ಒಂದೇ ಕಟ್ಟಡದ ವಿವಿಧ ನಕಲಿ ದಾಖಲೆ ಸೃಷ್ಟಿಸಿ 22 ಬ್ಯಾಂಕ್ಗಳಿಂದ ಕೋಟ್ಯಾಂತರ ರೂ. ಸಾಲ : 6 ಮಂದಿ ಬಂಧನ
ಬೆಂಗಳೂರು ಏ.19 : ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 22 ಬ್ಯಾಂಕ್ಗಳಿಗೆ ಸಲ್ಲಿಸಿ 10 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಒಂದೇ ಕುಟುಂಬದ ಐವರ ಸಹಿತ ಒಟ್ಟು ಆರು ಜನ ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಪಾರ್ಟ್ಮೆಂಟ್ ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನಾಗೇಶ್, ಆತನ ಪತ್ನಿ ಸುಮಾ, ಪತ್ನಿಯ ಸಹೋದರಿ ಶೋಭಾ, ಆಕೆಯ ಪತಿ ಸತೀಶ್, ಸುಮಾಳ ಸ್ನೇಹಿತೆ ವೇದಾ ಸೇರಿದಂತೆ ಆರು ಜನರನ್ನು ಬಂಧಿತ ಆರೋಪಿಗಳು.
ಆರೋಪಿಗಳು ನಾಗೇಶ್-ಸುಮಾ ಹೆಸರಿನಲ್ಲಿ ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್ ಮತ್ತು ವಿವಿಧ ಸೈಟ್ ನಂಬರ್ ಗಳನ್ನು , ಸೈಟ್ ಉದ್ದಳತೆಯಲ್ಲಿ ಸಹ ಬದಲಾವಣೆ ಮಾಡುತ್ತಿದ್ದರು. ನಂತರ ಆ ನಕಲಿ ದಾಖಲಾತಿಗಳಿಂದಲೇ ಡೀಡ್ ಮಾಡಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅವುಗಳ ಆಧಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತಿದ್ದರು.
ಈ ಆರೋಪಿಗಳು 2014ರಿಂದಲೂ ವಿವಿಧ ಬ್ಯಾಂಕ್ಗಳಲ್ಲಿ ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು ಒಟ್ಟು 22 ಬ್ಯಾಂಕ್ಗಳಿಂದ ಸುಮಾರು ಹತ್ತು ಕೋಟಿಗೂ ಅಧಿಕ ಸಾಲ ಪಡೆದಿದ್ದರು. ಇದೀಗ ಆರೋಪಿಗಳ ವಿರುದ್ಧ ಇದುವರೆಗೂ ಕೇವಲ ನಾಲ್ಕು ವಿವಿಧ ಬ್ಯಾಂಕ್ ಪ್ರತಿನಿಧಿಗಳು ಮಾತ್ರವೇ ದೂರು ನೀಡಿದ್ದು, ಜಯನಗರ 3ನೇ ಬ್ಲಾಕ್ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್ವೊಂದರ ಮ್ಯಾನೇಜರ್ ನೀಡಿದ್ದ ದೂರಿನನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಪ್ರಕರಣದ 6 ಮಂದಿ ಆರೋಪಿಗಳ ಜಯನಗರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.