ಪ್ರಸಾದ್ ನೇತ್ರಾಲಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ
ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಹಿರಿಯ ನಾಗರಿಕರ ಸಂಸ್ಥೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿಯ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮವು ಪ್ರಸಾದ್ ನೇತ್ರಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಮಾತನಾಡಿದ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರು, ಇಂದು ನಮ್ಮ ಮನೆಯ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವುದು ಅವರ ಮಕ್ಕಳ ಜವಾಬ್ದಾರಿ. ವೃದ್ಧಾಪ್ಯದಲ್ಲಿ ಕಣ್ಣಿನ ದೃಷ್ಟಿಯು ಸರಿಯಾಗಿದ್ದರೆ ಹಿರಿಯರ ಅರ್ಧ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ, ಬಹಳ ಚಟುವಟಿಕೆಯಿಂದ ಇರುತ್ತಾರೆ. ಹೀಗಾಗಿ ಕಾಲ ಕಾಲಕ್ಕೆ ದೈಹಿಕ ಹಾಗೂ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಮಕ್ಕಳು ಹೊಂದಿರಬೇಕು ಎಂದರು.
ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ರಾವ್ ಅವರು, ತಮ್ಮ ಸಂಸ್ಥೆಯಿಂದ ಪ್ರತೀ ವರ್ಷ ಸದಸ್ಯರಿಗಾಗಿ ಉಳಿದೆಲ್ಲಾ ಚಟುವಟಿಕೆಗಳೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ನೇತ್ರ ತಪಾಸಣಾ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಸಾದ್ ನೇತ್ರಾಲಯವು ನೀಡುವ ಸಹಕಾರ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಹಿರಿಯ ನಾಗರಿಕ ಸಂಸ್ಥೆಯ ಪೂರ್ವಾಧ್ಯಕ್ಷ ಹೆಚ್. ವಿಶ್ವನಾಥ್ ಹೆಗ್ಡೆ, ಕಾರ್ಯದರ್ಶಿ ಸದಾನಂದ ಹೆಗ್ಡೆ ಉಪಸ್ಥಿತರಿದ್ದರು.ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಂ.ವಿ.ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ,ಕೃಷ್ಣ ಪ್ರಸಾದ್ ಕೂಡ್ಲು ಹಾಗೂ ಡಾ.ಮಾನಸ ಭಟ್ ನೇತ್ರ ತಪಾಸಣೆನಡೆಸಿದರು. ಶಿಬಿರ ಸಂಯೋಜಕಿ ಸುರೇಖ ಮಂಜುನಾಥ, ನೇತ್ರ ಸಹಾಯಕರಾದ ಕುಮಾರಿ ಆಶಾ ತಪಾಸಣಾ ಕಾರ್ಯಕ್ರಮದಲ್ಲಿ ಸಹಕರಿಸಿದರು.





