‘ಮತದಾನ -ಮತದಾರ’ ಜಾಗೃತಿ ಹಬ್ಬ: ಬೀದಿ ನಾಟಕ ಪ್ರದರ್ಶನ

ಉಡುಪಿ, ಎ.25 : ಉಡುಪಿ ಎಂಜಿಎಂ ಕಾಲೇಜಿನ ಸ್ವೀಪ್ ಸಮಿತಿ ಹಾಗೂ ಆರ್ಟ್ಸ್ ಕ್ಲಬ್ ವತಿಯಿಂದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ಮತದಾನ-ಮತದಾರ’ ಜಾಗೃತಿ ಹಬ್ಬವನ್ನು ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಜಾಗೃತಿ ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಅದರಲ್ಲೂ ಯುವ ಜನತೆ ಮತ್ತು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಬೇಕು. ಮತದಾನ ಮಾಡುವ ಮೂಲಕ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಈ ಪ್ರಜಾಪ್ರಭುತ್ವ ಯಶಸ್ಸು ಆಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಂಚಾಲಕ ಡಾ.ರವೀಂದ್ರ ನಾಥ್ ಶಾನುಭಾಗ್ ಮಾತನಾಡಿ, ಮತದಾನ ನಮ್ಮ ಹಕ್ಕು. ಅಲ್ಲದೆ ನಮ್ಮ ಕರ್ತವ್ಯ ಕೂಡ ಆಗಿದೆ. ಈಗ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಜನರು ಸಮರ್ಥರನ್ನು ಆರಿಸಲು ಕಲಿತಿದ್ದಾರೆ. ನಾವೆಲ್ಲರೂ ತಪ್ಪದೇ ಮತದಾನ ಮಾಡಿ ಆ ಹಕ್ಕನ್ನು ಸಾರ್ಥಕಗೊಳಿಸಬೇಕು ಎಂದು ಹೇಳಿದರು.

ಸ್ವೀಪ್ ಸಮಿತಿ ಹಾಗೂ ಆರ್ಟ್ಸ್ ಕ್ಲಬ್ ಸಂಯೋಜಕ ವಿದ್ಯಾನಾಥ್ ಕೆ. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಉಡುಪಿ ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ., ವಿದ್ಯಾರ್ಥಿ ಕ್ಷೇಮಾ ಪಾಲನಾಧಿಕಾರಿ ಪ್ರೊ. ರಮೇಶ್ ಕಾರ್ಲ, ಐಕ್ಯುಎಸಿಯ ಸಂಯೋಜನಾಧಿಕಾರಿ ಪ್ರೊ.ಶೈಲಜಾ ಎಸ್., ಪ್ರಾಧ್ಯಾಪಕರಾದ ಪ್ರೊ.ಅರುಣ್ ಕುಮಾರ್ ಬಿ., ಡಾ.ಈಶ್ವರ ಭಟ್, ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್, ನರಸಿಂಹ ಮೂರ್ತಿ, ಪ್ರಕಾಶ್ ಜತ್ತನ್ನ, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ್, ನಾಟಕ ತಂಡದ ನಿರ್ದೇಶಕ ರಾಮಾಂಜಿ ನಮ್ಮ ಭೂಮಿ, ಸಂಯೋಜಕಿ ಪಲ್ಲವಿ ಕೊಡಗು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ರಾಮಾಂಜಿ ನಮ್ಮಭೂಮಿ ಅವರ ರಚನೆ ಮತ್ತು ನಿರ್ದೇಶನದ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿ ಎಂಜಿಎಂ ಕಾಲೇಜಿನ ಆರ್ಟ್ಸ್ ಕ್ಲಬ್‍ನ ವಿದ್ಯಾರ್ಥಿಗಳಾದ ಪಲ್ಲವಿ ಕೊಡಗು, ಲತಾ, ಇಶಾನಿ, ಸಾಕ್ಷಿ. ಎಸ್, ಹರ್ಷ ಗೌಡ, ರೋಹಿತ್, ಪ್ರಜ್ವಲ್, ವೈಷ್ಣವಿ ಪೈ, ಜೋಸ್ನ, ವಿಂದ್ಯಾ, ನಿತಿನ್, ಆದಿತ್ಯ, ನಿಖಿಲ್, ಸುಮುಖ, ಪ್ರಶಾಂತ್. ಎಸ್, ಅಜಿತ್, ಸ್ಕಂದ, ವಿನ್ಯಾಸ್ ಪೈ, ರೋಷನ್ ಗೌಡ ಅವರು ನಾಟಕದಲ್ಲಿ ಅಭಿನಯಿಸಿ, ಮತದಾನ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

error: Content is protected !!