಪಲ್ಲವಿ ಮತ್ತು ರಘು ಪೋಷಕರ ಸಮ್ಮುಖದಲ್ಲೇ ಮದುವೆ ನಡೆದಿದೆ.





