ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ : ಕಾಂಗ್ರೆಸ್

ಉಡುಪಿ ಏ.24 : ಕಳೆದ 10 ವರ್ಷಗಳ ಬಿ.ಜೆ.ಪಿ ಆಡಳಿತದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಆದ್ದರಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ಮಾಡಿದ ಅಸಮರ್ಪಕ ಆರ್ಥಿಕ ನೀತಿ, ಜಿ.ಎಸ್.ಟಿ ಮೂಲಕ ತೆರಿಗೆ ಸುಲಿಗೆ, ಅಭಿವೃದ್ಧಿ ಶೂನ್ಯ ವೈಷಮ್ಯದ ಆಡಳಿತದಿಂದ ಜನತೆ ರೋಸಿ ಹೋಗಿದ್ದು ಇದುವೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ. ಈ ಬಾರಿ ಪಕ್ಷ ಸರಳ ಸಜ್ಜನ ಅಭಿವೃದ್ಧಿ ಚಿಂತಕರಾದ ಜಯಪ್ರಕಾಶ್ ಹೆಗ್ಡೆಯವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದು ಪಕ್ಷದ ಕಾರ್ಯಕರ್ತರು ಈ ಬಾರಿ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿರುವುದನ್ನು ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಕೇವಲ 20 ತಿಂಗಳ ಕಾಲ ಹೆಗ್ಡೆಯವರು ಸಂಸದರಾಗಿದ್ದಾಗ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಡಿದ ಹಲವು ಅಭಿವೃದ್ಧಿ ಕಾರ್ಯಗಳು ಇನ್ನೂ ನೆನಪಿನಲ್ಲಿ ಉಳಯುವಂತದ್ದು. ಈ ಹಿನ್ನೆಲೆಯಲ್ಲಿ ಹಿಂದೆ ಮಾಡಿದ ಅಭಿವೃಧ್ಧಿ ಕಾರ್ಯ ನೋಡಿಕೊಂಡು ಜನತೆಯಿಂದ ಬೆಂಬಲದ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದರು.

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶಕ್ಕೆ ಕಾಂಗ್ರೆಸ್ ಆಡಳಿತದ ಅವಶ್ಯಕತೆಯಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ ಬಡತನ ನಿರ್ಮೂಲನ ಹಾಗೂ ಬಡ ಕುಟುಂಬಗಳ ಹಸಿವು ನೀಗಿಸುವುದು. ಅದೇ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಜನಸಾಮಾನ್ಯರಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ. ಬಿ.ಜೆ.ಪಿಯ ಬ್ರಷ್ಟಾಚಾರಗಳೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆ. ಬಿ.ಜೆ.ಪಿ ವಿರುದ್ಧ ಆಡಳಿತ ವಿರೋಧಿ ಅಲೆ ಜೊತೆಗೆ ಅಡುಗೆ ಅನಿಲ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ತೈಲ ಬೆಲೆ ಏರಿಕೆಯ ಆಕ್ರೋಶ ಜನತೆಗಿದೆ. ಇವೆಲ್ಲದರ ನಡುವೆ ಕಾಂಗ್ರೆಸ್ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರಲ್ಲಿ ವಿಶ್ವಾಸ ಮೂಡಿರುವುದರಿಂದ ನಮ್ಮ ಪಕ್ಷಕ್ಕೆ ಅಧಿಕಾರ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿಯನ್ನು ಜಿಲ್ಲೆಯಾಗಿ ಪರಿವರ್ತಿಸಿದ, ಹೆದ್ದಾರಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ, ಸಮುದ್ರಕ್ಕೆ ತಡೆಗೋಡೆ ನಿರ್ಮಿಸಿದ ಮತ್ತು ರೈಲ್ವೇ ಯೋಜನೆಗಳನ್ನು ಜಿಲ್ಲೆಗೆ ತಂದ ಕೀರ್ತಿ ಹೆಗ್ಡೆಯವರಿಗೆ ಸಲ್ಲಬೇಕು. ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ದಿಕ್ಕು ತಪ್ಪಿಸುವ ಶಕ್ತಿಗಳನ್ನು ದೂರವಿಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಕಾಲ ಬಂದಿದೆ. ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದೇ ಜನತೆಗೆ ನಿರಾಸೆ ಮೂಡಿಸಿದ್ದು ಮತದಾರರಿಗೆ ತಮ್ಮ ಸಾಧನೆ ತಿಳಿಸಿ ಮತ ಕೇಳಲಾಗದ ಸ್ಥಿತಿಯಲ್ಲಿದ್ದಾರೆ. ಬಡವರಿಗೆ ಆರ್ಥಿಕ ಶಕ್ತಿ ನೀಡುವ ಸಾಮಾಜಿಕ ಹಾಗೂ ಶೈಕ್ಷಣಿಕ ನೀತಿಗೆ ನೆರವಾಗುವ ಕಾರ್ಯಕ್ರಮಗಳನ್ನು ಕಾಂಗ್ರೆಸ ಮಾತ್ರ ಜಾರಿ ಮಾಡಲು ಸಾಧ್ಯ. ಪಕ್ಷದ ಯೋಜನೆಗಳು ಜನರ ಬದುಕಿಗೆ ಆಸರೆಯಾಗುತ್ತಿವೆ ಎಂದು ತಿಳಿಸಿದರು.

ಕಳೆದ 10 ವರ್ಷಗಳ ಬಿ.ಜೆ.ಪಿ ಆಡಳಿತದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!