ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿಅನಧಿಕೃತ ಸಂದರ್ಶನ :ಮಂಗಳೂರಿನಲ್ಲಿ ಎರಡು ಏಜೆನ್ಸಿ ಪತ್ತೆ
ಮಂಗಳೂರು: ಇತ್ತೀಚೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವವರನ್ನೇ ಗುರಿಯಾಗಿಸಿಕೊಂಡು ಇಂತಹ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಮಂಗಳೂರಿನಲ್ಲಿ ವಿದೇಶಿಗಳಲ್ಲಿ ಉದ್ಯೋಗ ನೀಡುವ ಸೋಗಿನಲ್ಲಿ ಅನಧಿಕೃತವಾಗಿ ಸಂದರ್ಶನ ನಡೆಸಿ ವಂಚಿಸುತ್ತಿರುವ ಎರಡು ಏಜೆನ್ಸಿಗಳು ಪತ್ತೆಯಾಗಿವೆ.
ಬೆಂಗಳೂರಿನ ಪ್ರೊಟೆಕ್ಟರ್ ಆಫ್ ಎಮಿಗ್ರಂಟ್ಸ್(ಪಿಇಒ) ಅವನೀಶ್ ಶುಕ್ಲಾ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿ, ಅಲ್ಲಿ ಅನಧಿಕೃತವಾಗಿ ವಿದೇಶಿ ಉದ್ಯೋಗ ಕೊಡಿಸುವುದಾಗಿ ಸಂದರ್ಶನ ನಡೆಸುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ನಗರದ ಬೆಂದೂರ್ವೆಲ್ ನಲ್ಲಿ ನೇಮಕಾತಿ ನಡೆಯಲಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರಿಗೆ ಆಗಮಿಸಿದ್ದ ಅವನೀಶ್ ಶುಕ್ಲಾ ಅವರು, ಮಂಗಳೂರು ಪೊಲೀಸರೊಂದಿಗೆ ದಾಳಿ ನಡೆಸಿ, ಅರ್ಜಿ ನಮೂನೆಗಳು ಮತ್ತುಅಭ್ಯರ್ಥಿಗಳ ಬಯೋ-ಡೇಟಾ ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಝಡ್- ಝೋನ್ ಕನ್ಸಲ್ಟೆನ್ಸಿ ಎನ್ನುವ ಸಂಸ್ಥೆ ಹಾಗೂ ಹಾಗೂ ಪಂಪ್‌ವೆಲ್‌ನ ಇನ್ನೊಂದು ಸಂಸ್ತೆ ಈ ರೀತಿ ಅನಧಿಕೃತವಾಗಿ ಸಂದರ್ಶನ ನಡೆಸುತ್ತಿದ್ದು, ದಾಳಿಯ ವಿಚಾರ ತಿಳಿದು ಸಂದರ್ಶನದ ದಿನಾಂಕವನ್ನು ಮುಂದೂಡಿದ್ದವು ಎನ್ನಲಾಗಿದೆ.
ಇನ್ನು, 1983ರ ವಲಸೆ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ವಿದೇಶಾಂಗ ಸಚಿವಾಲಯದ ಮಾನ್ಯತಾ ಪ್ರಮಾಣ ಪತ್ರವಿಲ್ಲದೇ ಭಾರತದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ವಿದೇಶ ಉದ್ಯೋಗಕ್ಕಾಗಿ ನೇಮಕಾತಿಯನ್ನು ಕೈಗೊಳ್ಳಲು ಅವಕಾಶ ಇಲ್ಲ. ಈ ರೀತಿ ಅನಧಿಕೃತವಾಗಿ ಸಂದರ್ಶನ ಕೈಗೊಳ್ಳುವವರನ್ನು ಸೆಕ್ಷನ್ 24ರ ಅನ್ವಯ ಶಿಕ್ಷಿಸಬಹುದು ಎಂದು ಹೇಳಿದ್ದಾರೆ.





